ಬಸ್ರೂರಿನ ತುಳುವೇಶ್ವರನ ಭೂದಾನ ಸೇವೆಗೆ ಚಾಲನೆ – ಒಡಿಯೂರು ಶ್ರೀಗಳ ಆಶೀರ್ವಾದ

0
21

ಒಡಿಯೂರು : ಬಸ್ರೂರಿನ ಪ್ರಾಚೀನ ಹಾಗೂ ಪವಿತ್ರ ಶ್ರೀ ತುಳುವೇಶ್ವರ ದೇವಸ್ಥಾನದ ಪುನರ್ವೈಭವೀಕರಣದ ಅಂಗವಾಗಿ ಭೂದಾನ ಸೇವೆಗೆ ಅಧಿಕೃತ ಚಾಲನೆ ನೀಡಲಾಯಿತು. ಈ ಮಹತ್ವದ ಕಾರ್ಯಕ್ರಮಕ್ಕೆ ಒಡಿಯೂರು ಮಠದ ಪರಮ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಸ್ವಾಮೀಜಿಯವರು, “ಈ ಮಹತ್ಕಾರ್ಯವು ಕೇವಲ ಒಂದು ದೇವಸ್ಥಾನದ ಅಭಿವೃದ್ಧಿಯಷ್ಟೇ ಅಲ್ಲ, ತುಳುನಾಡಿನ ಸಂಸ್ಕೃತಿ, ಆಧ್ಯಾತ್ಮಿಕ ಪರಂಪರೆಯ ಪುನರುಜ್ಜೀವನವಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಈ ಪುಣ್ಯ ಕಾರ್ಯದಲ್ಲಿ ಕೈಜೋಡಿಸಿ, ತುಳುನಾಡಿನ ಮೇಲೆ ಇರುವ ನಮ್ಮ ಋಣವನ್ನು ಸಂದಾಯ ಮಾಡುವ ಈ ಅಪೂರ್ವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು” ಎಂದರು.

ಇನ್ನೂ ಮುಂದುವರೆದು, “ದೈವದ ಕೆಲಸಗಳು ನಮ್ಮ ಇಚ್ಛೆಯಂತೆ ನಡೆಯುವುದಿಲ್ಲ; ಅದು ದೈವೇಚ್ಛೆಯಂತೆಯೇ ನಡೆಯುತ್ತದೆ. ಆದ್ದರಿಂದ ಯಾವುದೇ ಕಳವಳವಿಲ್ಲದೆ ಧೈರ್ಯದಿಂದ ಮುಂದೆ ಸಾಗುವುದು ನಮ್ಮ ಧರ್ಮ. ನಾವು ನಮ್ಮಿಂದ ಸಾಧ್ಯವಾದ ಸೇವೆಯನ್ನು ಮಾಡಿದರೆ, ಅದರ ಫಲವನ್ನು ತುಳುವೇಶ್ವರನೇ ನೀಡುತ್ತಾನೆ” ಎಂದು ಭಕ್ತರಿಗೆ ಭರವಸೆಯ ಸಂದೇಶ ನೀಡಿದರು.

ಸ್ಥಳೀಯರಿಗೂ ಕರೆ ನೀಡಿದ ಸ್ವಾಮೀಜಿಯವರು, “ಬಸ್ರೂರು ಗ್ರಾಮಸ್ಥರು ಈ ಮಹತ್ಕಾರ‌್ಯವನ್ನು ತಮ್ಮದೇ ಸ್ವಕಾರ್ಯವೆಂದು ಪರಿಗಣಿಸಿ ಪ್ರತಿಯೊಬ್ಬರೂ ಮುಂದೆ ನಿಂತು ನಡೆಸಿಕೊಡಬೇಕು” ಎಂದೂ ತಿಳಿಸಿದರು.

ಈ ಮಹತ್ಕಾರ್ಯದ ಜವಾಬ್ದಾರಿಯನ್ನು ತುಳುವರ್ಲ್ಡ್ ಫೌಂಡೇಶನ್ ವಹಿಸಿಕೊಂಡಿದ್ದು, ದೇವಸ್ಥಾನದ ಅಭಿವೃದ್ಧಿಗಾಗಿ ಪ್ರತ್ಯೇಕ ಸಮಿತಿಯನ್ನು ರಚಿಸಲಾಗಿದೆ. ಸಮಿತಿಯ ಅಧ್ಯಕ್ಷರಾಗಿ ಎಚ್. ಕೆ. ದೇವಾನಂದ ಶೆಟ್ಟಿ ಹಾಗೂ ಸಂಚಾಲಕರಾಗಿ ಬಿ. ದಿನಕರ ಶೆಟ್ಟಿ ಕಾರ್ಯನಿರ್ವಹಿಸುತ್ತಿದ್ದಾರೆ.

ದೇಣಿಗೆ ಸಂಗ್ರಹ ಮತ್ತು ಭೂದಾನ ಪ್ರಕ್ರಿಯೆಯ ಪಾರದರ್ಶಕತೆಗೆ “ಶ್ರೀ ತುಳುವೇಶ್ವರ ದೇವಸ್ಥಾನ, ಬಸ್ರೂರು” ಹೆಸರಿನಲ್ಲಿ ಪ್ರತ್ಯೇಕ ಬ್ಯಾಂಕ್ ಖಾತೆ ತೆರೆಯಲಾಗಿದೆ. ದಾನಿಗಳ ಸೌಲಭ್ಯಕ್ಕಾಗಿ, ಭಾರತ ಸರ್ಕಾರದ ಆದಾಯ ತೆರಿಗೆ ಕಾಯ್ದೆಯಡಿ 80G ಸೌಲಭ್ಯವನ್ನು ತುಳುವರ್ಲ್ಡ್ ಫೌಂಡೇಶನ್ ಮೂಲಕ ಪಡೆಯುವ ವ್ಯವಸ್ಥೆಯೂ ಕಲ್ಪಿಸಲಾಗಿದೆ ಎಂದು ತುಳುವರ್ಲ್ಡ್ ಫೌಂಡೇಶನ್ ನಿರ್ದೇಶಕ ಡಾ. ರಾಜೇಶ್ ಆಳ್ವ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ತುಳುವರ್ಲ್ಡ್ ಫೌಂಡೇಶನ್ ನ ಪ್ರಧಾನ ಕಾರ್ಯದರ್ಶಿ ವಸಂತ ರೈ, ಪ್ರಧಾನ ಸಂಚಾಲಕರಾದ ಪ್ರಮೋದ್ ಸಪ್ರೆ, ಕಾರ್ಯದರ್ಶಿ ಹರಿಪ್ರಸಾದ್ ರೈ ಕಾರಮೊಗೇರುಗುತ್ತು, ತುಳುವ ಮಹಾ ಸಭೆಯ ಪ್ರಧಾನ ಸಂಚಾಲಕರಾದ ಅರವಿಂದ ಬೆಳ್ಚಾಡ, ಭಾನುಮತಿ ಶೆಟ್ಟಿ ಕಕ್ವಗುತ್ತು, ಸಂಚಾಲಕರಾದ ಶಾರದಾಮಣಿ ಮಂದಾರ ಹಾಗೂ ಗೀತಾ ಗಣೇಶ್ ಉಪಸ್ಥಿತರಿದ್ದರು.

ತುಳುನಾಡಿನ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಪುನರುಜ್ಜೀವನದ ದಿಸೆಯಲ್ಲಿ ಈ ಭೂದಾನ ಸೇವೆ ಮಹತ್ವದ ಹೆಜ್ಜೆಯಾಗಿದೆ ಎಂಬ ಅಭಿಪ್ರಾಯ ಸರ್ವರಿಂದಲೂ ವ್ಯಕ್ತವಾಗುತ್ತಿದೆ.

LEAVE A REPLY

Please enter your comment!
Please enter your name here