ಅಲಂಕಾರು : ಕಡಬ ತಾಲೂಕಿನ ಶ್ರೀ ದುರ್ಗಾಂಬಾ ಪದವಿ ಪೂರ್ವ ಕಾಲೇಜು ಹಾಗೂ ಭಾವಾಂಕುರ ಕನ್ನಡ ಸಂಘದ ಸಂಯುಕ್ತ ಆಶ್ರಯದಲ್ಲಿ ಸಾಹಿತ್ಯ ಪ್ರಪಂಚದ ಅಪೂರ್ವ ಹಾಗೂ ವಿಶಿಷ್ಟ ಕಾರ್ಯಕ್ರಮವಾದ ‘ಪಂಚ ಕೃತಿಗಳ ಲೋಕಾರ್ಪಣಾ ಸಮಾರಂಭ’ ಇದೇ ಬರುವ ಏಪ್ರಿಲ್ 4, 2026 ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮವು ಸಾಮಾನ್ಯ ಸಾಹಿತ್ಯ ಕಾರ್ಯಕ್ರಮವಲ್ಲ; ಒಂದು ಶಿಕ್ಷಣ ಸಂಸ್ಥೆಯಲ್ಲಿಯೇ ಏಕಕಾಲದಲ್ಲಿ 9 ಹಾಗೂ 10ನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿರುವ ಐದು ವಿದ್ಯಾರ್ಥಿಗಳು ತಮ್ಮದೇ ಸ್ವಂತ ಕವನ ಸಂಕಲನಗಳನ್ನು ರಚಿಸಿ ಪ್ರಕಟಣೆಗೆ ತರುತ್ತಿರುವುದು ಜಿಲ್ಲಾ ಮಟ್ಟದಲ್ಲಿ ಬಹುಶಃ ಪ್ರಪ್ರಥಮ ಎನ್ನಬಹುದು.
ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿ ಬೆಳೆಸಿ, ಅವರ ಸೃಜನಶೀಲತೆಯನ್ನು ಉತ್ತೇಜಿಸಿ, ಕನ್ನಡ ಸಾಹಿತ್ಯ ಲೋಕಕ್ಕೆ ಹೊಸ ಪ್ರತಿಭೆಗಳನ್ನು ಪರಿಚಯಿಸುವ ಮಹತ್ತರ ಉದ್ದೇಶವನ್ನು ಈ ಕಾರ್ಯಕ್ರಮ ಹೊಂದಿದೆ. ಈ ದೃಷ್ಟಿಯಿಂದ ಇದು ನಿಜಕ್ಕೂ ಮಾದರಿಯಾದ ಸಾಹಿತ್ಯ ಚಳುವಳಿಯಂತೆ ಗಮನ ಸೆಳೆಯುವ ಕಾರ್ಯಕ್ರಮವಾಗಲಿದೆ.
ಕಾರ್ಯಕ್ರಮವು ಪೂರ್ವಾಹ್ನ 10:00 ಗಂಟೆಗೆ ಪ್ರಾರಂಭವಾಗಲಿದ್ದು, ಹಿರಿಯ ಸಾಹಿತಿಗಳು ಹಾಗೂ ನಿವೃತ್ತ ಉಪನ್ಯಾಸಕರಾದ ಪ್ರೊ. ವಿ. ಬಿ. ಅರ್ತಿಕಜೆ ಅವರು ಉದ್ಘಾಟಿಸಿ ಕೃತಿ ವಿಮರ್ಶೆ ಮಾಡಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ದಯಾನಂದ ರೈ ಮನವಳಿಕೆ ವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ಕು. ಲಕ್ಷ್ಮಿ ಲೇಖನ – ಶ್ರೀಲೇಖ,ಕು. ಪಲ್ಲವಿ ಕೆ – ತಿರುವು,ಕು. ಲಿಖಿತಾ – ಕನಸುಗಳ ಹಾರಾಟ,ಕು. ದೀಪಿಕಾ – ಮನದಾಳದ ರಸಮಂಜರಿ,ಕು. ಇಂಚರ – ಹನಿ ಹೆಜ್ಜೆ ಇವರ ಪಂಚ ಕೃತಿಗಳ ಲೋಕಾರ್ಪಣೆ ನಡೆಯಲಿದೆ.
ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಕಡಬ ತಾಲೂಕು ಅಧ್ಯಕ್ಷರಾದ ಸೇಸಪ್ಪ ರೈ, 2026ರ ಸುವರ್ಣ ಕನ್ನಡಿಗ ಪ್ರಶಸ್ತಿ ಪುರಸ್ಕೃತ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್, ಗ್ರಾಮ ಸಾಹಿತ್ಯ ಸಂಭ್ರಮದ ಸಂಚಾಲಕರಾದ ನಾರಾಯಣ ಕುಂಬ್ರ ಹಾಗೂ ಸಂಸ್ಥೆಯ ಹಿರಿಯ ವಿದ್ಯಾರ್ಥಿನಿ ಹಾಗೂ ಸಾಹಿತಿಯಾದ ಜ್ಯೋತಿ ಶೈಲೇಶ್ ಭಾಗವಹಿಸಿ ಕೃತಿಗಳ ಕುರಿತು ಮಾತನಾಡಲಿದ್ದಾರೆ.
ಕನ್ನಡ ನಾಡು, ನುಡಿ ಮತ್ತು ಸಾಹಿತ್ಯದ ಅಭ್ಯುದಯಕ್ಕಾಗಿ ರೂಪುಗೊಂಡಿರುವ ಈ ವಿಶಿಷ್ಟ ಕಾರ್ಯಕ್ರಮವು ರಾಜ್ಯ ಮಟ್ಟದಲ್ಲಿಯೂ ಗಮನ ಸೆಳೆಯುವ ಸಾಧ್ಯತೆಯಿದ್ದು, ಸಾಹಿತ್ಯಾಸಕ್ತರು, ಹಿರಿಯ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವಂತೆ ಆಡಳಿತ ಮಂಡಳಿಯ ಪದಾಧಿಕಾರಿಗಳು, ಆಡಳಿತಾಧಿಕಾರಿಗಳು,ಕಾಲೇಜಿನ ಪ್ರಾಂಶುಪಾಲರು, ಪ್ರೌಢಶಾಲೆಯ ಮುಖ್ಯಗುರುಗಳು ಹಾಗೂ ಭಾವಾಂಕುರ ಕನ್ನಡ ಸಂಘದ ಪದಾಧಿಕಾರಿಗಳು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
