ಕೊಡಗು : ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ದುಬಾರೆ ಸಾಕಾನೆ ಶಿಬಿರದಲ್ಲಿ ಭೀಕರ ದುರಂತ ಸಂಭವಿಸಿದ್ದು, ಎರಡು ಸಾಕಾನೆಗಳ ನಡುವಿನ ದಿಢೀರ್ ಕಾದಾಟದ ವೇಳೆ ಪ್ರವಾಸಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ತಮಿಳುನಾಡಿನ ಚೆನ್ನೈ ಮೂಲದ ಜಿನ್ನು (33) ಮೃತ ದುರ್ದೈವಿ.
ಭಾನುವಾರ ಮಧ್ಯಾಹ್ನ ಸುಮಾರು 12 ಗಂಟೆ ವೇಳೆಗೆ ಶಿಬಿರದಲ್ಲಿ ಎಂದಿನಂತೆ ಆನೆಗಳಿಗೆ ನದಿಯಲ್ಲಿ ಸ್ನಾನ ಮಾಡಿಸಲಾಗುತ್ತಿತ್ತು. ಈ ವೇಳೆ ಮಾವುತರು ‘ಮಾರ್ತಾಂಡ’ ಮತ್ತು ‘ಕಂಜನ್’ ಎಂಬ ಎರಡು ಸಾಕಾನೆಗಳನ್ನು ನೀರಿಗೆ ಕರೆತಂದಿದ್ದರು. ಮಾವುತ ಗೌಸ್ ಅವರು ಮಾರ್ತಾಂಡ ಆನೆಯನ್ನು ನೀರಿಗೆ ಇಳಿಸುವ ಸಂದರ್ಭ ಆನೆ ಸ್ವಲ್ಪ ವೇಗವಾಗಿ ಪಕ್ಕದಲ್ಲಿದ್ದ ಕಂಜನ್ ಆನೆಗೆ ತಾಗಿದೆಯೆನ್ನಲಾಗಿದೆ.
ಇದರಿಂದ ಕೆರಳಿದ ಕಂಜನ್ ಆನೆ ಆಕ್ರೋಶಗೊಂಡು ಮಾರ್ತಾಂಡ ಆನೆಯ ಮೇಲೆ ದಾಳಿ ನಡೆಸಿದ್ದು, ನದಿಯ ದಡದಲ್ಲೇ ಎರಡು ದೈತ್ಯ ಆನೆಗಳು ಪರಸ್ಪರ ಕಾದಾಡಲು ಆರಂಭಿಸಿವೆ. ಆಕಸ್ಮಿಕ ಬೆಳವಣಿಗೆಯಿಂದ ಅಲ್ಲಿದ್ದ ಪ್ರವಾಸಿಗರು ಭಯಭೀತರಾಗಿ ಓಡಾಟ ಆರಂಭಿಸಿದ್ದಾರೆ.
ಈ ಗೊಂದಲದ ನಡುವೆ ಸಿಲುಕಿದ ಪ್ರವಾಸಿ ಮಹಿಳೆ ಜಿನ್ನು ಅವರಿಗೆ ಆನೆಗಳು ಬಲವಾಗಿ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗಳಾಗಿದ್ದು, ಕಾಲಡಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮಾವುತರಾದ ಗೌಸ್ ಮತ್ತು ವಿಜಯ್ ಅವರು ಆನೆಗಳನ್ನು ನಿಯಂತ್ರಿಸಲು ಹರಸಾಹಸ ಪಟ್ಟರೂ ಅಷ್ಟರಲ್ಲಾಗಲೇ ದುರಂತ ಸಂಭವಿಸಿತ್ತು.
ಘಟನೆಯ ಬಳಿಕ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಮೃತದೇಹವನ್ನು ಕುಶಾಲನಗರ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುವ ದುಬಾರೆ ಶಿಬಿರದಲ್ಲಿ ಪ್ರವಾಸಿಗರ ಸುರಕ್ಷತೆ ಕುರಿತು ಇದೀಗ ಪ್ರಶ್ನೆಗಳು ಉದ್ಭವಿಸಿವೆ.
ಸೂಕ್ಷ್ಮ ಸಂದರ್ಭಗಳಲ್ಲಿ ಅರಣ್ಯ ಇಲಾಖೆ ಸೂಕ್ತ ಸುರಕ್ಷತಾ ಅಂತರ ಕಾಯ್ದುಕೊಳ್ಳದಿರುವುದೇ ದುರಂತಕ್ಕೆ ಕಾರಣ ಎಂಬ ಆರೋಪ ಕೇಳಿಬರುತ್ತಿದ್ದು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಆರಂಭಿಸಿದ್ದಾರೆ.

