ಉಡುಪಿ: ಆಟೋ ಗ್ಯಾಸ್‌ ಬದಲಿಗೆ ಪೆಟ್ರೋಲ್‌ ಮೊರೆ

0
65

ಮಧ್ಯಪ್ರಾಚ್ಯ ಯುದ್ಧ ಪರಿಸ್ಥಿತಿಯಿಂದ ಆಟೋ ಗ್ಯಾಸ್‌ ಪೂರೈಕೆ ವ್ಯತ್ಯಯ ಉಲ್ಬಣಗೊಂಡಿರುವುದರಿಂದ ಜಿಲ್ಲೆಯ ಬಹುಪಾಲು ಆಟೋ ಚಾಲಕರು ಆಟೋಗ್ಯಾಸ್‌ ಬದಲಿಗೆ ಪೆಟ್ರೋಲ್‌ ಮೂಲಕ ತಮ್ಮ ಆಟೋ ಓಡಿಸುತ್ತಿದ್ದಾರೆ.

ಸಿಎನ್‌ಜಿ ಪೂರೈಕೆ ಇರುವುದರಿಂದ ಆಟೋಗಳಿಗೆ ಸಮಸ್ಯೆಯಾಗಿಲ್ಲ. ಆದರೆ ಆಟೋ ಗ್ಯಾಸ್‌ ಪೂರೈಕೆ ಸರಿಯಾಗಿ ಆಗುತ್ತಿಲ್ಲ. ಹೀಗಾಗಿ ಆಟೋ ಗ್ಯಾಸ್‌ ಸಿಕ್ಕಾಗ ಮಾತ್ರ ಅದರ ಬಳಕೆ ಮಾಡಿ, ಉಳಿದರಂತೆ ಪೆಟ್ರೋಲ್‌ ಮೂಲಕ ರಿಕ್ಷಾ ಬಾಡಿಗೆ ಪಡೆಯುತ್ತಿದ್ದಾರೆ.

ಉಡುಪಿ ತಾಲೂಕಿನಲ್ಲಿ ಸುಮಾರು 700 ಎಲ್‌ಪಿಜಿ ಹಾಗೂ ಸುಮಾರು 900 ಸಿಎನ್‌ಜಿ ಬಳಸಿ ಓಡಿಸುವ ರಿಕ್ಷಾಗಳಿವೆ. ಆದರೆ ಈ ರೀತಿಯ ಗ್ಯಾಸ್‌ ಬಳಸುವ ರಿಕ್ಷಾದಲ್ಲಿ ಪೆಟ್ರೋಲ್‌ ಮೂಡ್‌ ಕೂಡ ಇರುವುದರಿಂದ ಸದ್ಯದ ಮಟ್ಟಿಗೆ ಸಮಸ್ಯೆಯಿಲ್ಲ. ಆದರೆ ಪೆಟ್ರೋಲ್‌ ಮೂಡ್‌ ತೆಗೆಸಿದ ರಿಕ್ಷಾಗಳು ಎಲ್‌ಪಿಜಿ ಗ್ಯಾಸ್‌ ಬಳಕೆ ಮಾಡುತ್ತಿದ್ದರೆ ಅವರಿಗೆ ಸಮಸ್ಯೆಯಾಗುತ್ತಿದೆ. ಆದರೆ ಆ ಸಂಖ್ಯೆ ತೀರಾ ಕಡಿಮೆಯಿದೆ.

ನಗರದ ರಿಕ್ಷಾ ಚಾಲಕರು ಬ್ರಹ್ಮಾವರ, ಹೆಜಮಾಡಿ ಮೊದಲಾದ ಕಡೆಗಳಿಗೆ ಹೋಗಿ ಎಲ್‌ಪಿಜಿ ತುಂಬಿಸುತ್ತಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಜೀವನ ನಡೆಸುವುದು ಕಷ್ಟವಾಗಲಿದೆ ಎನ್ನುತ್ತಾರೆ ಉಡುಪಿಯ ರಿಕ್ಷಾ ಚಾಲಕ ರಾಕೇಶ್‌.

ಕೆಲವು ಕಡೆಗಳಲ್ಲಿ ಆಟೋಗ್ಯಾಸ್‌ ಲೋಡ್‌ ಬಂದ ತತ್‌ಕ್ಷಣವೇ ಮಾರಾಟ ಮಾಡುತ್ತಾರೆ. ಆದರೆ ಸಾಮಾನ್ಯ ದರಕ್ಕಿಂತ 10ರಿಂದ 20 ರೂ. (ಪ್ರತಿ ಕೆಜಿ) ಹೆಚ್ಚಳದಲ್ಲಿ ಮಾರಾಟ ಮಾಡುತ್ತಾರೆ. ರಿಕ್ಷಾ ಚಾಲಕರು ಸಮಸ್ಯೆ ಎದುರಿಸುವಂತಾಗಿದೆ ಎನ್ನುತ್ತಾರೆ ಆಟೋ ರಿಕ್ಷಾ ಸಂಘಟನೆಯ ಶಿವಾನಂದ ಮೂಡುಬೆಟ್ಟು.

ಪೂರೈಕೆಯೇ ಆಗುತ್ತಿಲ್ಲ ಆಟೋಗ್ಯಾಸ್‌ ಪೂರೈಕೆಯಾದರೆ ವಿತರಣೆಗೆ ಸಮಸ್ಯೆಯಿಲ್ಲ. ಆದರೆ ಪೂರೈಕೆಯೇ ಸರಿಯಾಗಿ ಆಗುತ್ತಿಲ್ಲ. ಈ ಬಗ್ಗೆ ಜಿಲ್ಲಾಡಳಿತ, ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದೇವೆ. ಪೂರೈಕೆ ಮಾಡುವ ಸಂಸ್ಥೆಗಳ ಜತೆ ನಿತ್ಯ ಮಾತುಕತೆ ನಡೆಸುತ್ತಿದ್ದೇವೆ ಎಂದು ಆಟೋ ಗ್ಯಾಸ್‌ ಮಾಲಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here