ವಿಜಯಪುರ : ಜಿಲ್ಲೆಯ ಇಂಡಿ ತಾಲೂಕಿನ ಮಿರಗಿ ಗ್ರಾಮದಲ್ಲಿ ತಾಯಿಯೊಬ್ಬಳು ತನ್ನ ಮೂವರು ಪುಟ್ಟ ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರು ಘಟನೆ ಸಂಭವಿಸಿದೆ.
ಮಿರಗಿ ಗ್ರಾಮದ ನಿವಾಸಿ ರಾಜಶ್ರೀ ಶಂಕ್ರಪ್ಪ ಹಳ್ಳೂರ (28) ಎಂಬಾಕೆಯೇ ಆತ್ಮಹತ್ಯೆ ಮಾಡಿಕೊಂಡ ತಾಯಿ. ಈಕೆಯೊಂದಿಗೆ ಆಕೆಯ ಪುಟ್ಟ ಮಕ್ಕಳಾದ ಅನುಶ್ರೀ (6), ತನು (3) ಮತ್ತು ಕೇವಲ ಒಂದು ವರ್ಷದ ಹಸುಳೆ ಸಂತೋಷ್ ಕೂಡ ಬಾವಿಯಲ್ಲಿ ಹೆಣವಾಗಿ ಪತ್ತೆಯಾಗಿದ್ದಾರೆ. ಮೊದಲು ಮಕ್ಕಳನ್ನು ಬಾವಿಗೆ ಎಸೆದ ರಾಜಶ್ರೀ, ನಂತರ ತಾನೂ ಬಾವಿಗೆ ಹಾರಿ ಪ್ರಾಣ ಬಿಟ್ಟಿದ್ದಾಳೆ.
ರಾಜಶ್ರೀ ಅವರ ಪತಿ ಶಂಕ್ರಪ್ಪ ಖಾಸಗಿ ಬಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದು, ವೃತ್ತಿ ನಿಮಿತ್ತ ಅವರು ಊರಿನಲ್ಲಿ ಇಲ್ಲದ ವೇಳೆ ಈ ಘಟನೆ ನಡೆದಿದೆ. ಸಂಜೆ ಮನೆಗೆ ಬಂದಾಗ ಅಥವಾ ಅಕ್ಕಪಕ್ಕದವರು ಗಮನಿಸಿದಾಗ ಈ ಭೀಕರ ದೃಶ್ಯ ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಮೂರು ಮಕ್ಕಳೊಂದಿಗೆ ಈಕೆ ಇಂತಹ ಕಠಿಣ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು ಎಂಬುದು ಸದ್ಯಕ್ಕೆ ನಿಗೂಢವಾಗಿದೆ. ಕುಟುಂಬದಲ್ಲಿ ಕಲಹವಿತ್ತೇ ಅಥವಾ ಬೇರೆ ಯಾವುದಾದರೂ ಮಾನಸಿಕ ಒತ್ತಡವಿತ್ತೇ ಎಂಬುದು ಪೊಲೀಸರ ತನಿಖೆಯಿಂದಷ್ಟೇ ತಿಳಿಯಬೇಕಿದೆ. ವಿಷಯ ತಿಳಿದ ಕೂಡಲೇ ಇಂಡಿ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪತಿ ಹಾಗೂ ರಾಜಶ್ರೀ ಅವರ ತವರು ಮನೆಯವರು ಬಂದ ಬಳಿಕ ಮೃತದೇಹಗಳನ್ನು ಬಾವಿಯಿಂದ ಹೊರತೆಗೆದು ಮುಂದಿನ ಕಾನೂನು ಪ್ರಕ್ರಿಯೆಗಳನ್ನು ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

