ಎಸ್‌ಸಿಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಸಂಭ್ರಮ 2K26’ ವಾರ್ಷಿಕೋತ್ಸವ ವೈಭವದ ಸಮಾರೋಪ ಮತ್ತು ರಾಂಕ್ ವಿಜೇತರಿಗೆ ಸನ್ಮಾನ

0
13

ಮಂಗಳೂರು: ಮಾರ್ಚ್ 28 ,ನಗರದ ಉರ್ವಾ ರಿವರ್‌ಸೈಡ್ ಕ್ಯಾಂಪಸ್‌ನಲ್ಲಿರುವ ಎಸ್‌ ಸಿ ಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಸಂಭ್ರಮ 2K26’ ನಾಲ್ಕನೇ ವಾರ್ಷಿಕೋತ್ಸವದ ಸಮಾರೋಪ ಕಾರ್ಯಕ್ರಮವು ವೈಭವದಿಂದ ನಡೆಯಿತು. “ಭಾರತದ ವಿರಾಸತ್ ಮತ್ತು ವಿಕಾಸ್ ಆಚರಣೆ” ಎಂಬ ವಿಷಯದಡಿ ವಾರ್ಷಿಕೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮಕ್ಕೆ ಪ್ರಾರ್ಥನೆ ಹಾಗೂ ಸಂಸ್ಥಾ ಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಅಲೆಗ್ರೋ ಬಿಲ್ಡರ್ಸ್ ಅಂಡ್ ಡೆವಲಪರ್ಸ್ ಸಂಸ್ಥೆಯ ಸಿಎಂಡಿ ಹಾಗೂ ಕ್ರೆಡೈ ಕರ್ನಾಟಕದ ಅಧ್ಯಕ್ಷರಾಗಿ ಆಯ್ಕೆಯಾದ ಸಿ.ಎ. ಧರ್ಮೇಂದ್ರ ಬಿ. ಮೆಹ್ತಾ ಅವರು ಆಗಮಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು. ಅವರು ಭಾಷಣದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಕೇವಲ ಪಠ್ಯ ಜ್ಞಾನಕ್ಕೆ ಮಾತ್ರ ಸೀಮಿತವಾಗದೆ, ಜೀವನ ಕೌಶಲ್ಯಗಳು, ವ್ಯಕ್ತಿತ್ವ ವಿಕಾಸ ಮತ್ತು ನೈತಿಕ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಭಾರತ ದೇಶವು ಜಾಗತಿಕ ಮಟ್ಟದಲ್ಲಿ ವೇಗವಾಗಿ ಬೆಳೆಯುತ್ತಿದ್ದು, ಈ ಅಭಿವೃದ್ಧಿಯಲ್ಲಿ ಯುವಜನರ ಪಾತ್ರ ಅತ್ಯಂತ ಮಹತ್ವದ್ದು ಎಂದು ತಿಳಿಸಿದರು. ವಿದ್ಯಾರ್ಥಿಗಳು ತಮ್ಮ ಸಮಯವನ್ನು ಸದುಪಯೋಗಪಡಿಸಿಕೊಂಡು, ಸ್ಪಷ್ಟವಾದ ಗುರಿಯನ್ನು ಹೊಂದಿ ಶ್ರಮಿಸಿದರೆ ಜೀವನದಲ್ಲಿ ಯಶಸ್ಸು ಸಾಧಿಸಬಹುದು ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಇ.ಸಿ.ಟಿ ಮತ್ತು ಎಸ್‌ ಸಿ ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಾ. ಅಭಿನಯ ಸೋರಕೆ ವಹಿಸಿದ್ದರು. ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಜೀವನದಲ್ಲಿ ಯಶಸ್ಸು ಸಾಧಿಸಲು ಮೊದಲು ಒಳ್ಳೆಯ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವುದು ಅತ್ಯಂತ ಮುಖ್ಯ ಎಂದು ಹೇಳಿದರು. ಇತರರೊಂದಿಗೆ ಹೋಲಿಕೆ ಮಾಡಿಕೊಳ್ಳದೆ, ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನದೇ ಆದ ಗುರಿಯನ್ನು ಹೊಂದಿ ಅದರತ್ತ ಪರಿಶ್ರಮ ಪಡಬೇಕು ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳು ತಮ್ಮ ತಂದೆ-ತಾಯಿ, ಗುರುಗಳು ಮತ್ತು ಶಿಕ್ಷಣ ಸಂಸ್ಥೆಯ ಬಗ್ಗೆ ಸದಾ ಕೃತಜ್ಞತೆಯ ಮನೋಭಾವ ಹೊಂದಿರಬೇಕು ಎಂದು ಹೇಳಿದರು. ಶಿಕ್ಷಣವು ಕೇವಲ ಉದ್ಯೋಗಕ್ಕಾಗಿ ಮಾತ್ರವಲ್ಲ, ಒಳ್ಳೆಯ ವ್ಯಕ್ತಿಯಾಗಲು ಸಹ ಸಹಾಯ ಮಾಡಬೇಕು ಎಂದು ಅವರು ತಿಳಿಸಿದರು.ಕಾಲೇಜಿನ ಪ್ರಾಂಶುಪಾಲರಾದ ಹಾರ್ದಿಕ್ ಪಿ. ಚೌಹಾನ್ ಅವರು ವಾರ್ಷಿಕ ವರದಿಯನ್ನು ಮಂಡಿಸಿ, ಕಾಲೇಜಿನ ಸಾಧನೆಗಳು,ಪ್ರಗತಿ,ಸಂಸ್ಥೆಯ ನಿರಂತರ ಬೆಳವಣಿಗೆ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ವಿವರಿಸಿದರು. ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ 2024-25ನೇ ಸಾಲಿನ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಬಿ.ಕಾಂ ಮತ್ತು ಬಿ ಎಸ್ಸಿ ಅನಿಮಿಷನ್ ಅಂಡ್ ವಿಜ್ವಲ್ ಎಫೆಕ್ಟ್ ನಲ್ಲಿ ಪ್ರಥಮ ರಾಂಕ್ ಪಡೆದ ವೃಂದಾ.ಜಿ ರಾವ್ ಮತ್ತು ಪೂರ್ಣ ಶೇಖರ್ ಇವರನ್ನು ಗಣ್ಯ ವ್ಯಕ್ತಿಗಳು ಸನ್ಮಾನಿಸಿದರು. ಪ್ರಥಮ ರ‍್ಯಾಂಕ್ ಪಡೆದ ವೃಂದಾ ಜಿ. ರಾವ್ ಅವರು ಸಾಧನೆಗೆ ಸಂಬಂಧಿಸಿದ ಅಭಿಪ್ರಾಯವನ್ನು ಹಂಚಿಕೊಂಡರು.

ಒಟ್ಟಾರೆ ಶೈಕ್ಷಣಿಕ ಸಾಧನೆ, ವಿಶೇಷ ಪ್ರಶಸ್ತಿಗಳು ಹಾಗೂ ಸಿಬ್ಬಂದಿ ಸಾಧಕರಿಗೆ ಗೌರವ ನೀಡಿ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳಿಂದ ನೃತ್ಯ, ಸಂಗೀತ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮನರಂಜನೆ ನೀಡಿದವು. ಸಂಸ್ಥೆಯ ಕಾನೂನು ಸಲಹೆಗಾರರಾದ ದೇವಿ , ಎಸ್ ಸಿ ಎಸ್ ಪ್ರೀ-ಸ್ಕೂಲ್‌ ಳನ ಪ್ರಾಂಶುಪಾಲರಾದ ವಿನಯ ಡಿಸೋಜಾ, ಎಸ್ ಸಿ ಎಸ್ ಇಂಟರ್‌ನ್ಯಾಶನಲ್ ರಿವರ್‌ಸೈಡ್ ಅಕಾಡೆಮಿಯ ಪ್ರಾಂಶುಪಾಲರಾದ ಹೆಲೆನ್ ಲೋಬೊ,ಸೋರಕೆ ಬಿಲ್ಡರ್ಸ್‌ನ ವ್ಯವಸ್ಥಾಪಕರಾದ ಝಾನ್ಸಿ ,ಸಹಾಯಕ ಆಡಳಿತಾಧಿಕಾರಿ ಸಾಗರ್,ಪ್ರವೇಶಾಧಿಕಾರಿ ಯಶ್ವಿನ್,ವಿದ್ಯಾರ್ಥಿ ಕಲ್ಯಾಣ ಮಾರ್ಗದರ್ಶಕರು ಅಶ್ವಿನಿ ಶರ್ಮ ಹಾಗೂ ಸಂಸ್ಥೆಯ ಸಿಬ್ಬಂದಿಗಳು, ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿ ಕಲ್ಯಾಣ ಮಾರ್ಗದರ್ಶಕರು,ಬಿಬಿಎ ವಿಭಾಗದ ಮುಖ್ಯಸ್ಥರಾದ ತಿಲಕ್ ಗೌಡ ಆತ್ಮೀಯವಾಗಿ ಅತಿಥಿಗಳನ್ನು ಮತ್ತು ಗಣ್ಯರನ್ನು ಸ್ವಾಗತಿಸಿದರು.

ಉಪನ್ಯಾಸಕಿ ಫಾತಿಮತುಲ್ ಅಜ್ಮಿಯಾ ಅವರು ನಿರೂಪಣೆ ಮಾಡಿದರು.ವಿದ್ಯಾರ್ಥಿ ಕಲ್ಯಾಣ ಪರಿಷತ್ತಿನ ಅಧ್ಯಕ್ಷ ಸುದೀಪ್ ರೈ ಅವರು ವಂದಿಸಿದರು. ವಿದ್ಯಾರ್ಥಿ ಕಲ್ಯಾಣ ಪರಿಷತ್ತಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ರಾಷ್ಟ್ರಗೀತೆಯೊಂದಿಗೆ ಅಧಿಕೃತ ಕಾರ್ಯಕ್ರಮಕ್ಕೆ ತೆರೆ ಬಿದ್ದಿತು.

LEAVE A REPLY

Please enter your comment!
Please enter your name here