ಅಚ್ಚೇದಿನ್ ಹೇಳಿ ಕೊಚ್ಚೇದಿನ್ ನೀಡಿದ್ದಾರೆ : ಗ್ಯಾಸ್ ಬೆಲೆ ಏರಿಕೆ ವಿರೋಧಿಸಿ ಕಾರ್ಕಳದಲ್ಲಿ ಕಾಂಗ್ರೆಸ್ ಪ್ರತಿಭಟನೆ

0
75

ಕಾರ್ಕಳ : ಅಡುಗೆ ಅನಿಲದ ಬೆಲೆ ಏರಿಕೆಯನ್ನು ಖಂಡಿಸಿ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಯುವ ಕಾಂಗ್ರೆಸ್ ಸಮಿತಿ ಕಾರ್ಕಳ ವತಿಯಿಂದ ಮೇ 6ರಂದು ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಪ್ರಮುಖ ಕಾಂಗ್ರೆಸ್ ನಾಯಕ ಉದಯ್ ಶೆಟ್ಟಿ ಮುನಿಯಾಲು ಮಾತನಾಡಿ, “ಅಚ್ಚೇದಿನ್ ಕೊಡುತ್ತೇವೆ ಎಂದು ಭರವಸೆ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಜನರಿಗೆ ಕೊಚ್ಚೇದಿನ್ ನೀಡಿದೆ” ಎಂದು ಆರೋಪಿಸಿದರು. ಗ್ಯಾಸ್, ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆಯಿಂದ ಸಾಮಾನ್ಯ ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.

ಅಂತರಾಷ್ಟ್ರೀಯ ಯುದ್ಧ ಪರಿಸ್ಥಿತಿಯಿಂದ ಇಂಧನ ಬೆಲೆ ಏರಿಕೆಯಾಗಿರಬಹುದು. ಆದರೆ ಇತರೆ ವಸ್ತುಗಳ ಬೆಲೆ ಏಕೆ ಕಡಿಮೆಯಾಗಿಲ್ಲ ಎಂದು ಪ್ರಶ್ನಿಸಿದ ಅವರು, “ಇಂದು ಗ್ಯಾಸ್ ಬೆಲೆ ಏರಿದೆ, ನಾಳೆ ಮನೆಯೊಳಗಿನ ಆರ್‌ಟಿಸಿ ಬದಲಾದರೂ ಅಚ್ಚರಿಯಿಲ್ಲ” ಎಂದು ಟೀಕಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ಮಾತನಾಡಿ, “ಗ್ಯಾಸ್ ದರವನ್ನು ಏಕಕಾಲದಲ್ಲಿ ಇಷ್ಟು ಪ್ರಮಾಣದಲ್ಲಿ ಏರಿಸಿದ ಮೊದಲ ಪ್ರಧಾನಮಂತ್ರಿ ನರೇಂದ್ರ ಮೋದಿ. ಬೆಲೆ ಏರಿಕೆಯ ಹೊಸ ಇತಿಹಾಸ ನಿರ್ಮಿಸಿದ್ದಾರೆ” ಎಂದರು.

ಹಿರಿಯ ಕಾಂಗ್ರೆಸ್ ನಾಯಕ ಶೇಖರ ಮಡಿವಾಳ ಮಾತನಾಡಿ, “ದೇಶದ ಆರ್ಥಿಕತೆ ದುಸ್ಥಿತಿಗೆ ತಲುಪುತ್ತಿದೆ. ಕೇಂದ್ರ ಸರ್ಕಾರದ ವಿದೇಶಾಂಗ ನೀತಿಯ ವೈಫಲ್ಯ ಇದಕ್ಕೆ ಕಾರಣ” ಎಂದು ಆರೋಪಿಸಿದರು. ರಾಜ್ಯ ಹಾಗೂ ಇತರೆ ರಾಜ್ಯಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿರುವುದರಿಂದ ಪಕ್ಷ ಪುನಶ್ಚೇತನಗೊಳ್ಳುತ್ತಿದೆ ಎಂದರು.

ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್ ಚಂದ್ರಪಾಲ್ ನಕ್ರ ಮಾತನಾಡಿ, “ಗ್ಯಾಸ್ ಬೆಲೆ ಏರಿಕೆ ಸರ್ಕಾರದ ಕೈಯಲ್ಲಿ ಇಲ್ಲವೆಂದರೆ ಬಿಜೆಪಿ ಏಕೆ ಆಡಳಿತ ನಡೆಸುತ್ತಿದೆ?” ಎಂದು ಪ್ರಶ್ನಿಸಿದರು. ಪೆಟ್ರೋಲಿಯಂ ಸಚಿವಾಲಯದ ಪಾತ್ರವೇನು ಎಂದು ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಭಾನು ಭಾಸ್ಕರ್ ಮಾತನಾಡಿ, “ಕಾಂಗ್ರೆಸ್ ಅವಧಿಯಲ್ಲಿ ಗ್ಯಾಸ್‌ನಲ್ಲಿ ಅಡುಗೆ ಮಾಡುತ್ತಿದ್ದ ಮಹಿಳೆಯರು ಇಂದು ಕಟ್ಟಿಗೆ ತರಲು ಕಾಡಿಗೆ ಹೋಗುವ ಪರಿಸ್ಥಿತಿ ಬಂದಿದೆ” ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಕಾರ್ಕಳ ಯೂತ್ ಕಾಂಗ್ರೆಸ್ ಅಧ್ಯಕ್ಷ ಸೂರಜ್ ಶೆಟ್ಟಿ ನಕ್ಕೆ, ನಗರ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಲಿಕ್ ಅತ್ತೂರ್, ಮಾಜಿ ಪುರಸಭಾ ಅಧ್ಯಕ್ಷರಾದ ರೆಹಮತ್ ಎನ್ ಶೇಖ್, ಪ್ರತಿಮಾ ರಾಣೆ, ಮಾಜಿ ಸದಸ್ಯರಾದ ವಿನ್ನಿ ಬೋಲ್ಡ್ ಮೆಂಡೋನ್ಯ, ವಿವೇಕಾನಂದ ಶೆಣೈ, ಕೆಎಂಎಫ್ ನಿರ್ದೇಶಕ ಸುಧಾಕರ್ ಶೆಟ್ಟಿ ಮುಡಾರು ಸೇರಿದಂತೆ ಹಲವರು ಭಾಗವಹಿಸಿದ್ದರು.

ಕಾರ್ಯಕ್ರಮವನ್ನು ಬ್ಲಾಕ್ ಕಾಂಗ್ರೆಸ್ ವಕ್ತಾರ ಪ್ರದೀಪ್ ಬೇಲಾಡಿ ನಿರ್ವಹಿಸಿದ್ದು, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಅಜಿತ್ ಹೆಗ್ಡೆ ಮಾಳ ವಂದಿಸಿದರು.

LEAVE A REPLY

Please enter your comment!
Please enter your name here