ವಿವೇಕಾನಂದ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

0
16

* ವಿಜ್ಞಾನ ವಿಭಾಗದ ಅಭಿರಾಮ್ ವಿ. ಭಟ್ ರಾಜ್ಯಕ್ಕೆ ದ್ವಿತೀಯ ರಾಂಕ್
* ರಾಜ್ಯಮಟ್ಟದಲ್ಲಿ ಅತ್ಯಧಿಕ ರಾಂಕ್‌ಗಳನ್ನು ಮುಡಿಗೇರಿಸಿಕೊಂಡ ಪುತ್ತೂರು ತಾಲೂಕಿನ ಏಕೈಕ ವಿದ್ಯಾಸಂಸ್ಥೆ
* 447 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಡೆಸಿದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-1 ರ ಫಲಿತಾಂಶ ಪ್ರಕಟಗೊಂಡಿದ್ದು, ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ಅತ್ಯಧಿಕ ರಾಂಕ್‌ಗಳನ್ನು ಬಾಚಿಕೊಳ್ಳುವುದರ ಮೂಲಕ ಅಮೋಘ ಸಾಧನೆಯನ್ನು ಮೆರೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಅಭಿರಾಮ್ ವಿ. ಭಟ್ (598) ರಾಜ್ಯಕ್ಕೆ ದ್ವಿತೀಯ ರಾಂಕ್, ತೀರ್ಥ ಶೆಟ್ಟಿ (595) 5ನೇ ರಾಂಕ್, ಶ್ರೀಜಾ (594) 6ನೇ ರಾಂಕ್, ಪ್ರಾಪ್ತಿ ಆಳ್ವ (593) 7ನೇ ರಾಂಕ್, ಮಂಗಳಾಮೃತ ಕೆ. ಆರ್ (592) 8ನೇ ರಾಂಕ್, ಪ್ರಸ್ತುತಿ ಪಿ(590) ಹಾಗೂ ಅದಿತಿ ಯು (590) 10ನೇ ರಾಂಕ್ ಪಡೆದಿರುತ್ತಾರೆ.

ವಾಣಿಜ್ಯ ವಿಭಾಗದಲ್ಲಿ ಮನ್ಮಿತ(596) ಹಾಗೂ ಬಿಂದು ಎಚ್. ಆರ್(596) 5ನೇ ರಾಂಕ್,ಪ್ರಮಥ ಎಂ. ಭಟ್ (594) 7ನೇ ರಾಂಕ್, ಶ್ರೀವಿದ್ಯಾ ಜೆ (593) 8ನೇ ರಾಂಕ್, ಸುಶ್ಮಿತಾ ಬಿ (592) 9ನೇ ರಾಂಕ್ ಹಾಗೂ ಸಹನ ಮಳಿ (591) 10ನೇ ರಾಂಕ್ ಗಳಿಸಿರುತ್ತಾರೆ.ಕಲಾ ವಿಭಾಗದಲ್ಲಿ ರೂಪಶ್ರೀ 584ಅಂಕಗಳನ್ನು ಪಡೆಯುವುದರ ಮೂಲಕ ತಾಲೂಕಿಗೆ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು ವಿವೇಕಾನಂದ ಪದವಿಪೂರ್ವ ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಡಾ ಕೆ ಎಂ ಕೃಷ್ಣ ಭಟ್ ಸಾಧಕ ವಿದ್ಯಾರ್ಥಿಗಳಿಗೆ ಶುಭ ಹಾರೈಸುತ್ತಾ, ವಿವೇಕಾನಂದ ವಿದ್ಯಾಸಂಸ್ಥೆಯು ಕಳೆದ ಆರು ದಶಕಗಳಿಂದಲೂ ಸತತವಾಗಿ ಅತ್ಯುತ್ತಮ ಫಲಿತಾಂಶಗಳನ್ನು ದಾಖಲಿಸುತ್ತಾ ಬಂದಿದ್ದು, ಈ ವರ್ಷವೂ ವಿದ್ಯಾರ್ಥಿಗಳ ಅಪ್ರತಿಮ ಸಾಧನೆಯು ವಿದ್ಯಾ ಸಂಸ್ಥೆಯ ಗರಿಮೆಯನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ದಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಮುಂದಿನ ದಿನಗಳಲ್ಲಿ ಇನ್ನಷ್ಟು ಶ್ರೇಷ್ಠ ಸಾಧನೆಗಳನ್ನು ಮಾಡುವ ದೃಢ ಸಂಕಲ್ಪದೊಂದಿಗೆ ವಿದ್ಯಾರ್ಥಿಗಳು ಮುಂದುವರೆಯಲಿ ಎಂದು ಆಶಿಸಿದರು. ಕಾಲೇಜು ಆಡಳಿತಮಂಡಳಿ ಅಧ್ಯಕ್ಷರಾದ ರವೀಂದ್ರ ಪಿ ಮಾತನಾಡುತ್ತಾ, ನಿರಂತರವಾದ ಶ್ರಮ, ಸಾಧನೆ ನಮ್ಮನ್ನು ಅತ್ಯುನ್ನತ ಶಿಖರಕ್ಕೆ ಕೊಂಡೊಯ್ದು ನಿಲ್ಲಿಸಬಲ್ಲದು ಎಂಬುದನ್ನು ನಮ್ಮ ವಿದ್ಯಾರ್ಥಿಗಳು ಇಂದು ಸಾಬೀತುಪಡಿಸಿದ್ದಾರೆ. ಈ ಸಾಧನೆಯ ಹಿಂದೆ ಅವಿರತವಾಗಿ ಶ್ರಮಿಸಿದ ಕಾಲೇಜಿನ ಗುರುವೃಂದ ಹಾಗೂ ವಿದ್ಯಾರ್ಥಿಗಳ ಪೋಷಕ ವೃಂದದವರಿಗೆ ಈ ಸಂದರ್ಭದಲ್ಲಿ ಅಭಿನಂದನೆಗಳನ್ನು ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯಮಟ್ಟದಲ್ಲಿ ವಿವಿಧ ರಾಂಕ್ ಗಳನ್ನು ಗಳಿಸಿದ ಸಾಧಕ ವಿದ್ಯಾರ್ಥಿಗಳಿಗೆ ಶಾಲು ಹೊದಿಸಿ ಸನ್ಮಾನಗೈದು ಸಿಹಿತಿಂಡಿ ಹಂಚಲಾಯಿತು. ಈ ಸಂದರ್ಭದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಲಕ್ಷ್ಮೀ ಪ್ರಸಾದ್ ಬೊಟ್ಯಾಡಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿಗಳಾದ ವೆಂಕಟರಮಣ ರಾವ್ ಮಂಕುಡೆ, ಕಾಲೇಜಿನ ಆಡಳಿತ ಮಂಡಳಿ ಕೋಶಾಧಿಕಾರಿಗಳಾದ ಸಚಿನ್ ಶೆಣೈ ಕೆ, ಕಾಲೇಜಿನವಸತಿ ನಿಲಯಗಳ ಆಡಳಿತ ಮಂಡಳಿ ಅಧ್ಯಕ್ಷರಾದ ರಮೇಶ್ ಪ್ರಭು, ಆಡಳಿತಾಧಿಕಾರಿಗಳಾದ ಗೋವಿಂದರಾಜ ಶರ್ಮ, ಕಾಲೇಜಿನ ಪ್ರಾಂಶುಪಾಲರಾದ ದೇವಿಚರಣ್ ರೈ ಎಂ, ವಿದ್ಯಾರ್ಥಿಗಳ ಪೋಷಕರು, ಉಪನ್ಯಾಸಕ, ಉಪನ್ಯಾಸಕೇತರ ವೃಂದದವರು ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಉಪನ್ಯಾಸಕಿ ದಯಾಮಣಿ ಟಿ.ಕೆ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here