ಧರ್ಮಸ್ಥಳ,: ಭಜನಾ ಕಮ್ಮಟಗಳು ಮಾನವನ ವ್ಯಕ್ತಿತ್ವ ರೂಪಿಸುವ ಉತ್ತಮ ವೇದಿಕೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಅಭಿಪ್ರಾಯಪಟ್ಟರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಆಯೋಜಿಸಿರುವ ೨೦೨೫ನೇ ಸಾಲಿನ ಸಪ್ಟೆಂಬರ್ ೧೪ ರಿಂದ ೨೧ರವರೆಗೆ ನಡೆಯಲಿರುವ ೨೭ನೇ ವರ್ಷದ ಭಜನಾ ತರಬೇತಿ ಕಮ್ಮಟದ ೨ನೇ ದಿನದ ಕಾರ್ಯಾಗಾರದಲ್ಲಿ ‘ ಗ್ರಾಮೀಣ ನಾಯಕತ್ವ ಭಜನಾ ಮಂಡಳಿಗಳ ಪಾತ್ರ’ ಎಂಬ ವಿಚಾರದ ಕುರಿತು ಉಪನ್ಯಾಸ ನೀಡಿದರು.
ಇಂದಿನ ಪೀಳಿಗೆ ಸಾಮಾಜಿಕ ಮಾದ್ಯಮದತ್ತ ಒಲವನ್ನು ತೋರುತ್ತಿದ್ದು ಪ್ರಪಂಚದಾದ್ಯAತ ಋಣಾತ್ಮಕ ಚಿಂತನೆಗಳನ್ನು ಸೃಷ್ಟಿಸಿ ಅತ್ಯಮೂಲ್ಯ ಸಮಯದ ವ್ಯರ್ಥಮಾಡುತ್ತಿದೆ.ಈ ಚಿಂತನೆಗಳು ಬದಲಾಗಿ ಯುವಕರು ಧಾರ್ಮಿಕ ಮತ್ತು ಆಧ್ಯಾತ್ಮಿಕತೆಗೆ ಒಲವು ತೋರಿದಾಗ ಭಾರತ ತನ್ನನ್ನು ತಾನು ಶ್ರೇಷ್ಠ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾದ್ಯ.
ಆಧ್ಯಾತ್ಮಿಕ ವಿಚಾರಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಉತ್ತಮ ಆದರ್ಶಗಳು ರೂಪುಗೊಳ್ಳುತ್ತವೆ. ಮಾನವನ ಉತ್ತುಂಗದ ಸಾಧನೆ ಮತ್ತು ಅಧಃಪತನ ಇವೆರಡೂ ನಿರ್ಧಾರಗೊಳ್ಳುವುದು ಆತನ ಸ್ವಭಾವ ಅಥವಾ ವ್ಯಕ್ತಿತ್ವದಿಂದ ಮಾತ್ರ ಎಂದು ಹೇಳಿದರು.
ಜೀವನದಲ್ಲಿ ಒಳಿತನ್ನು ಉತ್ತುಂಗಕ್ಕೆ, ಕೆಡುಕನ್ನ ಮಿತಕ್ಕೆ ಕೊಂಡೊಯ್ಯುವ ಪ್ರಯತ್ನ ನಮ್ಮ ಕೈಯಲ್ಲೇ ಇದೆ.ನಮ್ಮೆಲ್ಲರ ಹಣೆಬರಹ ನಮ್ಮ ಅಂಗೈಯಲ್ಲಿದೆ.ಹಣೆಬರಹ ಬದಲಾಯಿಸಲು ಸಾಧ್ಯವಾಗದಿದ್ದರೂ,ಅದನ್ನು ಏರಿಸುವ ಮತ್ತು ಇಳಿಸುವ ಪ್ರಯತ್ನ ನಮ್ಮೆಲ್ಲರಿಂದ ಸಾಧ್ಯವಿದೆ.ನೈತಿಕ ವಿಚಾರಗಳನ್ನು ಅನುಸರಿಸಿದರೆ ಜೀವನದಲ್ಲಿ ಯಶಸ್ಸು ಸಾಧ್ಯ.
ಉತ್ತಮ ಜೀವನವನ್ನು ನಿರ್ಧರಿಸುವ ಮೂಲಮಂತ್ರವೇ ಆಲೋಚನೆ,ಮಾನವ ಜೀವನದಲ್ಲಿ ಯಶಸ್ಸು ಅಥವಾ ಅವನತಿಗೆ ಆಲೋಚನೆಗಳೇ ಕಾರಣ.ಆಲೋಚನೆಗಳು ಹವ್ಯಾಸವಾಗಿ ನಮ್ಮ ಚಾರಿತ್ರ‍್ಯವನ್ನು ನಿರ್ಧರಿಸುತ್ತವೆ ಮತ್ತು ಚಾರಿತ್ರ‍್ಯವು ಭವಿಷ್ಯವನ್ನು ರೂಪಿಸುತ್ತದೆ.ನಮ್ಮ ಆಲೋಚನೆಗಳು ರಚನಾತ್ಮಕವಾಗಿದಷ್ಟು ಜಗತ್ತಿನಲ್ಲಿ ಸಾಧನೆಗೆ ದಾರಿಗಳು ತೆರೆದುಕೊಳ್ಳುತ್ತವೆ ಎಂದರು.
ಜೀವನದಲ್ಲಿ ಯಶಸ್ಸು ಕಂಡ ವ್ಯಕ್ತಿತ್ವಗಳ ಸಾಧನೆಯ ಗುಟ್ಟೇ ಅವರ ಪರಿಶ್ರಮ ಮತ್ತು ಧನಾತ್ಮಕ ಆಲೋಚನೆಗಳು.ಇದಕ್ಕೆ ನಿದರ್ಶನವೆಂಬAತೆ ಶ್ರೀ ಕ್ಷೇತ್ರದ ಧರ್ಮಾಧಿಕಾರಿಗಳ ದೃಷ್ಟಿಕೋನ ಮತ್ತು ಬೃಹತ್ ಆಲೋಚನೆಗಳು ಸಮಾಜದಲ್ಲಿ ಉತ್ತಮ ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಗಳನ್ನು ಮಾಡಲು ಸಾಧ್ಯವಾಗಿದೆ ಎಂದು ನುಡಿದರು.
ಕಾರ್ಯಕ್ರಮದ ಗೌರವ ಉಪಸ್ಥಿತಿಯನ್ನು ವಹಿಸಿದ ಬೆಳ್ತಂಗಡಿಯ ವಾಣಿ ಶಿಕ್ಷಣ ಸಂಸ್ಥೆಯ ಗೌರವಾಧ್ಯಕ್ಷ ಪದ್ಮ ಗೌಡ ಮಾತನಾಡಿದರು.ದೇವಾಲಯಗಳ ಅಭಿವೃದ್ಧಿಗೆ ಧಾರ್ಮಿಕ ಪ್ರಜ್ಞೆ ಅತೀ ಮುಖ್ಯ.ಜೀವನದ ಆಂತರಿಕ ಮತ್ತು ಬಾಹ್ಯ ಸರ್ವ ಸಂಸ್ಥೆಗಳಿಗೂ ಮನ:ಶಾಂತಿ ತಂದುಕೊಡಬಲ್ಲ ಶಕ್ತಿ ಕೇವಲ ಧ್ಯಾನ ಮತ್ತು ಭಜನೆಗಳಿಂದ ಸಾಧ್ಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾಣಿಲ ಶ್ರೀಧಾಮ,ಶ್ರೀ ಮಹಾಲಕ್ಷ್ಮೀ ಸೇವಾ ಪ್ರತಿಷ್ಠಾನದ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ದಿವ್ಯಸಾನಿದ್ಯ ವಹಿಸಿದ್ದರು. ಶ್ರೀ ಕ್ಷೇತ್ರ ಭಜನಾ ಕಮ್ಮಟದ ಕೋಶಾಧಿಕಾರಿ ಪದ್ಮರಾಜ್ ಜೈನ್ ಕಾರ್ಯಕ್ರಮನಿರ್ವಹಿಸಿದರು.