ಬೆಂಗಳೂರು : ಮೊಬೈಲ್ ಫೋನ್ ವಿಚಾರವಾಗಿ ಉಂಟಾದ ಗಲಾಟೆ ಕೊನೆಗೆ ಯುವಕನ ಸಾವಿನಲ್ಲಿ ಅಂತ್ಯಗೊಂಡ ದಾರುಣ ಘಟನೆ ಬೆಂಗಳೂರಿನ ಮಾರತ್ ಹಳ್ಳಿ ಪ್ರದೇಶದಲ್ಲಿ ನಡೆದಿದೆ. ಸ್ನೇಹಿತನಿಂದ ಚಾಕು ಇರಿತಕ್ಕೊಳಗಾದ ಪರಶುರಾಮ ಎಲ್ಲಪ್ಪ ಮಂಗಳಗಟ್ಟಿ (25) ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಮೂಲತಃ ಹುಬ್ಬಳ್ಳಿ ನಿವಾಸಿಗಳಾದ ಪರಶುರಾಮ ಹಾಗೂ ರಾಮು ಇಬ್ಬರೂ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೌಸ್ ಕೀಪಿಂಗ್ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಇವರು ಮಾರತ್ ಹಳ್ಳಿ ಠಾಣಾ ವ್ಯಾಪ್ತಿಯ ಚೌಡೇಶ್ವರಿ ರಸ್ತೆಯ ಬೆಸ್ಕಾಂ ಕಚೇರಿ ಸಮೀಪದ ಬಾಡಿಗೆ ಮನೆಯಲ್ಲಿ ವಾಸವಿದ್ದರು.
ಮೇ 10ರಂದು ರಾತ್ರಿ ಪಾಳಿ ಮುಗಿಸಿ ಮದ್ಯದ ಅಮಲಿನಲ್ಲಿ ಮನೆಗೆ ಬಂದಿದ್ದ ರಾಮು, ಪರಶುರಾಮನ ಮೊಬೈಲ್ ಫೋನ್ ಅನ್ನು ಬಚ್ಚಿಟ್ಟಿದ್ದ ಎನ್ನಲಾಗಿದೆ. ಬಳಿಕ ಎಚ್ಚರವಾದ ಪರಶುರಾಮ, “ನನ್ನ ಮೊಬೈಲ್ ಎಲ್ಲಿದೆ, ಕೊಡು” ಎಂದು ಕೇಳಿದ್ದಾನೆ. ಇದೇ ವಿಚಾರವಾಗಿ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ.
ಕೋಪಗೊಂಡ ರಾಮು ಅಡುಗೆಮನೆಯಿಂದ ಚಾಕು ತಂದು ಪರಶುರಾಮನಿಗೆ ಇರಿದಿದ್ದಾನೆ. ನಂತರ ಪರಶುರಾಮನ ಮೊಬೈಲ್ ತೆಗೆದುಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಪರಶುರಾಮನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಕುಟುಂಬಸ್ಥರು ಅವರನ್ನು ಹುಬ್ಬಳ್ಳಿಗೆ ಕರೆದೊಯ್ದಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಘಟನೆ ಸಂಬಂಧ ಮಾರತ್ ಹಳ್ಳಿ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ರಾಮುಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

