ಬೆಂಗಳೂರು : ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ರಾಜ್ಯದ ಎಲ್ಲಾ ವಸತಿಯುತ ಶಾಲೆ ಹಾಗೂ ಕಾಲೇಜುಗಳಲ್ಲಿ ಎಂ.ಎಸ್.ಡಬ್ಲ್ಯೂ (MSW) ಪದವೀಧರರನ್ನು ಆಪ್ತ ಸಮಾಲೋಚಕರಾಗಿ ನೇಮಕ ಮಾಡಬೇಕು ಎಂದು ಕರ್ನಾಟಕ ರಾಜ್ಯ ಪ್ರೊಫಶನಲ್ ಸೋಷಿಯಲ್ ವರ್ಕರ್ ವೆಲ್ ಫೇರ್ ಅಶೋಸಿಯೇಷನ್ ರಾಜ್ಯಾಧ್ಯಕ್ಷ ಸಂತೋಷ್ ಕುಮಾರ್ ಎಂ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಇತ್ತೀಚಿನ ದಿನಗಳಲ್ಲಿ ರಾಜ್ಯದ ವಿವಿಧ ವಸತಿಯುತ ಶಾಲೆ ಹಾಗೂ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ, ಮಾನಸಿಕ ಒತ್ತಡ, ಖಿನ್ನತೆ ಮತ್ತು ಸಾಮಾಜಿಕ ಅಸುರಕ್ಷಿತ ಭಾವನೆಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ತಿಳಿಸಿದ್ದಾರೆ.
ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳಲ್ಲಿ ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದು, ಅವರಿಗೆ ಕೇವಲ ವಸತಿ ಮತ್ತು ಆಹಾರ ಒದಗಿಸುವುದಷ್ಟೇ ಸಾಕಾಗುವುದಿಲ್ಲ. ಅವರ ಮಾನಸಿಕ, ಸಾಮಾಜಿಕ ಮತ್ತು ಭಾವನಾತ್ಮಕ ಆರೋಗ್ಯದ ಮೇಲೂ ವಿಶೇಷ ಗಮನ ಹರಿಸುವುದು ಅಗತ್ಯವಾಗಿದೆ ಎಂದು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಸಮಾಜ ಕಾರ್ಯದಲ್ಲಿ ಮೆಡಿಕಲ್ ಸೈಕಿಯಾಟ್ರಿಕ್ ಹಾಗೂ ಆಪ್ತ ಸಮಾಲೋಚನೆಯಲ್ಲಿ ಪರಿಣತಿ ಹೊಂದಿರುವ ಎಂ.ಎಸ್.ಡಬ್ಲ್ಯೂ ಪದವೀಧರರನ್ನು ಎಲ್ಲಾ ವಸತಿಯುತ ಶಾಲೆ ಹಾಗೂ ಕಾಲೇಜುಗಳಲ್ಲಿ ನೇಮಕ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಎಂ.ಎಸ್.ಡಬ್ಲ್ಯೂ ಪದವೀಧರರನ್ನು ನೇಮಕ ಮಾಡುವುದರಿಂದ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಕಾಪಾಡಲು ನೆರವಾಗುವುದರ ಜೊತೆಗೆ ಆತ್ಮಹತ್ಯೆ ಪ್ರವೃತ್ತಿ, ಖಿನ್ನತೆ ಹಾಗೂ ಒತ್ತಡವನ್ನು ಆರಂಭಿಕ ಹಂತದಲ್ಲಿಯೇ ಗುರುತಿಸಿ ತಡೆಗಟ್ಟಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್, ಭಾವನಾತ್ಮಕ ಬೆಂಬಲ, ಪೋಷಕರು ಹಾಗೂ ಆಡಳಿತದೊಂದಿಗೆ ಸಮನ್ವಯ, ನಾಯಕತ್ವ ಮತ್ತು ಸಾಮಾಜಿಕ ಕೌಶಲ್ಯಗಳ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.
ಇದಲ್ಲದೆ ಮಕ್ಕಳ ಹಕ್ಕುಗಳು, ಮಹಿಳಾ ಸುರಕ್ಷತೆ, ಮಾನಸಿಕ ಆರೋಗ್ಯ ಹಾಗೂ ಜೀವನ ಕೌಶಲ್ಯಗಳ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಹಕಾರಿಯಾಗುವುದರ ಜೊತೆಗೆ ವಸತಿಯುತ ಶಾಲೆ-ಕಾಲೇಜುಗಳಲ್ಲಿ ಉಂಟಾಗುವ ಗಲಾಟೆ, ಒಂಟಿತನ ಹಾಗೂ ವರ್ತನಾ ಸಮಸ್ಯೆಗಳನ್ನು ವೈಜ್ಞಾನಿಕ ರೀತಿಯಲ್ಲಿ ಪರಿಹರಿಸಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.
ಮಾನಸಿಕ ಆರೋಗ್ಯ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರತಿಯೊಂದು ವಸತಿಯುತ ಹಾಸ್ಟೆಲ್‌ಗಳಲ್ಲಿ ಸಮಾಜ ಕಾರ್ಯಕರ್ತರ ಸೇವೆ ಅತ್ಯಗತ್ಯವಾಗಿದ್ದು, ರಾಜ್ಯ ಸರ್ಕಾರ ತಕ್ಷಣವೇ ಎಂ.ಎಸ್.ಡಬ್ಲ್ಯೂ ಪದವೀಧರರಿಗೆ ಆಪ್ತ ಸಮಾಲೋಚಕರ ಹುದ್ದೆಗಳನ್ನು ಸೃಷ್ಟಿಸಿ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಪ್ರೊಫಶನಲ್ ಸೋಷಿಯಲ್ ವರ್ಕರ್ ವೆಲ್ ಫೇರ್ ಅಶೋಸಿಯೇಷನ್ ಸಂಸ್ಥಾಪಕ ರಾಜ್ಯಾಧ್ಯಕ್ಷ ಸಂತೋಷ್ ಕುಮಾರ್ ಎಂ ಒತ್ತಾಯಿಸಿದ್ದಾರೆ.

