ಮೂಡುಬಿದಿರೆ ಕ್ರಿಯೇಟರ್ಸ್ ಗುಂಪು ಸಾಮಾಜಿಕ ಜವಾಬ್ದಾರಿಗಳನ್ನು ನಿರ್ವಹಿಸುವ ಕಾರಣದಿಂದ ಆಸಕ್ತರು ಒಗ್ಗೂಡಿ ಚರ್ಚಿಸುವ ಕಾರ್ಯವನ್ನು ಅರಿಹಂತ್ ಹೋಟೆಲ್ ನಲ್ಲಿ ಆಯೋಜಿಸಲಾಗಿತ್ತು. ಸುಮಾರು 40ಕ್ಕೂ ಹೆಚ್ಚು ಕ್ರಿಯೇಟರ್ಸ್ಗಳು, ಹಾಗೂ ಇತರರು ಭಾಗವಹಿಸಿ ಮಾಹಿತಿಗಳನ್ನು ಹಂಚಿಕೊಂಡರು.

ಸಭೆಯನ್ನು ಉದ್ದೇಶಿಸಿ ಕಾರ್ಯಕ್ರಮ ಸಂಘಟಿಸಿದ ಅಕ್ಷಯ್ ಜೈನ್ ಸಾಮಾಜಿಕ ಕುಂದುಕೊರತೆಯ ವಿಷಯಗಳನ್ನು ಪ್ರಸ್ತುತಪಡಿಸಿದರು. ಏಕಮುಖ ಸಂಚಾರಿ ತೊಂದರೆಗಳು, ಪೊಲೀಸ್ ಔಟ್ ಪೋಸ್ಟ್, ಟ್ರಾಫಿಕ್ ಪೊಲೀಸ್ ಇತ್ಯಾದಿಗಳ ಅವಶ್ಯಕತೆಗಳು. ವಿಶ್ವವಿಖ್ಯಾತವಾದ ಬಸದಿಗಳು, ಶಿಕ್ಷಣ ಸಂಸ್ಥೆಗಳು ಇದ್ದರೂ, ಪ್ರೇಕ್ಷಣೀಯ ಕೇಂದ್ರವಾಗಿದ್ದರೂ, ಮೂಡುಬಿದಿರೆ ಕೇಂದ್ರವಾಗುವ ಬದಲು ಮಂಗಳೂರಿಗೆ ಪ್ರಾಶಸ್ತ್ಯ ದೊರಕುತ್ತಿರುವ ಬಗ್ಗೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿವೇಕ್ ಆಳ್ವ ಅಭಿಪ್ರಾಯ ಹಂಚಿಕೊಂಡರು. ತಪ್ಪುಗಳ ವಿರುದ್ಧ ಧ್ವನಿ ಎತ್ತುವ ಮನೋಭಾವವನ್ನು ಉತ್ತಮ ರೀತಿಯಲ್ಲಿ ಬೆಳೆಸಿಕೊಳ್ಳಬೇಕೆಂದು ಪತ್ರಕರ್ತ ಯಶೋಧರ್, ಸಾಮಾಜಿಕ ಕಾರ್ಯಕರ್ತ ಶೀನ ಆಶಿಸಿದರು.
ಸ್ವಚ್ಛತಾ ಕಾರ್ಯದಲ್ಲಿ ಉತ್ತಮ ನಿರ್ವಹಣೆ ಮಾಡಿದವರನ್ನು, ಉತ್ತಮ ಕೆಲಸ ಮಾಡಿದ ಕಾರ್ಯಕರ್ತರುಗಳನ್ನು ಗುರುತಿಸಿ ಸಂಬಂಧಿಸಿದ ಯೋಜನೆಯನ್ನು ಹಲವರು ಪ್ರಶಂಸಿಸಿದರು. ಕಂಟೆಂಟ್ ರಚನೆಯ ಬಗ್ಗೆ ನಫೀಸ್ ಹಾಗೂ ಇತರರು ಮಾಹಿತಿಯನ್ನು ಹಂಚಿಕೊಂಡರು.
ನಿರಂತರ ವಿದ್ಯುತ್ ಸಮಸ್ಯೆ, ಪಾರ್ಕಿಂಗ್ ಸಮಸ್ಯೆ, ಪ್ರಯಾಣಿಕರ ಕಾಲುದಾರಿ ಸಮಸ್ಯೆ, ಇತ್ಯಾದಿಗಳ ಬಗ್ಗೆಯೂ ಚರ್ಚೆ ನಡೆಯಿತು ಹಾಗೂ ಪೊಲೀಸ್, ಮೆಸ್ಕಾಂ, ಪುರಸಭೆಯ ಅಧಿಕಾರಿಗಳ ಗಮನ ಸೆಳೆಯಲು ಸಾರ್ವಜನಿಕರು ಕೇಳಿಕೊಂಡರು.

