ಅಮರಾವತಿ: ಮಾವು ತುಂಬಿದ್ದ ಟ್ರಕ್ ಪಲ್ಟಿಯಾಗಿ 9 ಮಂದಿ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಪುಲ್ಲಂಪೇಟೆ ಮಂಡಲದ ರೆಡ್ಡಿಚೆರುವು ಕಟ್ಟಾ ಬಳಿ ಈ ಘಟನೆ ನಡೆದಿದೆ. ಘಟನೆಯಲ್ಲಿ 11 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮಾವಿನ ಟ್ರಕ್ ಮೇಲೆ 20ಕ್ಕೂ ಅಧಿಕ ಮಂದಿ ಕುಳಿತುಕೊಂಡಿದ್ದರು. ಘಟನೆ ನಡೆದಾಗ ಎಲ್ಲರೂ ರಾಜಂಪೇಟೆಯಿಂದ ಕೊಡೂರಿಗೆ ಪ್ರಯಾಣಿಸುತ್ತಿದ್ದರು. ಭಾನುವಾರ ರಾತ್ರಿ 9.30ರ ಸುಮಾರಿಗೆ ಅಪಘಾತ ಸಂಭವಿಸಿದೆ. ಲಾರಿಯ ಹಿಂದಿನ ಚಕ್ರ ಮರಳಿನಲ್ಲಿ ಸಿಲುಕಿಕೊಂಡು ಸಮತೋಲನ ಕಳೆದುಕೊಂಡು ಮಿನಿ ಟ್ರಕ್ ಮೇಲೆ ಬಿದ್ದಾಗ ಇದು ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಘಟನೆ ಕುರಿತು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಸಂತಾಪ ಸೂಚಿಸಿದ್ದು, ಅಪಘಾತದ ಕಾರಣದ ಬಗ್ಗೆ ಅಧಿಕಾರಿಗಳ ಬಳಿ ಮಾತನಾಡಿದ್ದಾರೆ. ಗಾಯಗೊಂಡವರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ ಎಂದಿದ್ದಾರೆ.
ಮೃತರ ಕುಟುಂಬಗಳಿಗೆ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಸಿಎಂ ಚಂದ್ರಬಾಬು ಭರವಸೆ ನೀಡಿದರು. ಅಪಘಾತದಲ್ಲಿ ಗಾಯಗೊಂಡವರಿಗೆ ಗುಣಮಟ್ಟದ ವೈದ್ಯಕೀಯ ಆರೈಕೆಯನ್ನು ಖಚಿತಪಡಿಸಿಕೊಳ್ಳುವಂತೆ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು ಎಂದು ಸಿಎಂಒ ತಿಳಿಸಿದೆ.