ಅನಂತಪುರಂ : ವಿದ್ಯಾಭ್ಯಾಸ ಮಾಡಿ ಸ್ವಂತ ಜೀವನ ಕಟ್ಟಿಕೊಳ್ಳಬೇಕೆಂಬ ಕನಸು ಕಂಡಿದ್ದ ಪಿಯು ವಿದ್ಯಾರ್ಥಿನಿಯೊಬ್ಬಳು, ಮನೆಯವರು ಮದುವೆ ಮಾಡಿಸಿಬಿಡುತ್ತಾರೆ ಎಂಬ ಆತಂಕದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.
ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಗಾರ್ಲದಿನ್ನೆ ಮಂಡಲದ ಮರ್ತಾದ್ ಗ್ರಾಮದ ರೂಪಕೀರ್ತನಾ (17) ಮೃತ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ.
ರೂಪಕೀರ್ತನಾ ಪಿಯುಸಿ ಮೊದಲ ವರ್ಷದ ಪರೀಕ್ಷೆ ಮುಗಿಸಿ ಬೇಸಿಗೆ ರಜೆಯಲ್ಲಿ ಮನೆಯಲ್ಲಿದ್ದಳು. ಈ ವೇಳೆ ಪೋಷಕರು “ಒಳ್ಳೆಯ ಸಂಬಂಧ ಬಂದರೆ ಮಗಳಿಗೆ ಮದುವೆ ಮಾಡೋಣ” ಎಂದು ಮನೆಯಲ್ಲೇ ಮಾತುಕತೆ ನಡೆಸುತ್ತಿದ್ದರು ಎನ್ನಲಾಗಿದೆ. ಇದನ್ನು ಕೇಳಿ ವಿದ್ಯಾರ್ಥಿನಿ ತೀವ್ರವಾಗಿ ಮನನೊಂದಿದ್ದಾಳೆ.
“ನನಗೆ ಈಗಲೇ ಮದುವೆ ಬೇಡ, ನಾನು ಓದಿ ಉದ್ಯೋಗ ಮಾಡಬೇಕು” ಎಂದು ಪೋಷಕರಿಗೆ ಮನವಿ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಆದರೆ ಪೋಷಕರು ಉತ್ತಮ ಸಂಬಂಧ ಬಂದರೆ ಮದುವೆ ಮಾಡುತ್ತೇವೆ ಎಂದು ಹೇಳಿದ್ದರಿಂದ ಆಕೆ ಭಯ ಮತ್ತು ಆತಂಕಕ್ಕೆ ಒಳಗಾಗಿದ್ದಳು ಎಂದು ತಿಳಿದುಬಂದಿದೆ.
ತನ್ನ ವಿದ್ಯಾಭ್ಯಾಸದ ಕನಸು ನಾಶವಾಗಬಹುದು ಎಂಬ ಆತಂಕದಲ್ಲಿ ರೂಪಕೀರ್ತನಾ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆರಂಭದಲ್ಲಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾಳೆ.
ಈ ಘಟನೆ ಶಿಕ್ಷಣ, ಬಾಲ್ಯ ವಿವಾಹ ಮತ್ತು ಮಕ್ಕಳ ಮಾನಸಿಕ ಒತ್ತಡದ ಕುರಿತು ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ.

