ದಾವಣಗೆರೆ : ಮಾನವನ ಜೀವನದ ಸಂಸ್ಕಾರ, ಸಂಸ್ಕೃತಿಗಳನ್ನು ಮಾನವೀಯ ಮೌಲ್ಯಗಳನ್ನು ರಂಗೋಲಿ ಕಲೆಯೊಂದಿಗೆ ಈಗಿನ ಪೀಳಿಗೆಗಳಿಗೆ ಕಲಿಸಬೇಕಾಗಿದೆ. ಪ್ರತೀ ಹಬ್ಬಗಳಲ್ಲಿ ಮನೆಯ ಮುಂದೆ ಸಾಂಪ್ರದಾಯಕವಾಗಿ ರಂಗೋಲಿ ಹಾಕುವುದು ಆಧ್ಯಾತ್ಮಿಕ ಪರಂಪರೆಯ ದೇವರ ಪೂಜೆ ದಾವಣಗೆರೆಯಲ್ಲಿ ಯಾವುದೇ ಸಂಘ ಸಂಸ್ಥೆಗಳು ಮಾಡದೇ ಇರವಂತಹ ಮಹಿಳೆಯರ ಕಲಾ ಪ್ರತಿಭೆಗಳನ್ನು ಅನಾವರಣಗೊಳಿಸುವಂತಹ ಕಾಯಕ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಪ್ರತೀ ವರ್ಷ ಯುಗಾದಿ ಹೊಸ ವರ್ಷದಂದು ಮಾಡುತ್ತಿರುವುದು ಶ್ಲಾಘನೀಯ ಎಂದು ಕಲಾಕುಂಚದ ಅಧ್ಯಕ್ಷರಾದ ವಾಸುದೇವ ಲಕ್ಷ್ಮಣ್ ರಾಯ್ಕರ್ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ದಾವಣಗೆರೆಯ ಕಲಾಕುಂಚ ಕಛೇರಿ ಸಭಾಂಗಣದಲ್ಲಿ ಇತ್ತೀಚಿಗೆ ಯುಗಾದಿ ಹಬ್ಬದ ಪ್ರಯುಕ್ತ ಅವರವರ ಮನೆಯಂಗಳದಲ್ಲಿ ಉಚಿತ ರಂಗೋಲಿ ಸ್ಪರ್ಧೆ ಹಮ್ಮಿಕೊಂಡಿದ್ದು ದಾವಣಗೆರೆಯ ವಿವಿಧ ಬಡಾವಣೆಗಳಲ್ಲಿ ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕರಾದ ಜ್ಯೋತಿ ಗಣೇಶ್ ಶೆಣೈ, ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷರಾದ ಹೇಮಾ ಶಾಂತಪ್ಪ ಪೂಜಾರಿ, ಕಲಾಕುಂಚ ಡಿ.ಸಿ.ಎಂ.ಶಾಖೆಯ ಅಧ್ಯಕ್ಷರಾದ ಶಾರದಮ್ಮ ಶಿವನಪ್ಪ, ಕಲಾಕುಂಚ ವಿದ್ಯಾನಗರ ಶಾಖೆಯ ಅಧ್ಯಕ್ಷರಾದ ರಾಜಶೇಖರ್ ಬೆನ್ನೂರು, ಎಂ.ಸಿ.ಸಿ.ಶಾಖೆಯ ಅಧ್ಯಕ್ಷರಾದ ಪ್ರಭಾ ರವೀಂದ್ರ ಮಾತನಾಡಿ, ಕಲಾಕುಂಚ ಕಳೆದ 36 ವರ್ಷಗಳಿಂದ ನಿರಂತರವಾಗಿ ಕಠಿಣ ಪರಿಶ್ರಮದಿಂದ ಕಲೆ, ಸಾಹಿತ್ಯ, ಸಂಗೀತ, ಯಕ್ಷಗಾನ, ಶಿಕ್ಷಣ ಸೇರಿದಂತೆ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುತ್ತಿರುವುದು, ಮಹಿಳೆಯರಿಗೆ, ಮಕ್ಕಳಿಗೆ ಅವರವರ ಪ್ರತಿಭೆಗಳನ್ನು ಅನಾವರಣಗೊಳಿಸಿ ಮುಕ್ತವಾದ ವೇದಿಕೆಗಳನ್ನು ಕಲ್ಪಿಸುವುದು ಮೆಚ್ಚುಗೆ ವ್ಯಕ್ತಪಡಿಸಿದರು.
ಕುಮಾರಿ ಚಿರಸ್ವಿ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಈ ಸಮಾರಂಭದಲ್ಲಿ ದಾವಣಗೆರೆಯ ವಿವಿಧ ಬಡಾವಣೆಗಳಲ್ಲಿ ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿ, ವಿಜೇತರಾದವರಿಗೆ ಕನ್ನಡ ತಾಯಿ ಭುವನೇಶ್ವರಿಯ ಸ್ಮರಣಿಕೆ, ಅಭಿನಂದನಾ ಪತ್ರ ವಿತರಿಸಲಾಯಿತು. ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈಯವರು ದಾವಣಗೆರೆಯ ಐತಿಹಾಸಿಕ ಪರಂಪರೆಯ ಇತಿಹಾಸವನ್ನು ಪ್ರಾಸ್ತಾವಿಕ ಮಾತನಾಡಿ ವಿವರಿಸಿದರು. ಪುಷ್ಪಾ ಮಂಜುನಾಥ್‌ರವರು ಸ್ವಾಗತಿಸಿದರು. ಶಿಲ್ಪಾ ಉಮೇಶ್‌ರವರು ಅಚ್ಚುಕಟ್ಟಾಗಿ ನಿರೂಪಿಸಿದರು. ಕಲಾಕುಂಚ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್ ವಂದಿಸಿದರು.

