ನೈಪುಣ್ಯತೆ ಹಾಗೂ ಚೈತನ್ಯತೆ ನಮ್ಮ ಯಶಸ್ಸಿಗೆ ದಾರಿ: ಡಾ. ನಾಗೇಶ್ ಎ

0
29

ಬ್ರಹ್ಮಾವರ: ಗ್ರಾಮಾಭಿವೃದ್ಧಿ ಮತ್ತು ಸ್ವ ಉದ್ಯೋಗ ತರಬೇತಿ (ರುಡ್ ಸೆಟ್) ಸಂಸ್ಥೆ, ಬ್ರಹ್ಮಾವರ ಇವರ ಆಶ್ರಯದಲ್ಲಿ ಡೆಸ್ಕ್‌ಟಾಪ್ ಪಬ್ಲಿಷಿಂಗ್ ತರಬೇತಿಯ ಉದ್ಘಾಟನಾ ಸಮಾರಂಭವು ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಡಾ. ನಾಗೇಶ್ ಎ. ಹಿರಿಯ ಪ್ರಬಂಧಕರು, ಪ್ರಾದೇಶಿಕ ಕಚೇರಿ, ಕೆನರಾ ಬ್ಯಾಂಕ್, ಈಸ್ಟ್ ಬೆಂಗಳೂರು, ರುಡ್ ಸೆಟ್ ಸಂಸ್ಥೆ ದೇಶದಾದ್ಯಂತ ಸಾವಿರಾರು ನಿರುದ್ಯೋಗ ಯುವಕರಿಗೆ ಸ್ವ ಉದ್ಯೋಗದ ಮೂಲಕ ಆರ್ಥಿಕ ಸಬಲತೆ ನೀಡುತ್ತಿರುವ ಮಹತ್ವದ ಸಂಸ್ಥೆಯಾಗಿದೆ ಎಂದು ಹೇಳಿದರು. ವ್ಯಕ್ತಿಯಲ್ಲಿರುವ ನೈಪುಣ್ಯತೆ ಹಾಗೂ ಚೈತನ್ಯತೆ ಯಶಸ್ಸಿನ ಹಾದಿಯನ್ನು ತೋರಿಸುತ್ತದೆ. ವಿಭಿನ್ನ ಚಿಂತನೆ ಮತ್ತು ಹೊಸತನವನ್ನು ಅಳವಡಿಸಿಕೊಂಡರೆ ಯಶಸ್ಸು ಸಾಧಿಸಬಹುದು ಎಂದು ತಿಳಿಸಿದರು. ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.

ಇನ್ನೋರ್ವ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಗಿರಿಯಪ್ಪ ಎಂ., ಹಿರಿಯ ಪ್ರಬಂಧಕರು, ಕೆನರಾ ಬ್ಯಾಂಕ್ ಹಾಗೂ ನಿವೃತ್ತ ನಿರ್ದೇಶಕರು, ಆರ್‌ಸೆಟಿ ಬೆಂಗಳೂರು, ತಮ್ಮ ಅನುಭವಗಳನ್ನು ಹಂಚಿಕೊಂಡು ಸಂಸ್ಥೆಯಲ್ಲಿ ತರಬೇತಿ ಪಡೆದು ಯಶಸ್ವಿಯಾದವರ ಕಥನಗಳನ್ನು ವಿವರಿಸಿ ಶಿಬಿರಾರ್ಥಿಗಳನ್ನು ಹುರಿದುಂಬಿಸಿದರು. ಪ್ರತಿಯೊಬ್ಬರಲ್ಲೂ ವಿಶೇಷ ಸಾಮರ್ಥ್ಯವಿದ್ದು, ಅದನ್ನು ಸಮರ್ಪಕವಾಗಿ ಬಳಸಿಕೊಂಡು ಸ್ವ ಉದ್ಯೋಗ ಪ್ರಾರಂಭಿಸಬೇಕು ಎಂದು ಹೇಳಿದರು.

ಇನ್ನೋರ್ವ ಅತಿಥಿಯಾಗಿ ಆಗಮಿಸಿದ ಶ್ರೀಧರ್, ಹಿರಿಯ ಪ್ರಬಂಧಕರು, ಕೆನರಾ ಬ್ಯಾಂಕ್, ಬೆಂಗಳೂರು, ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ತರಬೇತಿಯ ಮೂಲಕ ಸಬಲತೆ ಪಡೆಯಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರುಡ್ ಸೆಟ್ ಸಂಸ್ಥೆಯ ನಿರ್ದೇಶಕರಾದ ಡಾ. ಬೊಮ್ಮಯ್ಯ ಎಂ., ಅತಿಥಿಗಳ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಯಶಸ್ವಿ ಉದ್ಯಮಿಗಳಾಗಬೇಕು ಎಂದು ಶಿಬಿರಾರ್ಥಿಗಳಿಗೆ ಕರೆ ನೀಡಿದರು.

ಈ ಸಂದರ್ಭದಲ್ಲಿ  ಬಸುದೇವ ದಾಸ್ (ಆಫೀಸರ್, ಕೆನರಾ ಬ್ಯಾಂಕ್, ಬೆಂಗಳೂರು) ಹಾಗೂ ಸುಮತಿ (ಅತಿಥಿ ಉಪನ್ಯಾಸಕಿ – ಟೈಲರಿಂಗ್ ತರಬೇತಿ) ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಉಪನ್ಯಾಸಕಿ  ಚೈತ್ರ ಕೆ. ನಿರೂಪಿಸಿ ಸ್ವಾಗತಿಸಿದರು. ಕಚೇರಿ ಸಹಾಯಕ ಶಾಂತಪ್ಪ ವಂದಿಸಿದರು.

LEAVE A REPLY

Please enter your comment!
Please enter your name here