ರಾಜ್ಯದಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟಕ್ಕೆ ಸಂಬಂಧಿಸಿದಂತೆ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತಂದಿದ್ದು, ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಜಾಗತಿಕ ಮಟ್ಟದಲ್ಲಿ ಇಂಧನ ಸರಬರಾಜಿನ ಮೇಲೆ ಹೆಚ್ಚುತ್ತಿರುವ ಒತ್ತಡ ಹಾಗೂ ಅಸ್ಥಿರ ಪರಿಸ್ಥಿತಿಯ ಹಿನ್ನೆಲೆ, ಪೆಟ್ರೋಲಿಯಂ ನಿಯಮ 2022 ಅನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯದ ಎಲ್ಲಾ ಪೆಟ್ರೋಲ್ ಬಂಕ್‌ಗಳು ಸರ್ಕಾರ ನಿಗದಿ ಮಾಡಿದ ನಿಯಮಾವಳಿಗಳ ಪ್ರಕಾರವೇ ಇಂಧನ ಮಾರಾಟ ಮಾಡಬೇಕೆಂದು ಸೂಚಿಸಲಾಗಿದೆ. ವಿಶೇಷವಾಗಿ ಇಂಧನವನ್ನು ಅಗತ್ಯಕ್ಕಿಂತ ಹೆಚ್ಚು ಸಂಗ್ರಹಿಸಿ ಕೃತಕ ಅಭಾವ ಸೃಷ್ಟಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.
ಸರ್ಕಾರದ ಹೊಸ ಮಾರ್ಗಸೂಚಿಯಲ್ಲಿ ಏನೆಲ್ಲಿದೆ?
- ವಾಹನಗಳ ಕಂಟೇನರ್‌ಗಳಿಗೆ ಗರಿಷ್ಠ 200 ಲೀಟರ್ ಮಿತಿ
- ಬಾಟಲಿ ಹಾಗೂ ಕ್ಯಾನ್‌ಗಳಿಗೆ ಪೆಟ್ರೋಲ್-ಡೀಸೆಲ್ ನೀಡುವಂತಿಲ್ಲ
- ಅನಧಿಕೃತ ಕಂಟೇನರ್‌ಗಳಿಗೆ ಇಂಧನ ತುಂಬಿಸುವುದಕ್ಕೆ ನಿಷೇಧ
- ವಾಹನಗಳ ಟ್ಯಾಂಕ್‌ಗಳಿಗೆ ಮಾತ್ರ ಇಂಧನ ಪೂರೈಕೆ
- ಚಿಲ್ಲರೆ ಮಾರಾಟದ ಹೆಸರಿನಲ್ಲಿ ಸಗಟು ವ್ಯಾಪಾರಕ್ಕೆ ಅವಕಾಶವಿಲ್ಲ
- ಸಗಟು ವ್ಯಾಪಾರ ನಿಗದಿತ ಸ್ಥಳಗಳಲ್ಲಿ ಮಾತ್ರ ನಡೆಯಬೇಕು
- ಕೃಷಿ ಚಟುವಟಿಕೆಗಳಿಗೆ ಅಗತ್ಯ ಪ್ರಮಾಣದಲ್ಲಿ ಡೀಸೆಲ್ ಪೂರೈಕೆ
- ಅಧಿಕಾರಿಗಳಿಂದ ಕಾಲಕಾಲಕ್ಕೆ ಬಂಕ್‌ಗಳ ಪರಿಶೀಲನೆ
- ಜಿಲ್ಲಾಧಿಕಾರಿಗಳಿಂದ ನಿರಂತರ ಮಾನಿಟರಿಂಗ್
ಸಾರ್ವಜನಿಕರಲ್ಲಿ ಏಕೆ ಆತಂಕ?
ಹೊಸ ನಿಯಮ ಜಾರಿಯಾದ ನಂತರ ಸಾಮಾಜಿಕ ಜಾಲತಾಣಗಳಲ್ಲಿ “ರಾಜ್ಯದಲ್ಲಿ ಇಂಧನ ಕೊರತೆ ಉಂಟಾಗುತ್ತದೆಯಾ?” ಎಂಬ ಪ್ರಶ್ನೆಗಳು ಹೆಚ್ಚಾಗಿವೆ. ಆದರೆ ಅಧಿಕಾರಿಗಳು ಸ್ಪಷ್ಟಪಡಿಸಿರುವಂತೆ, ರಾಜ್ಯದಲ್ಲಿ ಇಂಧನ ಕೊರತೆ ಇಲ್ಲ ಮತ್ತು ಸರಬರಾಜು ಸಾಮಾನ್ಯವಾಗಿಯೇ ಮುಂದುವರಿಯಲಿದೆ.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹೇಳುವಂತೆ, ಇದು ಮುನ್ನೆಚ್ಚರಿಕಾ ಕ್ರಮವಾಗಿದ್ದು, ಕಾಳಸಂತೆಯಲ್ಲಿ ಇಂಧನ ಮಾರಾಟ, ಅತಿಯಾದ ಸಂಗ್ರಹಣೆ ಹಾಗೂ ದುರುಪಯೋಗ ತಡೆಯುವುದೇ ಮುಖ್ಯ ಉದ್ದೇಶವಾಗಿದೆ.
ಜಾಗತಿಕ ಪರಿಸ್ಥಿತಿಯ ಪರಿಣಾಮ
ತಜ್ಞರ ಪ್ರಕಾರ, ಮಧ್ಯಪ್ರಾಚ್ಯ ಸೇರಿದಂತೆ ಹಲವು ಭಾಗಗಳಲ್ಲಿ ಉಂಟಾಗುತ್ತಿರುವ ಉದ್ವಿಗ್ನ ಪರಿಸ್ಥಿತಿಯಿಂದ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಅಸ್ಥಿರತೆ ಕಂಡುಬರುತ್ತಿದೆ. ಇದೇ ಕಾರಣಕ್ಕೆ ಕೆಲವು ರಾಜ್ಯಗಳು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿವೆ.
ಸರ್ಕಾರ ಸಾರ್ವಜನಿಕರಿಗೆ ಅನಗತ್ಯವಾಗಿ ಇಂಧನ ಸಂಗ್ರಹಣೆ ಮಾಡಬಾರದು ಹಾಗೂ ಸಾಮಾನ್ಯವಾಗಿ ಖರೀದಿ ಮಾಡಬೇಕು ಎಂದು ಮನವಿ ಮಾಡಿದೆ. ನಿಯಮ ಉಲ್ಲಂಘಿಸುವ ಪೆಟ್ರೋಲ್ ಬಂಕ್‌ಗಳು ಮತ್ತು ವ್ಯಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

