ಮಂಗಳೂರು : ಜಗತ್ತಿನ ಇತಿಹಾಸವನ್ನು ಅವಲೋಕಿಸಿದರೆ ಗ್ರೀಕ್, ರೋಮ್ ಹಾಗೂ ಸಿಂಧು ನಾಗರಿಕತೆ ಪ್ರಮುಖವಾಗಿವೆ. ಇವುಗಳಲ್ಲಿ ಗ್ರೀಕ್ ಮತ್ತು ರೋಮ್ ನಾಗರಿಕತೆಗಳು ನಾಶವಾದರೂ, ಭಾರತೀಯ ಸಿಂಧು ನಾಗರಿಕತೆ ಮಾತ್ರ ಇಂದಿಗೂ ತನ್ನ ಅಸ್ತಿತ್ವ ಉಳಿಸಿಕೊಂಡಿದೆ. ಇದಕ್ಕೆ ಇಲ್ಲಿನ ಜನರ ಆಚರಣೆ, ನಂಬಿಕೆ, ನಡವಳಿಕೆ ಹಾಗೂ ಸಂಸ್ಕೃತಿಯೇ ಮುಖ್ಯ ಕಾರಣ ಎಂದು ಮಂಗಳೂರು ವಿವಿ ಉಪನ್ಯಾಸಕ ಡಾ.ಮಾಧವ ಎಂ.ಕೆ. ಹೇಳಿದರು.
ತುಳುಕೂಟ ಕುಡ್ಲ ವತಿಯಿಂದ ಮಂಗಳಾದೇವಿ ದೇವಾಲಯದ ರಾಜಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ‘ಬಿಸು ಪರ್ಬ-2026’ದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಭಾರತೀಯ ಹಬ್ಬಗಳಿಗೆ ತನ್ನದೇ ಆದ ಮಹತ್ವ ಹಾಗೂ ಭಕ್ತಿಯಿದೆ. ಜಗತ್ತಿನ ಯಾವುದೇ ಲೆಕ್ಕಾಚಾರ ತಪ್ಪಿದರೂ, ಭಾರತೀಯರ ಪಂಚಾಂಗ ಲೆಕ್ಕಾಚಾರದಲ್ಲಿ ತಪ್ಪು ಕಾಣುವುದಿಲ್ಲ. ಗ್ರಹಣ, ಸಂಕ್ರಮಣ ಮೊದಲಾದವುಗಳು ನಿಖರ ದಿನಾಂಕಗಳಲ್ಲಿ ಸಂಭವಿಸುತ್ತವೆ. ಹೊಸ ವರ್ಷದ ಆರಂಭವಾದ ಬಿಸು ಹಬ್ಬ ಸಮೃದ್ಧಿಯ ಸಂಕೇತ. ನಿತ್ಯ ನೂತನದ ಸಂದೇಶ ನೀಡುತ್ತದೆ ಎಂದರು.
ಮಂಗಳಾದೇವಿ ದೇವಸ್ಥಾನದ ಮೊಕ್ತೇಸರ ಅರುಣ್ ಐತಾಳ್ ಉದ್ಘಾಟಿಸಿದರು. ತುಳುಕೂಟ ಕುಡ್ಲ ಅಧ್ಯಕ್ಷೆ ಹೇಮಾ ದಾಮೋದರ ನಿಸರ್ಗ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾವೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಲೋಕೇಶ್ ಭಂಡಾರಿ, ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ಶಾಲೆಟ್ ಪಿಂಟೋ ಉಪಸ್ಥಿತರಿದ್ದರು.
ಪಂಚಾಂಗ ಶ್ರವಣದೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ತುಳುಕೂಟ ಪ್ರಧಾನ ಕಾರ್ಯದರ್ಶಿ ರವಿ ಅಲೆವೂರಾಯ ನಿರೂಪಿಸಿದರು. ಉಪಾಧ್ಯಕ್ಷ ಜೆ.ವಿ.ಶೆಟ್ಟಿ ಸ್ವಾಗತಿಸಿದರು. ಕೋಶಾಧಿಕಾರಿ ನಾರಾಯಣ ಬಿ.ಡಿ. ವಂದಿಸಿದರು.
ಸಭಾ ಕಾರ್ಯಕ್ರಮ ಬಳಿಕ ಶರಭೇಶ್ವರ ಕಲಾವಿದರು ಕುಡ್ಲ ತಂಡದಿಂದ ಮೋಹನ್ ಕೆ.ಬೋಳಾರ್ ಸಾಹಿತ್ಯ ಮತ್ತು ನಾಗೇಶ್ ದೇವಾಡಿಗ ಕದ್ರಿ ನಿರ್ದೇಶನದಲ್ಲಿ ‘ಮುಗ ಪುಂಚ’ ತುಳು ಜಾನಪದ ನಾಟಕ ಪ್ರದರ್ಶನಗೊಂಡಿತು.
ರತ್ನವರ್ಮ ಹೆಗ್ಗಡೆ ಪ್ರಶಸ್ತಿ ಪ್ರದಾನ
ಅಪ್ರಕಟಿತ ನಾಟಕ ಕೃತಿ ಸ್ಪರ್ಧೆ ವಿಜೇತರಿಗೆ ‘ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ಪ್ರಶಸ್ತಿ-2026’ ಪ್ರದಾನ ಮಾಡಲಾಯಿತು. ರಾಜೇಶ್ ಶೆಟ್ಟಿ ದೋಟ(ಕೃತಿ: ಒಂಜಿ ಗುತ್ತುದ ಕತೆ) ಪ್ರಥಮ, ವಿಲಾಸ್ ಕುಮಾರ್ ನಿಟ್ಟೆ (ಕೃತಿ: ಆಯೆ ಆನ್ ಮಗೆ) ದ್ವಿತೀಯ, ರಮ್ಯಾ ಬಿ.ಸಿ.ರೋಡ್(ಕೃತಿ: ಬಾಲೆ ಪ್ರಹ್ಲಾದೆ) ತೃತೀಯ ಬಹುಮಾನ ಪಡೆದರು.

