ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದೆ. ಹೂವು ಮಾರುತಿದ್ದ 11 ವರ್ಷದ ಬಾಲಕಿಯ ಅಪಹರಿಸಿ ಆಟೋ ಚಾಲಕ ಅತ್ಯಾಚಾರ ಎಸಗಿದ್ದಾನೆ.
ಮಧ್ಯ ದೆಹಲಿಯ ಟ್ರಾಫಿಕ್ ಸಿಗ್ನಲ್ ಗಳಲ್ಲಿ ಗುಲಾಬಿಗಳನ್ನು ಮಾರುತ್ತಿದ್ದ 11 ವರ್ಷದ ಬಾಲಕಿಯನ್ನು ಇ-ರಿಕ್ಷಾ ಚಾಲಕ ಅಪಹರಿಸಿ ಅರಣ್ಯ ಪ್ರದೇಶದಲ್ಲಿ ಅತ್ಯಾಚಾರ ಎಸಗಿ ಪ್ರಜ್ಞಾಹೀನಳಾಗಿದ್ದವಳನ್ನು ಬಿಟ್ಟು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಲವು ಮಾರ್ಗಗಳಲ್ಲಿ ಅಳವಡಿಸಲಾಗಿರುವ ಸುಮಾರು 300 ಸಿಸಿಟಿವಿಗಳ ದೃಶ್ಯಾವಳಿಗಳನ್ನು ವಿಶ್ಲೇಷಿಸಿದ ನಂತರ, ಪೊಲೀಸರು ಸುಮಾರು 40 ವರ್ಷ ವಯಸ್ಸಿನ ಆರೋಪಿ ದುರ್ಗೇಶ್ ನನ್ನು ಬಂಧಿಸಿದ್ದಾರೆ.
ಈ ಘಟನೆ ಜನವರಿ 11 ರಂದು ಪ್ರಸಾದ್ ನಗರ ಪ್ರದೇಶದಲ್ಲಿ ನಡೆದಿದ್ದು, ಅಲ್ಲಿ ಹುಡುಗಿ ಗುಲಾಬಿಗಳನ್ನು ಮಾರುತ್ತಾ ಸಿಗ್ನಲ್ ಲೈಟ್ ಬಳಿ ನಿಂತಿದ್ದಳು. ಪ್ರಯಾಣಿಕರನ್ನು ಇಳಿಸಿದ ನಂತರ ಆರೋಪಿ ತನ್ನ ಇ-ರಿಕ್ಷಾವನ್ನು ಅಲ್ಲಿ ನಿಲ್ಲಿಸಿದ್ದಾನೆ. ಬಾಲಕಿ ಹೂವುಗಳನ್ನು ಮಾರಲು ಅವನ ಬಳಿಗೆ ಬಂದಾಗ, ಎಲ್ಲಾ ಗುಲಾಬಿಗಳನ್ನು ಮಾರಾಟ ಮಾಡಲು ಸಹಾಯ ಮಾಡುವ ಭರವಸೆ ನೀಡಿ ಅವಳಿಗೆ ಆಮಿಷವೊಡ್ಡಿದ್ದಾನೆ. ಅವಳನ್ನು ವಾಹನದೊಳಗೆ ಕೂರಿಸಿಕೊಂಡಿದ್ದಾನೆ.
ಆರೋಪಿ ಬಾಲಕಿಯನ್ನು ಪ್ರೊ. ರಾಮ್ ನಾಥ್ ವಿಜ್ ಮಾರ್ಗ್ ಬಳಿಯ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ನಂತರ ಅವಳು ಮೃತಪಟ್ಟಿದ್ದಾಳೆಂದು ನಂಬಿ ದುರ್ಗೇಶ್ ಓಡಿಹೋಗಿದ್ದಾನೆ. ರಕ್ತಸ್ರಾವವಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಾಲಕಿ ಬಿಟ್ಟು ಹೋಗಿದ್ದಾನೆ ಪೊಲೀಸರು ತಿಳಿಸಿದ್ದಾರೆ.
ಪ್ರಜ್ಞೆ ಮರಳಿದ ನಂತರ, ಹುಡುಗಿ ತನ್ನ ಕುಟುಂಬವನ್ನು ತಲುಪುವಲ್ಲಿ ಯಶಸ್ವಿಯಾದಳು. ರಕ್ತಸಿಕ್ತವಾಗಿದ್ದ ಆಕೆಯ ಸ್ಥಿತಿಯನ್ನು ನೋಡಿ ಗಾಬರಿಗೊಂಡ ಅವರು ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದು ಪೊಲೀಸರಿಗೆ ಮಾಹಿತಿ ನೀಡಿದರು.
ಅಪಹರಣ ಮತ್ತು ಅತ್ಯಾಚಾರದ ಸಂಬಂಧಿತ ವಿಭಾಗಗಳ ಜೊತೆಗೆ ಪೋಕ್ಸೊ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮಗು ತೀವ್ರ ಆಘಾತದಲ್ಲಿದೆ. ಆರಂಭದಲ್ಲಿ ಘಟನೆಗಳ ಅನುಕ್ರಮವನ್ನು ವಿವರಿಸಲು ಸಾಧ್ಯವಾಗಲಿಲ್ಲ, ಇದು ತನಿಖೆಗೆ ಸವಾಲಾಗಿತ್ತು. ಮಗು ಕೊನೆಯದಾಗಿ ಕಾಣಿಸಿಕೊಂಡ ಪ್ರದೇಶ ಮತ್ತು ಕಾಡಿಗೆ ಹೋಗುವ ಮಾರ್ಗಗಳಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.

