ಮೂಡುಬಿದಿರೆ: ನವೆಂಬರ್ 1, 2025ರಂದು ರೋಟರಿ ವಿದ್ಯಾ ಸಂಸ್ಥೆಯಲ್ಲಿ 69ನೇ ಕನ್ನಡ ರಾಜ್ಯೋತ್ಸವವು ಅದ್ಧೂರಿಯಾಗಿ, ಅರ್ಥಪೂರ್ಣವಾಗಿ ಆಚರಿಸಲಾಯಿತು.
ಅಮರಾವತಿ ಸಭಾಂಗಣವು ಕೆಂಪು-ಹಳದಿ ತೋರಣಗಳಿಂದ ಕಂಗೊಳಿಸಿ , ಬ್ಯಾಂಡ್ ವಾದ್ಯಗಳ ಉದ್ಘೋಷ ನಾಡು-ನುಡಿಯ ವೈಭವವು ಅಮರಾವತಿ ಸಭಾಂಗದಲ್ಲಿ ಪ್ರತಿಧ್ವನಿಸಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರೋಟರಿ ವಿದ್ಯಾಸಂಸ್ಥೆಯ ಅಧ್ಯಕ್ಷ ನಾರಾಯಣ್ ಪಿ.ಎಂ. ಅವರು ಮಾತನಾಡಿ “ಕನ್ನಡ ನಾಡು ನುಡಿ ನಮ್ಮ ಹೆಮ್ಮೆ, ಕನ್ನಡ ನಿತ್ಯೋತ್ಸವವಾಗಲಿ,ಪ್ರತಿಯೊಬ್ಬ ವಿದ್ಯಾರ್ಥಿಯ ಹೃದಯದಲ್ಲಿ ನಾಡು – ನುಡಿ ಧ್ವನಿಸಲಿ ” ಎಂದು ಹೇಳಿದರು.
ಈ ಕಾರ್ಯಕ್ರಮವು ರಾಷ್ಟ್ರಧ್ವಜಾರೋಹಣ, ದೀಪಪ್ರಜ್ವಲನ , ಭುವನೇಶ್ವರಿ ತಾಯಿಗೆ ಪುಷ್ಪ ನಮನ , ಕನ್ನಡ ನುಡಿನಮನ , ಶಾಲಾ ವಾರ್ಷಿಕ ಸಂಚಿಕೆ ಸೃಷ್ಟಿಯ ಬಿಡುಗಡೆ ಮೊದಲಾದ ಕಾರ್ಯಕ್ರಮಗಳನ್ನು ಒಳಗೊಂಡಿತ್ತು
ಈ ಸಂದರ್ಭದಲ್ಲಿ ಎಲ್ಲಾ ವಿದ್ಯಾರ್ಥಿಗಳು ಶತಕ ತುಂಬಿದ ನಮ್ಮ ನಾಡಗೀತೆಯನ್ನು ಪ್ರಾರ್ಥನೆಯಾಗಿ ಹಾಡಿದರು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿಭಾಗದಲ್ಲಿ ಕನ್ನಡ ವಿಷಯದಲ್ಲಿ ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ “ಕನ್ನಡ ರತ್ನ ಪ್ರಶಸ್ತಿ” ನೀಡಿ ಗೌರವಿಸಲಾಯಿತು.
ಇದನ್ನು ಶ್ರೀ ಡೀಲನ್ ಮಸ್ಕರೇನಸ್ ನಿರ್ವಹಿಸಿದರು.
ಆಳ್ವಾಸ್ ಪದವಿಪೂರ್ವ ಕಾಲೇಜಿನ ಉಪ ಪ್ರಾಚಾರ್ಯ ಹಾಗು ಖ್ಯಾತ ವಾಗ್ಮಿ ವೇಣುಗೋಪಾಲ ಶೆಟ್ಟಿ ಮುಖ್ಯ ಅತಿಥಿಯಾಗಿ ಮಾತನಾಡಿ, “ಕನ್ನಡ ಭಾಷೆಯ ವೈಶಿಷ್ಟ್ಯ, ಕರ್ನಾಟಕ ರಾಜ್ಯದ ಹುಟ್ಟು , ಇತಿಹಾಸ ಹಾಗೂ ಕನ್ನಡದ ಶಾಸನಗಳನ್ನು ವಿವರಿಸುತ್ತಾ , ಇಲ್ಲಿನ ಕವಿ ಪರಂಪರೆಯನ್ನು ಹಾಗೂ ತುಳುನಾಡಿನ ನಂಟನ್ನು ಕೊಂಡಾಡಿದರು. ಮಾತೃಭಾಷೆ ಯಾವುದೇ ಇರಲಿ , ಕನ್ನಡ ನಮ್ಮ ನೆಲದ ಭಾಷೆ ಎಂದು ತನ್ನ ಅಪಾರ ಅನುಭವವನ್ನು ಅಭಿವ್ಯಕ್ತಿ ಪಡಿಸುತ್ತಾ ಕನ್ನಡಿಗರಾದ ನಮ್ಮೆಲ್ಲರ ಸ್ಮೃತಿಯಲ್ಲಿ ಕನ್ನಡ ಸಂಸ್ಕೃತಿ ಇದೆ ಎಂದರು. ನಮ್ಮ ಬದುಕಿನಲ್ಲಿ ಈ ನೆಲ, ಜಲ, ಗಾಳಿಯ ಹಾಗೆ ಕನ್ನಡ ಭಾಷೆ ಸಮ್ಮಿಳಿತಗೊಂಡಿದೆ. ಈ ಪರಂಪರೆಯನ್ನು ಉಳಿಸುವ ಬೆಳೆಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿ ಕಾರ್ಯಕ್ರಮವನ್ನು ಶ್ಲಾಘಿಸಿದರು.
ರೋಟರಿ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ಎ. ಕೆ .ರಾವ್ ಮಾತನಾಡಿ ರಾಜ್ಯೋತ್ಸವದಂತಹ ಉತ್ಸವದ ಆಚರಣೆಯ ಜವಾಬ್ದಾರಿ ತಲೆತಲಾಂತರಗಳಿಂದ ಬಂದಿದ್ದು ಹೀಗೆಯೇ ಮುಂದುವರಿಯಬೇಕು.. ಭಾಷೆಗಳಲ್ಲಿ ಯಾವುದೇ ತಾರತಮ್ಯ ಇಲ್ಲದೆ , ಕನ್ನಡ ಭಾಷೆಯನ್ನು ಗೌರವಿಸಿ ಪ್ರೀತಿಯಿಂದ ಕಾಣೋಣ..” . ಎಂದು ಹೇಳಿ ಕನ್ನಡ ರತ್ನ ಪ್ರಶಸ್ತಿ ಸ್ವೀಕರಿಸಿದ ಮಕ್ಕಳನ್ನು ಅಭಿನಂದಿಸಿದರು.
ಈ ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆಯ ಸಂಚಾಲಕರಾದ ಪ್ರವೀಣ್ ಚಂದ್ರ ಜೈನ್ , ಕೇಂದ್ರೀಯ ಶಾಲಾ ಪ್ರಾಚಾರ್ಯೆ ಲಕ್ಷ್ಮೀ ಮರಾಠೆ , ಶಾಲಾ ಆಡಳಿತಾಧಿಕಾರಿ, ವ್ಯವಸ್ಥಾಪಕರು, ಶಾಲೆಯ ವಿವಿಧ ವಿಭಾಗದ ಸಂಯೋಜಕರು, ಬೋಧಕ ಭೋಧಕೇತರ ಸಿಬ್ಬಂದಿ, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ತಿಲಕಾ ಅನಂತವೀರ ಜೈನ್ ಅತಿಥಿಗಳನ್ನು ಸ್ವಾಗತಿಸಿ , ಶಿಕ್ಷಕ ಮೋಹನ್ ಹೊಸ್ಮಾರು ಅತಿಥಿಗಳನ್ನು ಪರಿಚಯಿಸಿ, ರೋಟರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ರವಿಕುಮಾರ್ ಧನ್ಯವಾದ ಸಲ್ಲಿಸಿದರು. ಶಿಕ್ಷಕಿಯರಾದ ಶ್ರೀಮತಿ ಲಕ್ಷ್ಮಿ ಮತ್ತು ಶ್ರೀಮತಿ ರೂಪಾ ಕಾರ್ಯಕ್ರಮ ನಿರೂಪಿಸಿದರು.

