ಕೆಜಿ ರೋಡ್‌ನಿಂದ ಪೇರಡೂರು ಸಂಪರ್ಕಿಸುವ ರಾಜ್ಯ ರಸ್ತೆಯ ದುರ್ಗಾಪರಮೇಶ್ವರಿ ದೇವಸ್ಥಾನದ ಹತ್ತಿರದ ಅಪಾಯಕಾರಿ ತಿರುವಿನಲ್ಲಿ ರಸ್ತೆ ಬದಿಯಲ್ಲಿ ಉಂಟಾಗಿದ್ದ ಆಳವಾದ ಹೊಂಡದಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ದಿನನಿತ್ಯ ತೀವ್ರ ತೊಂದರೆ ಅನುಭವಿಸುತ್ತಿದ್ದರು. ಈ ಸಮಸ್ಯೆಯನ್ನು ಮನಗಂಡ ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಕೀಳಂಜೆ ಅವರ ಅಭಿಮಾನಿ ಬಳಗದವರು ಸ್ವಯಂಪ್ರೇರಿತವಾಗಿ ಶ್ರಮದಾನ ನಡೆಸಿ, ಹೊಂಡಕ್ಕೆ ಕಲ್ಲು ಮತ್ತು ಮಣ್ಣು ಹಾಕಿ ರಸ್ತೆ ಸಮತಟ್ಟುಗೊಳಿಸಿದರು.

ಈ ಸಾಮಾಜಿಕ ಕಾರ್ಯಕ್ಕೆ ಗುಡ್ಸ್ ವಾಹನವನ್ನು ಉಚಿತವಾಗಿ ಒದಗಿಸಿದ ರೇನಿಶ್ ಪೂಜಾರಿ ಮಾಯಡಿ ಅವರು ಸಹಕರಿಸಿದ್ದು, ಕಿಶೋರ್ ಅಮ್ಮುಜೆ, ಸುಶಾಂತ್ ಮಾಯಡಿ, ಹರೀಶ್, ರೋಹಿತ್, ಸುರೇಶ್, ಪ್ರವೀಣ್ ಹಾಗೂ ರೋಷನ್ ಡಿಸೋಜ ಸೇರಿದಂತೆ ಹಲವರು ಶ್ರಮದಾನದಲ್ಲಿ ಪಾಲ್ಗೊಂಡರು. ಇವರ ಸೇವೆಯನ್ನು ಸಾರ್ವಜನಿಕರ ಪರವಾಗಿ ಸತೀಶ್ ಪೂಜಾರಿ ಅಭಿನಂದಿಸಿದ್ದಾರೆ.

ಇನ್ನೊಂದು ಪ್ರಮುಖ ಸಮಸ್ಯೆಯಾಗಿ, ಕೆಜಿ–ಪೇರಡೂರು ರಸ್ತೆಯ ಸಾಲ್ಮರ ರೈಲು ಸೇತುವೆ ಮೇಲ್ಭಾಗದಲ್ಲಿ ತಡೆಗೋಡೆ ನಿರ್ಮಾಣಗೊಂಡಿದ್ದರೂ, ಅಲ್ಲಿ ಯಾವುದೇ ಸೂಚನಾ ಫಲಕಗಳು, ಬೀದಿ ದೀಪಗಳು ಅಥವಾ ಸಿಸಿಟಿವಿ ವ್ಯವಸ್ಥೆ ಇಲ್ಲದಿರುವುದರಿಂದ ಅಪಘಾತಗಳು ಸಂಭವಿಸುತ್ತಿವೆ. ಕಳೆದ ಒಂದು ತಿಂಗಳಲ್ಲೇ ಮೂರು ವಾಹನಗಳು ಅಪಘಾತಕ್ಕೀಡಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಅದೇ ರೀತಿ ಸೇತುವೆ ದಂಡೆಯ ಬಳಿ ಹುಲ್ಲು ಬೆಳೆಯಿರುವುದರಿಂದ ದೂರದಿಂದ ಬರುವ ವಾಹನಗಳಿಗೆ ರಸ್ತೆ ಹಾಗೂ ಸೇತುವೆ ಸ್ಪಷ್ಟವಾಗಿ ಕಾಣುವುದಿಲ್ಲ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ರೈಲ್ವೆ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಸೂಚನಾ ಫಲಕ, ಸ್ಟ್ರೀಟ್ ಲೈಟ್ ಹಾಗೂ ಸಿಸಿಟಿವಿ ಅಳವಡಿಸಬೇಕೆಂದು ಸತೀಶ್ ಪೂಜಾರಿ ಕೀಳಂಜೆ ಆಗ್ರಹಿಸಿದ್ದಾರೆ.

