90 ದಿನಗಳಲ್ಲಿ ಪಿಎನ್‌ಜಿ ಪಡೆಯದಿದ್ದರೆ ಎಲ್‌ಪಿಜಿ ಸಂಪರ್ಕ ರದ್ದು…!

0
24

ಕೊಳವೆ ಮೂಲಕ ನೈಸರ್ಗಿಕ ಅನಿಲ ಪೂರೈಕೆ(ಪಿಎನ್‌ಜಿ) ಸೌಲಭ್ಯವಿರುವ ನಗರಗಳ ಜನರಿಗೆ ಮೂರು ತಿಂಗಳಲ್ಲಿ ಎಲ್‌ಪಿಜಿಯಿಂದ ಪಿಎನ್‌ಜಿಗೆ ಅನಿಲ ಸಂಪರ್ಕ ಬದಲಾವಣೆ ಮಾಡಿಕೊಳ್ಳುವಂತೆ ಕೇಂದ್ರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಆದೇಶಿಸಿದೆ. ತಪ್ಪಿದಲ್ಲಿ ಸಂಪರ್ಕ ಕಡಿತದಂತಹ ಕಠಿಣ ಕ್ರಮದ ಎಚ್ಚರಿಕೆ ನೀಡಿದೆ.

ಅನಿಲ ಸರಬರಾಜಾಗುವ ಹೊರ್ಮುಜ್ ಜಲಸಂಧಿಯಲ್ಲಿ ತೊಡಕು ಸೇರಿದಂತೆ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳ ನಡುವೆ ಎಲ್‌ಪಿಜಿ ಆಮದಿನ ಸಂಕಷ್ಟದ ಹಿನ್ನೆಲೆಯಲ್ಲಿ ಅನಿಲ ಭದ್ರತೆ ಮತ್ತು ಗ್ರಾಮೀಣ ಪ್ರದೇಶಗಳಿಗೆ ಎಲ್‌ಪಿಜಿ ಪೂರೈಕೆ ಹೆಚ್ಚಿಸುವ ನಿಟ್ಟಿನಲ್ಲಿ ಈ ಕ್ರಮಕ್ಕೆ ಮುಂದಾಗಿದೆ. ಪಿಎನ್‌ಜಿಯು ಸುರಕ್ಷಿತ, ಹೆಚ್ಚು ಅನುಕೂಲಕರ ಮತ್ತು ವೆಚ್ಚ-ಪರಿಣಾಮಕಾರಿ ಪರ್ಯಾಯವಾಗಿ ಪರಿಗಣಿಸಲಾಗುತ್ತದೆ, ತ್ವರಿತ ಮೂಲಸೌಕರ್ಯ ವಿಸ್ತರಣೆ ಮತ್ತು ಸುಲಭ ಲಭ್ಯತೆಗೆ ಪರಿಶೀಲನೆಗಳು ನಡೆಯುತ್ತಿವೆ.

ತಾಂತ್ರಿಕವಾಗಿ ಪಿಎನ್‌ಜಿ ಸಂಪರ್ಕ ಸಾಧ್ಯವಾಗದವರಿಗೆ ಮಾತ್ರ ವಿನಾಯಿತಿ ನೀಡಲಾಗಿದೆ. ಆದರೆ, ಸಂಬಂಧಪಟ್ಟ ಅಧಿಕಾರಿಗಳು ದೃಢೀಕರಿಸಬೇಕು. ಎಲ್‌ಪಿಜಿ ಸಿಲಿಂಡರ್‌ಗಳ ಮೇಲಿನ ನಗರ ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ಗೃಹಬಳಕೆಯ ಕೊಳವೆ ಆಧಾರಿತ ನೈಸರ್ಗಿಕ ಅನಿಲ ವಿತರಣೆಯನ್ನು ಬಲಪಡಿಸಲು ಇದು ಪ್ರಮುಖ ನೀತಿ ಬದಲಾವಣೆಯನ್ನು ಸೂಚಿಸುತ್ತದೆ ಎಂದು ವರದಿ ತಿಳಿಸಿದೆ.

ಭಾರತವು ಅಡುಗೆ ಅನಿಲ ಆಮದಿನ ಮೇಲೆ ಬಹುವಾಗಿ ಅವಲಂಬನೆ ಹೊಂದಿದೆ. ದೇಶೀಯವಾಗಿ ಅಗತ್ಯವಿರುವ ಎಲ್‌ಪಿಜಿ ಪೈಕಿ ಶೇ60ರಷ್ಟು ಆಮದು ಮಾಡಲಾಗುತ್ತಿದೆ. ಗಲ್ಫ್ ದೇಶಗಳಲ್ಲಿ ತೈಲಾಗಾರಗಳಿಗೆ ಆಗಿರುವ ಹಾನಿ ಮತ್ತು ಸಾಗಣೆ ತೊಡಕುಗಳ ಹಿನ್ನೆಲೆಯಲ್ಲಿ ದೇಶೀಯ ಕೊಳವೆ ಆಧರಿತ ನೈಸರ್ಗಿಕ ಅನಿಲದ ಮೇಲೆ ಅವಲಂಬನೆ ಹೆಚ್ಚಿಸಿ ಒತ್ತಡ ಕಡಿಮೆ ಮಾಡುವತ್ತ ಸರ್ಕಾರ ಚಿತ್ರ ಹರಿಸಿದೆ.

ಸಾಗಣೆ, ಬಾಟ್ಲಿಂಗ್ ಸ್ಥಾವರಗಳು, ಸಾರಿಗೆ ಮತ್ತು ಡೀಲರ್ ನೆಟ್‌ವರ್ಕ್‌ಗಳನ್ನು ಅವಲಂಬಿಸಿರುವ ಸಿಲಿಂಡರ್ ಆಧಾರಿತ ಪೂರೈಕೆಗಿಂತ ಬಲವಾದ ಪೈಪ್‌ಲೈನ್ ಜಾಲವು ಹೆಚ್ಚು ಸ್ಥಿತಿಸ್ಥಾಪಕತ್ವವನ್ನು ಹೊಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಎಲ್‌ಪಿಜಿ ಪೂರೈಕೆಯ ಮೇಲಿನ ಅನಿಶ್ಚಿತತೆಯ ನಡುವೆ, ಕೇಂದ್ರವು ಭಾರತದಾದ್ಯಂತ ಪೈಪ್‌ಲೈನ್ ನೈಸರ್ಗಿಕ ಅನಿಲ(ಪಿಎನ್‌ಜಿ) ಮೂಲಸೌಕರ್ಯದ ಅಭಿವೃದ್ಧಿಯನ್ನು ವೇಗಗೊಳಿಸುತ್ತಿದೆ. ಮನೆಗಳಿಗೆ ಮಾತ್ರವಲ್ಲದೆ ಕೈಗಾರಿಕೆಗಳು ಮತ್ತು ಇತರ ವಾಣಿಜ್ಯ ಸಂಸ್ಥೆಗಳಿಗೂ ನಿರಂತರ ಇಂಧನ ಪೂರೈಕೆಯನ್ನು ಖಚಿತಪಡಿಸುತ್ತಿದೆ.

ಎಲ್‌ಪಿಜಿಗೆ ಹೋಲಿಸಿದರೆ ದೀರ್ಘಾವಧಿಯಲ್ಲಿ ಕೊಳವೆ ಆಧಾರುತ ನೈಸರ್ಗಿಕ ಅನಿಲವು(ಪಿಎನ್‌ಜಿ) ಆರ್ಥಿಕವಾಗಿ ಹೆಚ್ಚು ಅನುಕೂಕರವಾಗಿದೆ. ಆರಂಭಿಕ ಸಂಪರ್ಕ ವೆಚ್ಚವನ್ನು 2-3 ವರ್ಷಗಳಲ್ಲಿ ಮರುಪಾವತಿಸಲಾಗುತ್ತದೆ. ಸ್ಥಳೀಯ ವಿತರಣಾ ಜಾಲಗಳ ಮೇಲೆ ಅವಲಂಬಿತವಾಗಿರುವುದರಿಂದ ಪಿಎನ್‌ಜಿ ಬೆಲೆಗಳು ಸಾಮಾನ್ಯವಾಗಿ ಎಲ್‌ಪಿಜಿಗಿಂತ ಹೆಚ್ಚು ಸ್ಥಿರವಾಗಿರುತ್ತವೆ.

ಅಧಿಸೂಚಿತ ಪಿಎನ್‌ಜಿ ಗ್ರಾಹಕರು ಎಂದರೆ ಕೊಳವೆ ಮೂಲಕ ನೈಸರ್ಗಿಕ ಅನಿಲ ಮೂಲಸೌಕರ್ಯಲಭ್ಯವಿರುವ ಅಥವಾ ಅಧಿಕೃತ ಅನಿಲ ವಿತರಣಾ ಕಂಪನಿಗಳು ಪೈಪ್‌ಲೈನ್ ಅಳವಡಿಕೆಯನ್ನು ಪೂರ್ಣಗೊಳಿಸಿದ ಪ್ರದೇಶದಲ್ಲಿ ವಾಸಿಸುತ್ತಿರುವವರಾಗಿದ್ದಾರೆ.

ಹೊಸ ಆದೇಶದ ಅಡಿಯಲ್ಲಿ, ಅಂತಹ ಮನೆಗಳಿಗೆ ಪಿಎನ್‌ಜಿಗೆ ಬದಲಾಗಲು ಧಿಕೃತವಾಗಿ ತಿಳಿಸಲಾಗುತ್ತದೆ. ಅಧಿಸೂಚನೆ ಹೊರಡಿಸಿದ ನಂತರ, ಅವರಿಗೆ ಪಿಎನ್‌ಜಿ ಸಂಪರ್ಕ ಪಡೆಯಲು ಮೂರು ತಿಂಗಳು (90 ದಿನಗಳು) ಕಾಲಾವಕಾಶ ನೀಡಲಾಗುತ್ತದೆ. ಈ ಅವಧಿಯೊಳಗೆ ಅವರು ಎಲ್‌ಪಿಜಿಯಿಂದ ಪಿಎನ್‌ಜಿಗೆ ಸಂಪರ್ಕವನ್ನು ಬದಲಾಯಿಸದಿದ್ದರೆೆ, ಆ ವಿಳಾಸಕ್ಕೆ ಎಲ್‌ಪಿಜಿ ಪೂರೈಕೆಯನ್ನು ಸ್ಥಗಿತಗೊಳಿಸಲಾಗುತ್ತದೆ.

ನಿಮ್ಮ ಸ್ಥಳೀಯ ಅನಿಲ ವಿತರಕರ ಅಧಿಕೃತ ವೆಬ್‌ಸೈಟ್ ಮೂಲಕ ಸುಲಭವಾಗಿ ಪರಿಶೀಲಿಸಬಹುದು. ಪೂರೈಕೆದಾರರು ಪಿಎನ್‌ಜಿ ಲಭ್ಯತೆ ಅಥವಾ ಹೊಸ ಸಂಪರ್ಕ ವಿಭಾಗವನ್ನು ತೆರೆದಿರುತ್ತಾರೆ. ಅಲ್ಲಿ ಬಳಕೆದಾರರು ನಗರ, ಪ್ರದೇಶ ಮತ್ತು ಪಿನ್ ಕೋಡ್‌ನಂತಹ ವಿವರಗಳನ್ನು ನಮೂದಿಸಿ ಪರಿಶೀಲಿಸಬಹುದು. ಅಲ್ಲಿ ನಿಮ್ಮ ಪ್ರದೇಶವು ಈಗಾಗಲೇ ಪಿಎನ್‌ಜಿ ಸಂಪರ್ಕ ಹೊಂದಿದೆಯೇ, ನೋಂದಣಿಗೆ ಮುಕ್ತವಾಗಿದೆಯೇ ಅಥವಾ ಇನ್ನೂ ತಾಂತ್ರಿಕ ಕಾರ್ಯಸಾಧ್ಯತಾ ಪರಿಶೀಲನೆಯಲ್ಲಿದೆಯೇ ಎಂಬ ಮಾಹಿತಿ ಸಿಗುತ್ತದೆ.

ನಿಮ್ಮ ಪ್ರದೇಶದಲ್ಲಿ ಪಿಎನ್‌ಜಿ ಸೌಲಭ್ಯ ಲಭ್ಯವಿದ್ದರೂ ನೀವು ಬದಲಾಗದಿದ್ದರೆ, ನಿಮ್ಮ ಎಲ್‌ಪಿಜಿ ಸಂಪರ್ಕವು ಸ್ವಯಂಚಾಲಿತವಾಗಿ ರದ್ದಾಗುತ್ತದೆ. ತೈಲ ಮಾರಾಟ ಸಂಸ್ಥೆಗಳು ಮೊಬೈಲ್ ಸಂದದೇಶ ಮತ್ತು ಧ್ವನಿ ಸಂದೇಶದ ಮೂಲಕ ಸಂಪರ್ಕ ಕಡಿತದ ಬಗ್ಗೆ ಮಾಹಿತಿ ಒದಗಿಸುತ್ತವೆ.

ಗಡುವು ಮುಗಿದ ನಂತರ ನಿಮ್ಮ ವಿಳಾಸಕ್ಕೆ ಎಲ್‌ಪಿಜಿ ಮರುಪೂರಣವನ್ನು ತೈಲ ಮಾರಾಟ ಕಂಪನಿಗಳು ಮತ್ತು ವಿತರಕರು ನಿರ್ಬಂದಿಸುತ್ತಾರೆ. ವಸತಿ ಸಮುಚ್ಛಯಕ್ಕೆ ಪೈಪ್‌ಲೈನ್ ಅಳವಡಿಕೆಯನ್ನು ಮಾಲೀಕರು ನಿರ್ಬಂಧಿಸಿದರೆ, 3 ತಿಂಗಳ ನಂತರ ಇಡೀ ವಸತಿ ಸಂಕೀರ್ಣಕ್ಕೆ ಎಲ್‌ಪಿಜಿ ಸರಬರಾಜನ್ನು ನಿರ್ಬಂಧಿಸಬಹುದು.

ಪಿಎನ್‌ಜಿ ಸೌಲಭ್ಯವಿರುವ ಪ್ರದೇಶದಲ್ಲಿ ವಾಸಿಸುತ್ತಿರುವ ಮತ್ತು ಉದ್ಯಮ ನಡೆಸುತ್ತಿರುವ ಯಾರೊಬ್ಬರೂ ಸಂಪರ್ಕಕ್ಕೆ ಅರ್ಜಿ ಸಲ್ಲಿಸಬಹುದು.ಮನೆ ಮಾಲೀಕರು ಮತ್ತು ಬಾಡಿಗೆದಾರರು ಸಹ ಅರ್ಜಿ ಸಲ್ಲಿಕೆಗೆ ಅರ್ಹರು. ಅಪಾರ್ಟ್‌ಮೆಂಟ್‌ಗಳಲ್ಲಿ, ವಠಾರಗಳಲ್ಲಿ, ಒಂಟೊ ಮನೆ, ಬಂಗಲೆ, ಸರ್ಕಾರದ ವಸತಿ ಯೋಜನೆ, ಕಂಪನಿಗಳ ವಸತಿ ಸಮುಚ್ಛಯಗಳಲ್ಲಿ ವಾಸಿಸುತ್ತಿರುವವರು ಅರ್ಜಿ ಸಲ್ಲಿಕೆಗೆ ಅರ್ಹರಾಗಿರುತ್ತಾರೆ.

ಮನೆ ಮಾಲೀಕರ ಎನ್‌ಒಸಿ ಮತ್ತು ಮನೆ ಮಾಲೀಕರ ಮಾಲೀಕತ್ವದ ದಾಖಲೆ ಸಲ್ಲಿಸುವ ಮೂಲಕ ಬಾಡಿಗೆದಾರರು ಅರ್ಜಿ ಸಲ್ಲಿಸಬಹುದಾಗಿದೆ. ಗೃಹೋಪಯೋಗಿ, ಶಾಲೆಗಳು, ಕಾಲೇಜು, ಸಮುದಾಯ ಅಡುಗೆಮನೆಗಳು ಮತ್ತು ಅಂಗನವಾಡಿಗಳಿಗೆ ಆದ್ಯತೆ ಮೇಲೆ ಪಿಎನ್‌ಜಿ ಪೂರೈಕೆಗೆ ಸರ್ಕಾರ ಒತ್ತು ನೀಡಿದೆ.

LEAVE A REPLY

Please enter your comment!
Please enter your name here