ಬನ್ನಡ್ಕದಲ್ಲಿ 4ನೇ ವರ್ಷದ ಶಾರದೋತ್ಸವ: ಡಾ. ಎಂ. ಮೋಹನ ಆಳ್ವರಿಗೆ ‘ಶ್ರೀ ಶಾರದಾರತ್ನ ಪ್ರಶಸ್ತಿ’ ಪ್ರದಾನ

0
50

ಮೂಡುಬಿದಿರೆ: ಸಾರ್ವಜನಿಕ ಶ್ರೀ ಶಾರದೋತ್ಸವ ಟ್ರಸ್ಟ್ ಬನ್ನಡ್ಕದ ಆಶ್ರಯದಲ್ಲಿ ಶ್ರೀ ಕ್ಷೇತ್ರ ಬನ್ನಡ್ಕದ ಕಲಾಮಂದಿರದಲ್ಲಿ ನಡೆದ 4ನೇ ವರ್ಷದ ಶಾರದೋತ್ಸವದ ಸಭಾ ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವರಿಗೆ ಗುರುವಾರ ‘ಬನ್ನಡ್ಕ ಶ್ರೀ ಶಾರದಾರತ್ನ ಪ್ರಶಸ್ತಿ-2025’ ಅನ್ನು ಪ್ರದಾನ ಮಾಡಲಾಯಿತು.

ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಆಶೀರ್ವಚನ ನೀಡಿ, “ನಾವು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಮನುಷ್ಯತ್ವ ಮತ್ತು ಪ್ರೀತಿ ಯಾವುದೇ ಕಾರ್ಯಕ್ರಮಗಳ ಮೂಲ ಉದ್ದೇಶವಾಗಬೇಕು. ಬನ್ನಡ್ಕ ಶಾರದೋತ್ಸವ ಸಮಿತಿ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುವುದರ ಜೊತೆಗೆ ಶೈಕ್ಷಣಿಕ ಸೇವೆ ಮಾಡುತ್ತಿರುವುದು ಉತ್ತಮ ಬೆಳವಣಿಗೆ. ಕನ್ನಡ ಶಾಲೆಗಳು ಆತ್ಮಶಕ್ತಿಯನ್ನು ನೀಡುವಂತಹ ಶಿಕ್ಷಣವನ್ನು ಕೊಡುತ್ತವೆ” ಎಂದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಎಂ. ಮೋಹನ ಆಳ್ವ “ದೇವರು ಸಮಾಜ ಚಿಂತನೆ ಮತ್ತು ಸೌಹಾರ್ದತೆಯ ಮನಸ್ಸನ್ನು ಕೊಟ್ಟಿದ್ದಾರೆ.

ಸಮಾಜದ ಪರಿಕಲ್ಪನೆಯಲ್ಲಿ ಬಾಳುವಂತಾಗಬೇಕು” ಎಂದರು. ಶಾಸಕ ಉಮಾನಾಥ ಕೋಟ್ಯಾನ್ ಮುಖ್ಯ ಅತಿಥಿಯಾಗಿ ಮಾತನಾಡಿ, “ಕಳೆದ ನಾಲ್ಕು ವರ್ಷಗಳಿಂದ ಬನ್ನಡ್ಕದಲ್ಲಿ ಶಿಸ್ತು ಹಾಗೂ ವ್ಯವಸ್ಥಿತ ರೀತಿಯಲ್ಲಿ ಶಾರದೋತ್ಸವ ಆಯೋಜಿಸುತ್ತಿರುವುದು ಮಾದರಿಯಾಗಿದೆ. ಉತ್ತಮ ಧಾರ್ಮಿಕ ಸಭೆಗಳಿಂದ ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ತತ್ವಗಳು ಪಸರಿಸುತ್ತವೆ” ಎಂದರು. ಸಮಿತಿಯ ಅಧ್ಯಕ್ಷ ಎಂ. ದಯಾನಂದ ಪೈ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಎಂ. ಸುದರ್ಶನ್, ಕೆಎಂಎಫ್ ನಿರ್ದೇಶಕ ಸುಚರಿತ ಶೆಟ್ಟಿ ಮೂಡುಬಿದರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ, ಯೋಗಿ ಸುಧಾಕರ ತಂತ್ರಿ, ಶ್ರೀ ಕ್ಷೇತ್ರ ಬನ್ನಡ್ಕದ ಆಡಳಿತ ಮೊಕ್ತಸರ ಸುಕುಮಾರ್ ಬಲ್ಲಾಳ್, ಎಸ್‌ಕೆಎಫ್ ಎಲಿಕ್ಸರ್ ಸಂಸ್ಥೆಯ ಪ್ರಜ್ವಲ್ ಆಚಾರ್ಯ, ಮೂಡುಬಿದಿರೆ ಗಣೇಶೋತ್ಸವ ಟ್ರಸ್ಟ್ ಅಧ್ಯಕ್ಷ ನಾರಾಯಣ ಪಿ.ಎಂ, ನ್ಯೂ ವೈಬ್ರೆಂಟ್ ಕಾಲೇಜಿನ ಟ್ರಸ್ಟಿ ಶರತ್ ಗೋರೆ, ಉದ್ಯಮಿ ಕೆ. ಶ್ರೀಪತಿ ಭಟ್, ಕೆ. ಅಮರನಾಥ ಶೆಟ್ಟಿ ಟ್ರಸ್ಟ್‌ನ ಟ್ರಸ್ಟಿ ಅಮರಶ್ರೀ ಶೆಟ್ಟಿ ಉದ್ಯಮಿ ಬೋಳ ವಿಶ್ವನಾಥ್ ಕಾಮತ್, ಮೂಳೆ ಚಿಕಿತ್ಸಾ ತಜ್ಞ ಡಾ. ಉಜ್ವಲ್ ಯು. ಸುವರ್ಣ, ನರಸಿಂಹ ಕಾಮತ್ ಸಾಣೂರು, ಮಧ್ವರಾಜ್ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು.

ಸಮಿತಿಯ ಪ್ರಧಾನ ಕಾರ್ಯದರ್ಶಿ ಸೂರಜ್ ಜೈನ್ ಮಾರ್ನಾಡ್, ಕೋಶಾಧಿಕಾರಿ ಸಂತೋಷ್ ನಾಯ್ಕ ಬನ್ನಡ್ಕ ಪದಾಧಿಕಾರಿಗಳು, ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ವೇಣುಗೋಪಾಲ್ ಶೆಟ್ಟಿ ನಿರೂಪಿಸಿದರು. ವೈಭವದ ಶಾರದೋತ್ಸವ: ವೇ. ಮೂ. ಎಂ. ಆ‌ರ್. ಅನಂತ ಪದ್ಮನಾಭ ಅವರ ಪೌರೋಹಿತ್ಯದಲ್ಲಿ ಎರಡು ದಿನಗಳ ಕಾಲ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಬುಧವಾರ ಉದ್ಯಮಿ ರಾಜೇಂದ್ರ ಜೈನ್ ಅವರು ಶಾರದಾಂಬೆಯ ಪ್ರತಿಷ್ಠಾಪನೆ ಮಾಡಿದರು. ಎಸ್‌ಕೆಎಫ್ ಎಲಿಕ್ಸರ್ ಆಡಳಿತ ನಿರ್ದೇಶಕ ರಾಮಕೃಷ್ಣ ಆಚಾರ್ಯ ಅವರು ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳನ್ನು ಸಹ ಆಯೋಜಿಸಲಾಗಿತ್ತು.

LEAVE A REPLY

Please enter your comment!
Please enter your name here