ರಾಜ್ಯ ಸರ್ಕಾರದಿಂದ ಕ್ರೀಡಾಪಟುಗಳಿಗೆ ಭರ್ಜರಿ ಗುಡ್ ನ್ಯೂಸ್: ಸರ್ಕಾರಿ ಹುದ್ದೆಗಳಲ್ಲಿ 2% ಮೀಸಲಾತಿ ಜಾರಿ

0
25

ಬೆಂಗಳೂರು : ಕರ್ನಾಟಕ ರಾಜ್ಯ ಸರ್ಕಾರ ಕ್ರೀಡಾ ಕ್ಷೇತ್ರದ ಸಾಧಕರಿಗೆ ಮಹತ್ವದ ಸಿಹಿ ಸುದ್ದಿ ನೀಡಿದ್ದು, ಸಿವಿಲ್ ಸೇವೆಗಳ ನೇಮಕಾತಿಯಲ್ಲಿ ಕ್ರೀಡಾಪಟುಗಳಿಗೆ ಶೇ. 2 ರಷ್ಟು ಮೀಸಲಾತಿ ನೀಡಲು ಸಚಿವ ಸಂಪುಟ ಸಭೆಯಲ್ಲಿ ಅಧಿಕೃತವಾಗಿ ಅನುಮೋದನೆ ನೀಡಲಾಗಿದೆ.

ಈ ಕುರಿತು ನಡೆದ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ತಿದ್ದುಪಡಿ ನಿಯಮಗಳು-2026ಗೆ ಅನುಮೋದನೆ ನೀಡಲಾಗಿದೆ ಎಂದು ಸಚಿವ ಎಚ್.ಕೆ. ಪಾಟೀಲ್ ತಿಳಿಸಿದ್ದಾರೆ.

ಈ ಹಿಂದೆ ಕ್ರೀಡಾಪಟುಗಳಿಗೆ ಶೇ. 2 ಮೀಸಲಾತಿ ಘೋಷಿಸಲಾಗಿದ್ದರೂ, ತಾಂತ್ರಿಕ ಕಾರಣಗಳಿಂದ 2024ರ ಡಿಸೆಂಬರ್‌ನಲ್ಲಿ ಅದು ಸ್ಥಗಿತಗೊಂಡಿತ್ತು. ಇದೀಗ ನಿಯಮ 9ಕ್ಕೆ ತಿದ್ದುಪಡಿ ಮಾಡಿ ಮತ್ತೆ ಜಾರಿಗೆ ತರಲು ಸರ್ಕಾರ ಅಂತಿಮ ನಿರ್ಧಾರ ಕೈಗೊಂಡಿದೆ.

ಯುವ ಕ್ರೀಡಾಪಟುಗಳಿಗೆ ಹೊಸ ಅವಕಾಶ

ಹೊಸ ನಿಯಮದ ಪ್ರಕಾರ ರಾಜ್ಯದ ಎಲ್ಲಾ ಸರ್ಕಾರಿ ಇಲಾಖೆಗಳ ನೇರ ನೇಮಕಾತಿಯಲ್ಲಿ ಕ್ರೀಡಾ ಸಾಧಕರಿಗೆ ಮೀಸಲಾತಿ ಅನ್ವಯವಾಗಲಿದೆ. ಇದರಿಂದ ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗ ಪಡೆಯಲು ಹೆಚ್ಚಿನ ಅವಕಾಶ ದೊರೆಯಲಿದೆ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸಲ್ಲಿಸಿದ ಪ್ರಸ್ತಾವನೆಗೆ ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆಯ ನಂತರ ಅನುಮೋದನೆ ದೊರೆತಿದೆ. ಕ್ರೀಡಾ ಕ್ಷೇತ್ರದ ಪ್ರತಿಭೆಗಳಿಗೆ ಇದು ದೊಡ್ಡ ಉತ್ತೇಜನವಾಗಲಿದೆ ಎಂದು ಸರ್ಕಾರ ತಿಳಿಸಿದೆ.

LEAVE A REPLY

Please enter your comment!
Please enter your name here