ತುಳುವರ ಹೊಸ ವರ್ಷಕ್ಕೆ ವಿಶೇಷ ಕಾಣಿಕೆ : ‘ಕಾಲಕೊಂದೆ’ ತುಳು ಪಂಚಾಂಗ ಬಿಡುಗಡೆ

0
50

ಉಡುಪಿ: ತುಳು ಭಾಷೆ ಮತ್ತು ಸಂಸ್ಕೃತಿಯ ಸಂರಕ್ಷಣೆಯ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿ, ಜೈ ತುಲುನಾಡು (ರಿ.) ಉಡುಪಿ ಘಟಕದ ನೇತೃತ್ವ ಹಾಗೂ ಜೈ ತುಲುನಾಡ್(ರಿ.)ಬೆಂಗಳೂರು ಘಟಕದ ಸಹಕಾರದೊಂದಿಗೆ ರೂಪಿಸಲಾದ ತುಳುವರ ಕಾಲಮಾನದ ‘ಕಾಲಕೊಂದೆ’ ಪಂಚಾಂಗವನ್ನು ಉಡುಪಿ ಶ್ರೀ ಕೃಷ್ಣ ಮಠದಲ್ಲಿ ತುಳುವರ ಹೊಸ ವರ್ಷವಾದ ಸೌರಮಾನ ಯುಗಾದಿ ಹಬ್ಬದಂದು ಪರ್ಯಾಯ ಮಠಾಧೀಶರಾದ ಶಿರೂರು ಮಠದ ಶ್ರೀ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿಯವರು ಬಿಡುಗಡೆ ಗೊಳಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸ್ವಾಮೀಜಿಯವರು, ತುಳು ಭಾಷೆಯನ್ನು ಉಳಿಸಲು ಜೈ ತುಲುನಾಡು(ರಿ.) ಸಂಘಟನೆಯು ಸಾಕಷ್ಟು ಪ್ರಯತ್ನ ಮಾಡುತ್ತಿವೆ ಎಂದು ಹೇಳಿ, ತುಳುವರಿಗೆ ಭಾಷೆ ಮಾತನಾಡಲು ತಿಳಿದಿದ್ದರೂ ತಮ್ಮ ಮೂಲ ಲಿಪಿಯನ್ನು ಮರೆತಿದ್ದಾರೆ ಎಂಬುದನ್ನು ವಿಷಾದಿಸಿದರು. ತುಳು ಭಾಷೆಗೆ ತನ್ನದೇ ಆದ ಲಿಪಿ ಇದೆ ಎಂಬುದು ಅನೇಕರಿಗೆ ತಿಳಿದಿಲ್ಲವಾಗಿದ್ದು, ಲಿಪಿಯ ಉಳಿವಿಗಾಗಿ ನಡೆಯುತ್ತಿರುವ ಹೋರಾಟದ ಭಾಗವಾಗಿ ‘ಕಾಲಕೊಂದೆ’ ಬಿಡುಗಡೆಗೊಂಡಿದೆ ಎಂದರು. ಸೌರಮಾನ ಪದ್ಧತಿಯ ಪ್ರಕಾರ ಕಾಲದ ಹೆಸರುಗಳು,ವಾರ ತಿಂಗಳುಗಳು, ತುಳುವರ ಹಬ್ಬಹರಿದಿನಗಳ ವಿವರಗಳು ಈ ಪಂಚಾಂಗದಲ್ಲಿ ಲಭ್ಯವಿದ್ದು, ಜೈ ತುಲುನಾಡ್(ರಿ.) ಸಂಘಟನೆಯ ಈ ಕಾರ್ಯಕ್ಕೆ ಎಲ್ಲರೂ ಬೆಂಬಲ ನೀಡಬೇಕು ಎಂದು ತಿಳಿಸಿದರು. ನಾವು ತುಳು ಲಿಪಿಯನ್ನು ಕಲಿಯುವುದಲ್ಲದೆ, ಇತರರಿಗೂ ಕಲಿಸುವ ಮೂಲಕ ಅದರ ಉಳಿವಿಗೆ ಕೈಜೋಡಿಸಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಏಪ್ರಿಲ್ 4ರಂದು ಉಡುಪಿಯ ಪ್ರಸಿದ್ಧ ತುಳು ಸಾಹಿತಿ ಮತ್ತು ಸ್ವಾತಂತ್ರ್ಯಹೋರಾಟಗಾರ ಎಸ್.ಯು. ಪಣಿಯಾಡಿ ಅವರ ಜನ್ಮದಿನದ ಅಂಗವಾಗಿ ಆಯೋಜಿಸಲಾಗಿದ್ದ ‘ತುಲುವ ಬೊಲ್ಪು ಪಣಿಯಾಡಿ ನೆಂಪು’ ಆನ್‌ಲೈನ್ ಭಾಷಣ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸ್ಪರ್ಧೆಯಲ್ಲಿ ಜಯಕರ ಕುಂದರ್, ಕಟಪಾಡಿ ಪ್ರಥಮ ಸ್ಥಾನ ಮತ್ತು ಶ್ರುತಿ ಎ. ಶೆಟ್ಟಿ, ಕಿನ್ನಿಗೋಳಿ ದ್ವಿತೀಯ ಸ್ಥಾನ ಪಡೆದಿದ್ದರು.

ಈ ಕಾರ್ಯಕ್ರಮದಲ್ಲಿ ಶಿರೂರು ಮಠದ ದಿವಾನರಾದ ಉದಯ್ ಕುಮಾರ್ ಸರಳತ್ತಾಯ, ಮಠದ ಪ್ರಮುಖರಾದ ರಾಮಮೂರ್ತಿ, ಜೈ ತುಲುನಾಡ್(ರಿ.) ಉಡುಪಿ ಘಟಕದ ಅಧ್ಯಕ್ಷರಾದ ಸಂತೋಷ್ ಎನ್.ಎಸ್. ಕಟಪಾಡಿ, ಕೋಶಾಧಿಕಾರಿಯಾದ ಅಂಬಿಕಾರಾವ್ ಕನ್ನರ್ಪಾಡಿ, ತುಲುವರ ಕ್ಯಾಲೆಂಡರನ್ನು ವಿನ್ಯಾಸಗೊಳಿಸಿದ ಪ್ರಶಾಂತ್ ಕುಂಜೂರು ಹಾಗೂ ಕೇಂದ್ರಸಮಿತಿಯ ಜೊತೆಕೋಶಾಧಿಕಾರಿಯಾದ ನಾಗರಾಜ್ ಶೆಟ್ಟಿಗಾರ್ ಇಂದ್ರಾಳಿ ಉಪಸ್ಥಿತರಿದ್ದರು. ತುಳು ಲಿಪಿಯನ್ನು ದೈನಂದಿನ ಬಳಕೆಗೆ ತರುವ ಮತ್ತು ತುಳು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ದಾಟಿಸುವ ಈ ಮಹತ್ವದ ಪ್ರಯತ್ನಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here