ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಕಾನೂನು ವಿವಿ ಮತ್ತು ಆಳ್ವಾಸ್ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ 2ನೇ ವಲಯ ಮಟ್ಟದ ಕಾನೂನು ತರಬೇತಿ ಹಾಗೂ ಸಂವಾದ ಕಾರ್ಯಕ್ರಮ

0
3

ಮಂದಾರ ರಾಜೇಶ್ ಭಟ್

​ ನ್ಯಾಯದ ಹಾದಿಯಲ್ಲಿ ಹೊಸ ಹೆಜ್ಜೆ

​ಕಾನೂನು ಎಂಬುದು ಕೇವಲ ಕಪ್ಪು ಕೋಟು ಮತ್ತು ನ್ಯಾಯಾಲಯದ ಕೋಣೆಗಳಿಗೆ ಸೀಮಿತವಾದುದಲ್ಲ; ಅದು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕಾದ ಸಂಜೀವಿನಿ. ಈ ಆಶಯವನ್ನು ಸಾಕಾರಗೊಳಿಸಲು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯ (ಹುಬ್ಬಳ್ಳಿ) ಹಾಗೂ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಜಂಟಿ ಆಶ್ರಯದಲ್ಲಿ ಏಪ್ರಿಲ್ 13, 2026 ರಂದು ಬೆಳಿಗ್ಗೆ 10 ಗಂಟೆಗೆ ಒಂದು ದಿನದ ವಿಶೇಷ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.

ಮೂಡುಬಿದಿರೆಯ ಆಳ್ವಾಸ್ ಕ್ಯಾಂಪಸ್‌ನ ಡಾ. ವಿ.ಎಸ್. ಆಚಾರ್ಯ ಸಭಾಂಗಣ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ.

​ಕ್ಲಾಸ್ ರೂಮಿನಿಂದ ಕೋರ್ಟ್ ರೂಮ್ ವರೆಗೆ

​ಈ ಕಾರ್ಯಕ್ರಮದ ಅತ್ಯಂತ ಆಕರ್ಷಕ ವಿಷಯವೇ “ಕ್ಲಾಸ್ ರೂಮಿನಿಂದ ಕೋರ್ಟ್ ರೂಮ್ ವರೆಗೆ”. ಎನ್ನುವ ಘೋಷ ವಾಕ್ಯ

ವಿದ್ಯಾರ್ಥಿಗಳು ಕೇವಲ ತರಗತಿಯ ಪಠ್ಯಕ್ಕೆ ಸೀಮಿತವಾಗದೆ, ನ್ಯಾಯಾಲಯದ ವಾಸ್ತವಿಕ ಜಗತ್ತನ್ನು ಅರ್ಥೈಸಿಕೊಳ್ಳಬೇಕು ಎಂಬುದು ಇದರ ಮುಖ್ಯ ಉದ್ದೇಶ. ಈ ಘೋಷವಾಕ್ಯವು ಕಾನೂನು ವಿದ್ಯಾರ್ಥಿಗಳಲ್ಲಿ ಹೊಸ ಚೈತನ್ಯವನ್ನು ತುಂಬಿಲಿದ್ದು, ಅವರು ಕೇವಲ ವಕೀಲರಾಗುವ ಕನಸು ಕಾಣದೆ, ಸಮಾಜದ ಬದಲಾವಣೆಯ ಹರಿಕಾರರಾಗಿ ರೂಪುಗೊಳ್ಳಲು ಈ ವೇದಿಕೆ ಸಜ್ಜಾಗಿದೆ.

​ಕಾನೂನು ವಿದ್ಯಾರ್ಥಿಗಳಿಂದ ಸಾಮಾಜಿಕ ನ್ಯಾಯ ಮತ್ತು ಸೇವೆ

​ಒಬ್ಬ ಕಾನೂನು ವಿದ್ಯಾರ್ಥಿ ಸಮಾಜದ ನಾಡಿಮಿಡಿತವನ್ನು ಅರಿತಾಗ ಮಾತ್ರ ಸಾಮಾಜಿಕ ನ್ಯಾಯ ಸಾಧ್ಯ. ಈ ಕಾರ್ಯಕ್ರಮವು “ಸಾಮಾಜಿಕ ನ್ಯಾಯಕ್ಕಾಗಿ ಕಾನೂನು ವಿದ್ಯಾರ್ಥಿಗಳು ಪ್ರೇರಕಶಕ್ತಿಗಳು” ಎಂಬ ವಿಷಯದ ಮೇಲೆ ಬೆಳಕು ಚೆಲ್ಲಲಿದೆ.

ಅಗತ್ಯ ಇದ್ದವರಿಗೆ ಉಚಿತ ಕಾನೂನು ನೆರವು ನೀಡುವುದು, ಕಾನೂನು ಅರಿವು ಮೂಡಿಸುವ ಶಿಬಿರಗಳನ್ನು ಆಯೋಜಿಸುವುದು ಮತ್ತು ತುಳಿತಕ್ಕೊಳಗಾದವರ ಧ್ವನಿಯಾಗುವುದು ಹೇಗೆ ಎಂಬುದರ ಬಗ್ಗೆ ಇಲ್ಲಿ ತರಬೇತಿ ನೀಡಲಾಗುತ್ತದೆ.

ವಿದ್ಯಾರ್ಥಿಗಳು ಸಮಾಜ ಸೇವೆಯನ್ನು ತಮ್ಮ ವೃತ್ತಿಯ ಅವಿಭಾಜ್ಯ ಅಂಗವಾಗಿಸಿಕೊಳ್ಳಲು ಈ ಸಂವಾದವು ಪ್ರೇರೇಪಿಸುತ್ತದೆ.

​ತಜ್ಞರ ಮಾರ್ಗದರ್ಶನ ಮತ್ತು ಸಂವಾದ

​ಕರ್ನಾಟಕ ಹೈಕೋರ್ಟ್‌ನ ಗೌರವಾನ್ವಿತ ನ್ಯಾಯಮೂರ್ತಿಗಳು, ಜಿಲ್ಲಾ ನ್ಯಾಯಾಧೀಶರುಗಳು, ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು, ತಾಲೂಕು ಕಾನೂನು ಸೇವೆಗಳ ಅಧ್ಯಕ್ಷರು ಹಾಗೂ ಕಾನೂನು ತಜ್ಞರ ಸಮ್ಮುಖದಲ್ಲಿ ನಡೆಯುವ ಈ ಕಾರ್ಯಾಗಾರದಲ್ಲಿ, ಕಾನೂನು ಸೇವೆಗಳ ಕಾಯ್ದೆ ಮತ್ತು ಮಹತ್ವ ಹಾಗೂ ಕಾಲೇಜುಗಳಲ್ಲಿ ಕಾನೂನು ಕ್ಲಿನಿಕ್‌ಗಳ ಸ್ಥಾಪನೆಯ ಬಗ್ಗೆ ಸುದೀರ್ಘ ಚರ್ಚೆ ನಡೆಯಲಿದೆ.

ವಿದ್ಯಾರ್ಥಿಗಳಿಗೆ ತಜ್ಞರೊಂದಿಗೆ ನೇರವಾಗಿ ಸಂವಾದ ನಡೆಸಲು ಮುಕ್ತ ಅವಕಾಶವಿದ್ದು, ಇದು ಅವರ ವೃತ್ತಿಜೀವನದ ಜ್ಞಾನವನ್ನು ಹೆಚ್ಚಿಸುವುದರಲ್ಲಿ ಸಹಕಾರಿಯಾಗಲಿದೆ


​ನ್ಯಾಯದಾನ ಪ್ರಕ್ರಿಯೆಯಲ್ಲಿ ಯುವ ಶಕ್ತಿಯ ಪಾಲ್ಗೊಳ್ಳುವಿಕೆ ದೇಶದ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುತ್ತದೆ. ಆಳ್ವಾಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆಯಲಿರುವ ಈ 2ನೇ ವಲಯ ಮಟ್ಟದ ಕಾರ್ಯಕ್ರಮವು, ಕಾನೂನು ವಿದ್ಯಾರ್ಥಿಗಳನ್ನು ಕೇವಲ ವೃತ್ತಿಪರರನ್ನಾಗಿ ಮಾಡುವುದಲ್ಲದೆ, ಮಾನವೀಯ ಮೌಲ್ಯವುಳ್ಳ ಸಮಾಜ ಸೇವಕರನ್ನಾಗಿ ಪರಿವರ್ತಿಸುವಲ್ಲಿ ಮಹತ್ವದ ಮೈಲಿಗಲ್ಲಾಗಲಿದೆ.

LEAVE A REPLY

Please enter your comment!
Please enter your name here