ಎಣ್ಣೆ ಪ್ರಿಯರೇ ಎಚ್ಚರ: ಅಧಿಕಾರಿಗಳ ನೇತೃತ್ವದಲ್ಲೇ ನಡೀತಿದೆ ಅವಧಿ ಮೀರಿದ ಮದ್ಯ ಮಾರಾಟ!

0
6

ರಾಮನಗರ: ಮದ್ಯ ಮಾರಾಟ ವಿಚಾರವಾಗಿ ಅಕ್ರಮಗಳನ್ನು ತಡೆಯಬೇಕಿದ್ದ ಅಧಿಕಾರಿಗಳೇ ಕಳ್ಳಾಟ ಆಡುತ್ತಿರುವ ಪ್ರಸಂಗವೊಂದು ರಾಮನಗರದಲ್ಲಿ ಬಯಲಾಗಿದೆ. ಹಣದಾಸೆಗೆ ಅಧಿಕಾರಿಗಳಿಂದಲೇ ಅವಧಿ ಮೀರಿದ ಮದ್ಯ ಮಾರಾಟ ನಡೆಯುತ್ತಿರೋದು, ಐಜೂರು ಠಾಣೆ ಪೊಲೀಸರ ಕಾರ್ಯಾಚರಣೆ ವೇಳೆ ಬೆಳಕಿಗೆ ಬಂದಿದೆ. ಕರ್ನಾಟಕ ರಾಜ್ಯ ಪಾನೀಯ ನಿಗಮದ ಅಧಿಕಾರಿಗಳು ಹಾಗೂ ಸಿಬ್ಬಂದಿ ಜಪ್ತಿ ಮಾಡಿದ ಅವಧಿಮೀರಿದ ಮದ್ಯ ಮಾರುತ್ತಿದ್ದು, ನಿಗಮದ ಸೂಪರ್ ವೈಸರ್ ಮನೆಯಲ್ಲಿ ಇವು ಪತ್ತೆಯಾಗಿದೆ. ಸುರೇಶ್ ನಿವಾಸದಲ್ಲಿ ವಿವಿಧ ಕಂಪನಿಗಳ 20 ಬಾಕ್ಸ್​ ಮದ್ಯ ಕಂಡುಬಂದಿದೆ.

ಹಲವೆಡೆ ದಾಳಿ ನಡೆಸಿ ವಶಪಡಿಸಿಕೊಂಡಿದ್ದ ಅವಧಿಮೀರಿದ ಮದ್ಯವನ್ನು ನಾಶಪಡಿಸುವ ಬದಲು ಕರ್ನಾಟಕ ಪಾನೀಯ ನಿಗಮದ ಗೋದಾಮಿನಿಂದ ಅವನ್ನು ತಂದು ಮನೆಯಲ್ಲಿ ಸಂಗ್ರಹ ಮಾಡಲಾಗಿತ್ತು. ಇವನ್ನು ಗ್ರಾಮೀಣ ಭಾಗದಲ್ಲಿ ಮಾರಲು ಪ್ಲ್ಯಾನ್ ನಡೆದಿತ್ತು ಎನ್ನಲಾಗಿದೆ. ಅವಧಿಮೀರಿದ ಯುಬಿ ಎಕ್ಸ್ಪರ್ಟ್ ಪ್ರಿಮಿಯಂ ಸ್ಟ್ರಾಂಗ್ ಬಿಯರ್, ಕಿಂಗ್ ಫಿಶರ್, ಆಲ್ಟ್ರಾ ಪ್ರಿಮಿಯಂ ಸ್ಟ್ರಾಂಗ್ ಬಿಯರ್ ಹಾಗೂ ಮ್ಯಾಜಿಕ್ ಮೂಮೆಂಟ್ ವೋಡ್ಕಾ ಕಾಕೈಟ್​ನ ಸಿಬ್ಬಂದಿ ಸೀಜ್ ಮಾಡಿದ್ದರು. ಈಗಾಗಲೇ ಮದ್ಯದ ಅವಧಿಮೀರಿ ಮೂರ್ನಾಲ್ಕು ತಿಂಗಳು ಕಳೆದಿದ್ದು, ಸೀಜ್ ಮಾಡಿದ್ದ ಅವನ್ನು ನಾಶಪಡಿಸಲು ಅಬಕಾರಿ ಡಿಸಿ ಸೂಚಿಸಿದ್ದರು. ಹೀಗಿದ್ದರೂ ಗೋದಾಮಿನ ಸಿಸಿಟಿವಿ ಆಫ್ ಮಾಡಿಸಿ 640 ಬಾಕ್ಸ್​ಗಳಲ್ಲಿ 20 ಬಾಕ್ಸ್​ಗಳನ್ನು ನಾಶಪಡಿಸದೇ ತಂದು ಸಂಗ್ರಹ ಮಾಡಲಾಗಿತ್ತು ಎಂಬುದು ತಿಳಿದುಬಂದಿದೆ.

ರಾಮನಗರದ ಅರ್ಚಕರಹಳ್ಳಿ ಬಳಿಯಿರುವ ಪಾನೀಯ ನಿಗಮದ ಗೋದಾಮಿನಿಂದ ಮದ್ಯ ಸಾಗಾಟದ ವೇಳೆ ಸೂಪರ್​ ವೈಸರ್​ ಸುರೇಶ್​ಗೆ ಗೋದಾಮು ಅಧಿಕಾರಿಗಳು, ಸಿಬ್ಬಂದಿ ಸಾಥ್ ನೀಡಿದ್ದರು. ಹಣದಾಸೆಗೆ ಕಳೆದ ಹಲವು ವರ್ಷಗಳಿಂದ ಅಕ್ರಮ ದಂಧೆ ನಡೆಯುತ್ತಿದ್ದು, ಐಜೂರು ಪೊಲೀಸರಿಂದ ಸೂಪರ್ ವೈಸರ್​ ಸುರೇಶ್(52) ಬಂಧಿಸಲಾಗಿದೆ. ಬಳಿಕ ಸ್ಟೇಷನ್ ಬೇಲ್ ನೀಡಿ ಆರೋಪಿಯನ್ನು ಪೊಲೀಸರು ಬಿಟ್ಟು ಕಳುಹಿಸಿದ್ದಾರೆ. ಪ್ರಕರಣದ ಬಗ್ಗೆ ಐಜೂರು ಠಾಣೆ ಪೊಲೀಸರಿಂದ ತನಿಖೆ ಮುಂದುವರಿದಿದೆ. ಘಟನೆ ಮದ್ಯ ಪ್ರಿಯರಿಗೆ ಎಚ್ಚರಿಕೆ ಗಂಟೆ ಎಂಬಂತಿದ್ದು, ಇಲಾಖೆಯ ಹಿರಿಯ ಅಧಿಕಾರಿಗಳನ್ನೇ ಬೆಚ್ಚಿಬೀಳಿಸಿದೆ.

LEAVE A REPLY

Please enter your comment!
Please enter your name here