ಬಜ್ಪೆ : ಮದರಸದಿಂದ ಮನೆಗೆ ತೆರಳುತ್ತಿದ್ದ ಬಾಲಕ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ ಘಟನೆ ಬಜ್ಪೆ ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಸೌಹಾರ್ದ ನಗರದಲ್ಲಿ ನಡೆದಿದೆ. ಸೌಹಾರ್ದ ನಗರದ ನಿವಾಸಿ ಮುಹಮ್ಮದ್ ಅಝರ್ ಅವರ ಪುತ್ರ ಅಹಿಲ್ ಗಾಯಗೊಂಡ ಬಾಲಕ ಎಂದು ತಿಳಿದು ಬಂದಿದೆ.
ಇಂದು ಬೆಳಗ್ಗೆ ಸುಮಾರು 7:30 ಕ್ಕೆ ಬಜಪೆ ಸೌಹಾರ್ದ ನಗರ ಎಂಬಲ್ಲಿ ಅಹಿಲ್ ಮದರಸ ದಿಂದ ಮನೆಗೆ ಹಿಂತಿರುಗುವಾಗ ಬೀದಿ ನಾಯಿ ಬಂದು ಆತನ ಮೇಲೆ ತೀವ್ರವಾಗಿ ದಾಳಿ ಮಾಡಿದೆ. ಬೀದಿ ನಾಯಿಗಳ ದಾಳಿಗೆ ಮಗುವಿನ ಕೆನ್ನೆ, ಕೈಗೆ ಕಚ್ಚಿ ಗಂಭೀರ ಗಾಯಗಳಾಗಿದೆ. ಘಟನೆ ಮನೆಯ ಮುಂಭಾಗದ ರಸ್ತೆಯಲ್ಲಿ ನಡೆದಿದ್ದ ಪರಿಣಾಮ ಬಾಲಕನ ಬೊಬ್ಬೆ ಕೇಳಿ ಹೊರಬಂದ ತಾಯಿ ಪುತ್ರನನ್ನು ರಕ್ಷಿಸಿದ್ದಾರೆ. ತಕ್ಷಣವೇ ಬಜ್ಪೆ ಸರಕಾರಿ ಆಸ್ಪತ್ರೆಗೆ ದಾಖಲಿಸಿದರು. ಹೆಚ್ಚಿನ ಚಿಕಿತ್ಸೆಗಾಗಿ ಕಟೀಲಿನ ದುರ್ಗ ಸಂಜೀವಿನಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಈ ಸಂಬಂಧ ಮಾತನಾಡಿದ ಬಾಲಕನ ಮಾವ ಮುಹಮ್ಮದ್ ಮುಝಮ್ಮಿಲ್, ಬೀದಿನಾಯಿಗಳ ಕಾಟ ಮತ್ತು ದಾಳಿಯಿಂದ ರಕ್ಷಣೆ ನೀಡುವಂತೆ ಕಳೆದ ಮೂರು ವರ್ಷಗಳಿಂದ ಕಂದಾವರ ಗ್ರಾಮ ಪಂಚಾಯತ್ ಗೆ ಮನವಿ ಸಲ್ಲಿಸುತ್ತಾ ಬಂದಿದೇವೆ. ಆದರೆ ಈವರೆಗೂ ಯಾವುದೇ ಕ್ರಮವಹಿಸಿಲ್ಲ. ಕೇಳಿದರೆ ಬೀದಿ ನಾಯಿಗಳನ್ನು ಕೊಲ್ಲದಂತೆ ನ್ಯಾಯಾಲಯದ ಆದೇಶ ಇದೆ ಎಂದು ಹೇಳುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

