ಮೂಗಿನ ಅಂದವನ್ನು ಹೆಚ್ಚಿಸುವ ಅಥವಾ ಮೂಗಿನ ಹೊರಭಾಗದ ರಚನೆಯನ್ನು ಬದಲಾಯಿಸಲು ಮಾಡುವ ಸರ್ಜರಿಯನ್ನು ರೈನೋಪ್ಲಾಸ್ಟಿ ಎನ್ನುತ್ತಾರೆ. ಮುಖದ ಅಂದವನ್ನು ಹೆಚ್ಚಿಸುವುದರ ಜೊತೆಗೆ ಮೂಗಿನಲ್ಲಿ ಉಸಿರಾಡಲು ಸರಾಗವಾಗುವಂತೆ ಕೂಡ ಮಾಡಲು ರೈನೋಪ್ಲಾಸ್ಟಿ ಸರ್ಜರಿ ಮಾಡಲಾಗುತ್ತದೆ. ಸಾಮಾನ್ಯವಾಗಿ ಮೂಗು ಕಿವಿ ಗಂಟಲು ತಜ್ಞರು, ಪ್ಲಾಸ್ಟಿಕ್ ಶಸ್ತ್ರ ಚಿಕಿತ್ಸಾ ತಜ್ಞರು (ಸೌಂದರ್ಯವರ್ದಕ ಶಸ್ತ್ರ ಚಿಕಿತ್ಸಕರು) ಮತ್ತು ಬಾಯಿ ಮುಖ ದವಡೆ ತಜ್ಞರು ಈ ಸರ್ಜರಿಯನ್ನು ಮಾಡುತ್ತಾರೆ.

ಮೂಗಿನ ಹೊರಭಾಗದಲ್ಲಿ ಮೇಲಿನ ಭಾಗದಲ್ಲಿ ಮೂಗಿನ ಮೂಳೆ ಅಥವಾ ನೇಸಲ್ ಬೋನ್ ಇರುತ್ತದೆ. ಕೆಳಗಿನ ಅರ್ಧಭಾಗದಲ್ಲಿ ಮೂಗಿನ ಕಾರ್ಟಿಲೇಜ್ ಇರುತ್ತದೆ. ಇವೆರಡನ್ನು ಸುತ್ತುವರಿದುಕೊಂಡು ಚರ್ಮ ಇರುತ್ತದೆ. ರೈನೋಪ್ಲಾಸ್ಮಿ ಸರ್ಜರಿ ಮಾಡಿದಾಗ ಎಲುಬಿನ ಗಾತ್ರ, ರಚನೆ, ಕಾರ್ಟಿಲೇಜ್ ಗಾತ್ರ, ರಚನೆ, ಹಾಗೂ ಚರ್ಮದ ದಪ್ಪ, ಬಣ್ಣ ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು, ಮುಖದ ಗಾತ್ರಕ್ಕೆ ಅನುಗುಣವಾಗಿ ಮೂಗಿನ ರಚನೆಯನ್ನು ಬದಲಾಯಿಸಲಾಗುತ್ತದೆ.
ಎಲುಬು, ಕಾರ್ಟಿಲೇಜ್ ಮತ್ತು ಚರ್ಮ ಮೂರರಲ್ಲಿಯೂ ಬದಲಾವಣೆ ಕಂಡು ಬರುತ್ತದÉ. ರೋಗಿಯ ಮನಸ್ಸಿನ ಭಾವನೆಗಳು, ರೋಗಿಯ ಬಯಕೆಗಳು ಮತ್ತು ರೋಗಿಯ ಮುಖದ ಚಹರೆ, ಗಾತ್ರ ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು, ರೋಗಿಯ ಜೊತೆ ಹಾಗೂ ರೋಗಿಯ ಹೆತ್ತವರ ಜೊತೆ ಆಪ್ತ ಸಮಾಲೋಚನೆ ಮಾಡಿ, ರೋಗಿಯ ಅಭಿರುಚಿಗೆ ತಕ್ಕಂತೆ ಮೂಗಿನ ಅಂದವನ್ನು ಹೆಚ್ಚಿಸಲು ಶಸ್ತ್ರ ಚಿಕಿತ್ಸಕರು ಈ ರೈನೋಪ್ಲಾಸ್ಟಿ ಶಸ್ತ್ರ ಚಿಕಿತ್ಸೆ ಮಾಡುತ್ತದೆ.
ಯಾವಾಗ ರೈನೋಪ್ಲಾಸ್ಟಿ ಮಾಡುತ್ತಾರೆ?
* ಮುಖಕ್ಕೆ ಏಟು ಬಿದ್ದು, ಮೂಗಿನ ಎಲುಬು ಮತ್ತು ಕಾರ್ಟಿಲೇಜ್ಗಳಿಗೆ ಹಾನಿಯಾಗಿ ಅಥವಾ ನಾಶವಾಗಿ ಮುಖದ ಮತ್ತು ಮೂಗಿನ ಅಂದ ಹಾಳಾದಾಗ, ರೈನೋಪ್ಲಾಸ್ಟಿ ಶಸ್ತ್ರ ಚಿಕಿತ್ಸೆ ಮಾಡಿ ಮುಖದ ಮತ್ತು ಮೂಗಿನ ಮೊದಲಿನ ರಚನೆಯನ್ನು ಪಡೆಯಲು ಪ್ರಯತ್ನಿಸಲಾಗುತ್ತದೆ.
* ಜನ್ಮಜಾತ ವೈಕಲ್ಯದಿಂದಾಗಿ ಮೂಗಿನ ಹೊರಭಾಗದ ರಚನೆಯಲ್ಲಿ ವ್ಯತ್ಯಾಸವಾದಾಗ ಅಥವಾ ಹುಟ್ಟುವಾಗಲೇ ಏನಾದರೂ ಸಿಂಡ್ರೋಮ್ಗಳಿದ್ದಾಗ ರೈನೋಪ್ಲಾಸ್ಟಿ ಮಾಡಲಾಗುತ್ತದೆ.
* ಸೀಳು ತುಟಿ ಮತ್ತು ಸೀಳುಂಗಳ ಇರುವ ಮಕ್ಕಳಲ್ಲಿ ಮೂಗಿನ ರಚನೆಯಲ್ಲಿ ವ್ಯತ್ಯಾಸವಾಗಿ ಮುಖದ ಅಂದಗೆಡುತ್ತಾರೆ. ಈ ಹಂತದಲ್ಲಿ ಶಸ್ತ್ರಚಿಕಿತ್ಸೆ ಮಾಡಿ ಮೂಗಿನ ಅಂದವನ್ನು ಹೆಚ್ಚಿಸಲಾಗುತ್ತದೆ.
* ಮೂಗಿನ ಎಲುಬಿನ ಬೆಳವಣಿಗೆಯ ವೈಫಲ್ಯ ಅಥವಾ ಮೂಗಿನ ಕಾರ್ಟಿಲೇಟ್ಗಳ ಬೆಳವಣಿಗೆಯಲ್ಲಿ ವ್ಯತ್ಯಾಸವಾಗಿದ್ದಲ್ಲಿ ಮೂಗಿನ ರಚನೆ ಹಾಳಾಗಿ, ಮೊಂಡು ಮೂಗು, ಗಿಣಿ ಮೂಗು ಅಥವಾ ಉದ್ದವಾದ ಮೂಗು ಅಥವಾ ಮೂಗಿನ ಮಧ್ಯ ಭಾಗದಲ್ಲಿ ಎಲುಬಿನ ಜಾಸ್ತಿ ಬೆಳವಣಿಗೆ ಉಂಟಾಗಿ ಹಂಪ್ ಬೆಳೆದಿದ್ದಲ್ಲಿ ರೈನೋಪ್ಲಾಸ್ಮಿ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತದೆ.
* ಕೆಲವೊಮ್ಮೆ ಮೂಗಿನ ಎಲುಬುಗಳು ಅಡ್ಡದಿಡ್ಡಿಯಾಗಿ ಬೆಳೆದು ಉಸಿರಾಟಕ್ಕೂ ತೊಂದರೆ ನೀಡುತ್ತಾರೆ. ಆಗ ಹೆಚ್ಚಾದ ಎಲುಬಿನ ಭಾಗವನ್ನು ಕತ್ತರಿಸಿ ತೆಗೆದು ಸರಾಗವಾಗಿ ಉಸಿರಾಡಲು ಅನುಕೂಲವಾಗುವಂತೆ ಮಾಡಲಾಗುತ್ತದೆ. ಮೂಗಿನ ಮಧ್ಯ ಭಾಗದಲ್ಲಿರುವ ಎಲುಬಿನ ಭಾಗವನ್ನು ಸೆಪ್ಟಮ್ ಎನ್ನುತ್ತಾರೆ. ಇದು ಎಡಕ್ಕೆ ಅಥವಾ ಬಲಕ್ಕೆ ಬಾಗಿ ಕೊಂಡಿದಲ್ಲಿಯೂ ಉಸಿರಾಟಕ್ಕೆ ತೊಂದರೆಯಾಗುತ್ತದೆ. ಇದನ್ನು ಸರಿಪಡಿಸುವ ಶಸ್ತ್ರ ಚಿಕಿತ್ಸೆಗೆ ಸೆಪ್ಟೊಪ್ಲಾಸ್ಟಿ ಎನ್ನುತ್ತಾರೆ. ಕೆಲವೊಮ್ಮೆ ಸೆಪ್ಟೊಪ್ಲಾಸ್ಟಿ ಮತ್ತು ರೈನೋಪ್ಲಾಸ್ಮಿ ಎರಡನ್ನೂ ಜೊತೆಯಾಗಿ ಮಾಡಲಾಗುತ್ತದೆ ಮತ್ತು ಉಸಿರಾಡಲು ಸರಾಗವಾಗಿ ಗಾಳಿ ಹರಿಯುವಂತೆ ಮಾಡಲಾಗುತ್ತದೆ.
ತೊಂದರೆಗಳು ಏನು?
* ಸಾಮಾನ್ಯವಾಗಿ ಮೂಗಿನ ಒಳಭಾಗದಲ್ಲಿ ಮತ್ತು ಸುತ್ತಮುತ್ತ ರಕ್ತನಾಳಗಳು ಹೇರಳವಾಗಿರುವುದರಿಂದ ಸರ್ಜರಿ ಬಳಿಕ ರಕ್ತಸ್ರಾವ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಸೂಕ್ತ ಎಚ್ಚರಿಕೆ ವಹಿಸಿದಲ್ಲಿ ಇದನ್ನು ತಡೆಗಟ್ಟಬಹುದು.
* ಸರ್ಜರಿ ಬಳಿಕ ಸೋಂಕು ತಗಲುವ ಸಾಧ್ಯತೆಯೂ ಇರುತ್ತದೆ. ಸಾಕಷ್ಟು ಪೂರ್ವ ತಯಾರಿ ನಡೆಸಿ, ಸೂಕ್ತ ಆಂಟಿಬಯೋಟಿಕ್ ಬಳಸಿದಲ್ಲಿ ಇದನ್ನು ತಡೆಗಟ್ಟಬಹುದು.
* ಶಸ್ತ್ರಚಿಕಿತ್ಸೆ ಬಳಿಕ ಕೆಲವೊಮ್ಮೆ ಮೂಗಿನ ಒಳಭಾಗದಲ್ಲಿ ಊದಿಕೊಂಡು, ಉಸಿರಾಟದ ತೊಂದರೆ ಉಂಟಾಗಲೂಬಹುದು. ಸೂಕ್ತ ಮುಂಜಾಗೂರುಕತೆ ವಹಿಸಿದಲ್ಲಿ ಅವಗಡ ತಪ್ಪಿಸಿಬಹುದು.
* ಮೂಗಿನ ಸುತ್ತ ಮರಗಟ್ಟಿದ ಅನುಭವ ಇರಬಹುದು, ಮೂಗಿನ ಸುತ್ತಲಿರುವ ನರಕ್ಕೆ ಹಾನಿಯಾಗದಂತೆ ಸೂಕ್ತ ಎಚ್ಚರಿಕೆ ವಹಿಸಬೇಕು.
* ನೋವು, ಊತ ಮತ್ತು ಚರ್ಮದ ಬಣ್ಣ ಬದಲಾಗುವ ಸಾಧ್ಯತೆಯೂ ಇರುತ್ತದೆ. ಇವೆಲ್ಲವೂ ತಾತ್ಕಾಲಿಕ ಸಮಸ್ಯೆಗಳು.
* ಮೂಗಿನ ಸುತ್ತ ಸರ್ಜರಿಗಾಗಿ ಬಳಸಿದ ಗಾಯಗಳಿಂದ ಕಲೆಗಳು ಉಂಟಾಗುವ ಸಾಧ್ಯತೆಯೂ ಇರುತ್ತದೆ. ಗಾಯ ಕಾಣದಂತೆ ಮೂಗಿನ ಒಳಭಾಗದ ಮುಖಾಂತರ ಸರ್ಜರಿ ಮಾಡಿ ಇದನ್ನು ತಪ್ಪಿಸಬಹುದು.
ರೈನೋಪ್ಲಾಸ್ಮಿ ಮಾಡುವ ಮೊದಲು ರೋಗಿಯ ವೈದ್ಯಕೀಯ ಚರಿತ್ರೆಯನ್ನು ತಿಳಿಯುತ್ತದೆ. ಆ ಬಳಿಕ ರೋಗಿಯ ಪರಿಪೂರ್ಣ ದೈಹಿಕ ಪರೀಕ್ಷೆ, ರಕ್ತ ಪರೀಕ್ಷೆ ಮಾಡಿ, ಯಾವುದೇ ತೊಂದರೆ ಇಲ್ಲವೆಂದು ಖಾತರಿಗೊಳಿಸಲಾಗುತ್ತದೆ. ಮುಖದ ಮತ್ತು ಮೂಗಿನ ಭಾವಚಿತ್ರವನ್ನು ಬೇರೆ ಬೇರೆ ಕೋನಗಳಿಂದ ತೆಗೆದು ರೋಗಿಗೆ ತೋರಿಸಲಾಗುತ್ತದೆ. ಮುಂದೆ ಯಾವ ರೀತಿ ಬದಲಾವಣೆ ಬರುತ್ತದೆ ಎಂಬುದನ್ನೂ ಕಂಪ್ಯೂಟರ್ ತಂತ್ರಜ್ಞಾನ ಬಳಸಿ ರೋಗಿಗೆ ಮನದಟ್ಟಾಗುವಂತೆ ಮಾಡಲಾಗುತ್ತದೆ. ಆ ಬಳಿಕ ರೋಗಿಯ ಬಯಕೆ ಮತ್ತು ಅಪೇಕ್ಷೆಗಳ ಮಿತಿಯನ್ನು ತಿಳಿಯಲಾಗುತ್ತದೆ. ಮಾನಸಿಕವಾಗಿ ರೋಗಿಯನ್ನು ಸಿದ್ಧ ಪಡಿಸಿದ ಬಳಿಕ ರೊಗಿಯಿಂದ ಲಿಖಿತವಾಗಿ ಒಪ್ಪಿಗೆ ಪಡÉದೇ ಈ ರೈನೋಪ್ಲಾಸ್ಮಿ ಸರ್ಜರಿ ಮಾಡಲಾಗುತ್ತದೆ. ಸಾಮಾನ್ಯವಾಗಿ ಸಂಪೂರ್ಣ ಅರಿವಳಿಕೆ ನೀಡಿ ಮೂರ್ಚೆ ತಪ್ಪಿಸಿ ಈ ಶಸ್ತ್ರಕ್ರಿಯೆ ಮಾಡಲಾಗುತ್ತದೆ.
ಕೊನೆ ಮಾತು :
ಮೂಗು ನಮ್ಮ ಮುಖದಲ್ಲಿ ಎದ್ದು ಕಾಣುವ ಅಂಗವಾಗಿದೆ. ಮುಖಕ್ಕೆ ಅಂಗ ಹೆಚ್ಚಿಸುವಲ್ಲಿ ಮೂಗು ಬಹುಮುಖ್ಯ ಭೂಮಿಕೆ ವಹಿಸುತ್ತದೆ. ಚಟ್ಟೆ ಮೂಗು, ಮೊಂಡು ಮೂಗು, ಗಿಣಿ ಮೂಗು, ಉದ್ದ ಮೂಗು, ದಪ್ಪ ಮೂಗು ಹೀಗೆ ಬೇರೆ ಬೇರೆ ರೀತಿಯ ಗಾತ್ರದ ಮತ್ತು ರಚನೆಯ ಮೂಗನ್ನು ನಾವು ಸಮಾಜದಲ್ಲಿ ಕಾಣುತ್ತದೆ. ಹೆಚ್ಚಿನವರಿಗೆ ಈ ಮೂಗಿನ ಅಂದವನ್ನು ಹೆಚ್ಚಿಸುವ ರೈನೋಪ್ಲಾಸ್ಮಿ ಸರ್ಜರಿ ಬಗ್ಗೆ ಹತ್ತು ಹಲವು ಸಂದೇಹಗಳಿವೆ. ಸಾಮಾನ್ಯವಾಗಿ ಈ ರೈನೋಪ್ಲಾಸ್ಟಿ ಚಿಕಿತ್ಸೆಗೆ ಸುಮಾರು 30ರಿಂದ 50 ಸಾವಿರದ ವರೆಗೆ ವೆಚ್ಚ ತಗಲುತ್ತದೆ. ಮುಂದುವರೆದ ಮತ್ತು ಮೆಟ್ರೊ ನಗರಗಳಲ್ಲಿ ಒಂದು ಲಕ್ಷದವರೆಗೂ ವೆಚ್ಚ ತಗಲಬಹುದು. ಹೆಚ್ಚಾಗಿ ಸಾಮಾಜಿಕ ಬದುಕಿನಲ್ಲಿ ಹೆಚ್ಚು ಒತ್ತು ನೀಡುವ ಚಲನಚಿತ್ರ ತಾರೆಯರು, ನಟಿಯರು, ಕಿರುತೆರೆಯ ನಟಿಯರು ಈ ಚಿಕಿತ್ಸೆಯನ್ನು ಹೆಚ್ಚು ಮಾಡಿಸಿಕೊಳ್ಳುತ್ತಾರೆ.
ಪ್ರಿಯಾಂಕ ಚೋಪ್ರಾ, ಕರಿಷ್ಮಾ ಕಪೂರ್, ಕರೀನಾ ಕಪೂರ್, ಶಿಲ್ಪಾ ಶೆಟ್ಟಿ ಮುಂತಾದ ನಟಿಮಣಿಯರು ಈ ರೈನೋಪ್ಲಾಸ್ಟಿ ಚಿಕಿತ್ಸೆ ಮಾಡಿಸಿಕೊಂಡು ಮುಖದ ಅಂದ ಹೆಚ್ಚಿಸಿಕೊಂಡು, ಚಲನಚಿತ್ರ ರಂಗದಲ್ಲಿ ಯಶಸ್ವಿನ ಶಿಖರವನ್ನು ಏರಿದ ಇತಿಹಾಸ ನಮೆಗೆಲ್ಲರಿಗೂ ತಿಳಿದೇ ಇದೆ. ಆಂತರಿಕ ಸೌಂದರ್ಯಕ್ಕಿಂತ ಬಾಹ್ಯ ಸೌಂದರ್ಯಕ್ಕೆ ಹೆಚ್ಚು ಆದ್ಯತೆ ನೀಡುವ ಈ ದಿನಗಳೆಲ್ಲ ಯುವಜನರು ಈ ಶಸ್ತ್ರ ಚಿಕಿತ್ಸೆಗೆ ಜೋತು ಬೀಳುವುದು ಸರ್ವೇ ಸಾಮಾನ್ಯವಾಗಿದೆ. ಇದೊಂದು ಬಹಳ ಸರಳ ಮತ್ತು ಸುಲಭವಾದ ಶಸ್ತ್ರ ಚಿಕಿತ್ಸೆಯಾಗಿದ್ದು ಕೇವಲ 2ರಿಂದ 3 ಗಂಟೆಗಳಲ್ಲಿ ಮುಗಿಯುತ್ತದೆ. ಸರ್ಜರಿ ಮಾಡಿದ ದಿನವೇ ಮನೆಗೂ ಹೋಗಬಹುದು.
ಒಂದು ವಾರದ ವಿಶ್ರಾಂತಿ ಮಾಡಿದ ಬಳಿಕ ಕೆಲಸಕ್ಕೂ ಹೋಗಬಹುದು. ಇದೊಂದು ಸೌಂದರ್ಯವರ್ದಕ ಚಿಕಿತ್ಸೆಯಾದರೂ, 10 ಶೇಕಡಾ ಮಂದಿಯಲ್ಲಿ ಉಸಿರಾಟ ತೊಂದರೆ ಇರುವವರೆಗೂ ಈ ರೈನೋಪ್ಲಾಸ್ಮಿ ಸರ್ಜರಿ ಮಾಡಲಾಗುತ್ತದೆ. ಹದಿಮೂರು ವರ್ಷ ಕಳೆದ ಬಳಿಕ 55 ವರ್ಷದ ಹಿರಿಯರವರೆಗೂ ಎಲ್ಲರೂ ಈ ಚಿಕಿತ್ಸೆ ಮಾಡಿಸಬಹುದು. ಮೂಗಿನ ಗಾತ್ರ, ಆಕಾರ ಮತ್ತು ರಚನೆಯಿಂದ ಖಿನ್ನತೆಗೆ ಒಳಗಾದವರು, ಆತ್ಮ ವಿಶ್ವಾಸ ಕಳೆದುಕೊಂಡವರು, ಅದರಿಂದ ಹೊರಬರಲು ಈ ಶಸ್ತ್ರ ಚಿಕಿತ್ಸೆ ಸೂಕ್ತ ದಾರಿ ಆಗಬಹುದು. ಮೂಗಿನ ಚರ್ಮಗಳ ಒಳಭಾಗದಲ್ಲಿ ಮಾಡಿದ ಗಾಯದ ಮುಖಾಂತರ ಈ ಸರ್ಜರಿ ಮಾಡುವ ಕಾರಣದಿಂದ ಮುಖದಲ್ಲಿ ಯಾವುದೇ ಕಲೆ ಉಳಿಯುವುದಿಲ್ಲ.
ಈ ಸರ್ಜರಿ ಜೊತೆಗೆ ಮುಖದ ಅಂದ ಹೆಚ್ಚಿಸುವ ಗದ್ದದಲ್ಲಿ ಡಿಂಪಲ್ ಬರಿಸುವ ಕೆನ್ನೆ ಗುಳಿ ಸರ್ಜರಿ, ಗಲ್ಲದ ಸರ್ಜರಿ, ತುಟಿಯ ಗಾತ್ರ ವೃದ್ಧಿಸುವ ಅಥವಾ ಗಾತ್ರ ಕಡಿಮೆ ಮಾಡುವ ಸರ್ಜರಿ, ಅಥವಾ ಇನ್ಯಾವುದೇ ಸೌಂದರ್ಯವರ್ದಕ ಸರ್ಜರಿ ಕೂಡ ಮಾಡಿಸಬಹುದು. ಒಮ್ಮೆ ಸರ್ಜರಿ ಮಾಡಿದ ಬಳಿಕ ಉಂಟಾಗುವ ಬದಲಾವಣೆ ಜೀವನಪೂರ್ತಿ ಶಾಶ್ವತವಾಗಿ ಉಳಿಯುತ್ತದೆ. ಯಾವುದೇ ಆತಂಕ, ಭಯ, ಸಂಕೋಚ ಮತ್ತು ಅಪಾಯವಿಲ್ಲದೆ ಈ ಚಿಕಿತ್ಸೆಯನ್ನು ನುರಿತ ವೈದ್ಯರ ಬಳಿ ಮಾಡಿಸಿಕೊಂಡಲ್ಲಿ ಮುಖದ ಅಂದ ದುಪ್ಪಟ್ಟಾಗಿ ಮಾನಸಿಕವಾಗಿ ನೆಮ್ಮದಿ ದೊರೆತು, ವ್ಯಕ್ತಿಯ ಆತ್ಮವಿಶ್ವಾಸ ವೃದ್ಧಿಯಾಗಿ ಸಮಾಜದ ಮುಖ್ಯವಾಹಿನಿಗೆ ಸೇರಿಕೊಳ್ಳಬಹುದು. ಮತ್ತು ಒಂದು ಸುಂದರ ಸುದೃಡ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬಹುದು ಅದರಲ್ಲಿಯೇ ನಮ್ಮೆಲ್ಲರ ಹಿತ ಅಡಗಿದೆ.
ಡಾ| ಮುರಲೀ ಮೋಹನ್ ಚೂಂತಾರು, ಬಾಯಿ ಮುಖ ದವಡೆ ಶಸ್ತ್ರ ಚಿಕಿತ್ಸಕರು

