ಲೈಂಗಿಕ ಕಿರುಕುಳ ಪ್ರಕರಣ : ರ್ಯಾಪಿಡೋ ಬೈಕ್ ಸವಾರನ ಬಂಧನ

0
11

ಬೆಂಗಳೂರು : ರ್‍ಯಾಪಿಡೋ (Rapido) ಬೈಕ್ ಬುಕ್ ಮಾಡಿಕೊಂಡು ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ಮೇಲೆ ಸವಾರನೊಬ್ಬ ಲೈಂಗಿಕ ಕಿರುಕುಳ ನೀಡಿರುವ ಗಂಭೀರ ಆರೋಪ ಕೇಳಿಬಂದಿದೆ. ಈ ಆಘಾತಕಾರಿ ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಯನ್ನು ಬಂಧಿಸಿ ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಸಂತ್ರಸ್ತ ಮಹಿಳೆಯು ಬಿಟಿಎಂ ಲೇಔಟ್‌ನಿಂದ ಇಂದಿರಾನಗರದಲ್ಲಿರುವ ತನ್ನ ಪಿಜಿಗೆ ತೆರಳಲು ರ್‍ಯಾಪಿಡೋ ಆಯಪ್ ಮೂಲಕ ಬೈಕ್ ಬುಕ್ ಮಾಡಿದ್ದರು. ಪ್ರಯಾಣದ ಮಧ್ಯೆ ಬೈಕ್ ಸವಾರ ಆಕೆಯನ್ನು ಉದ್ದೇಶಪೂರ್ವಕವಾಗಿ ಅನುಚಿತವಾಗಿ ಸ್ಪರ್ಶಿಸಲು ಯತ್ನಿಸಿದ್ದಾನೆ.

ಅಷ್ಟೇ ಅಲ್ಲದೆ, ಅಶ್ಲೀಲ ಪದಗಳನ್ನು ಬಳಸಿ, ಅತ್ಯಂತ ಅಸಭ್ಯವಾಗಿ ವರ್ತಿಸಿದ್ದಾನೆ. ಮಹಿಳೆಯು ಆತನ ಈ ಕೃತ್ಯವನ್ನು ತೀವ್ರವಾಗಿ ವಿರೋಧಿಸಿದರೂ, ಆತ ತನ್ನ ವಿಕೃತ ವರ್ತನೆಯನ್ನು ಮುಂದುವರೆಸಿದ್ದ ಎಂದು ಪೊಲೀಸ್ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಸವಾರನ ಅನುಚಿತ ವರ್ತನೆಯಿಂದ ಗಾಬರಿಯಾದರೂ, ಸಮಯಪ್ರಜ್ಞೆ ಮತ್ತು ಧೈರ್ಯ ಕಳೆದುಕೊಳ್ಳದ ಮಹಿಳೆ, ಘಟನೆಯ ಕೆಲವು ದೃಶ್ಯಗಳನ್ನು ಹಾಗೂ ಆತನ ವರ್ತನೆಯನ್ನು ತನ್ನ ಮೊಬೈಲ್ ಫೋನ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾಳೆ.

ಜೊತೆಗೆ ಪ್ರಯಾಣದ ನಡುವೆಯೇ ತನ್ನ ಸ್ನೇಹಿತರಿಗೆ ಕರೆ ಮಾಡಿ, ತನಗೆ ಎದುರಾಗಿರುವ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿದ್ದಾಳೆ. ಇಂದಿರಾನಗರದಲ್ಲಿರುವ ಪಿಜಿ ಬಳಿ ಬೈಕ್ ತಲುಪುತ್ತಿದ್ದಂತೆ, ಮೊದಲೇ ಅಲ್ಲಿ ಕಾಯುತ್ತಿದ್ದ ಮಹಿಳೆಯ ಸ್ನೇಹಿತರು ಬೈಕ್ ಸವಾರನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆತನನ್ನು ಹಿಡಿದು ವಿಚಾರಣೆ ನಡೆಸಿದ ಸ್ನೇಹಿತರು, ಬಳಿಕ ಆಕೆಗೆ ಧೈರ್ಯ ತುಂಬಿ ಪೊಲೀಸರ ಬಳಿ ಹೋಗಲು ನೆರವಾಗಿದ್ದಾರೆ.

ಮಹಿಳೆ ನೀಡಿದ ದೂರು ಮತ್ತು ಸಾಕ್ಷ್ಯಗಳ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ರ್‍ಯಾಪಿಡೋ ಬೈಕ್ ಸವಾರನನ್ನು ಮೊಹಮ್ಮದ್ ಖಿಜರ್ ಎಂದು ಗುರುತಿಸಲಾಗಿದೆ.

ಪ್ರಯಾಣದ ಉದ್ದಕ್ಕೂ ಆತ ತನ್ನ ಅಸಭ್ಯ ವರ್ತನೆ ಮುಂದುವರಿಸಿದ್ದ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಸದ್ಯ ಆರೋಪಿಯ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆತನ ಮೊಬೈಲ್ ಹಾಗೂ ಆಯಪ್ ಹಿಸ್ಟರಿಯನ್ನು ವಶಕ್ಕೆ ಪಡೆದು ಹೆಚ್ಚಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

LEAVE A REPLY

Please enter your comment!
Please enter your name here