ಕೋಟ : ಹದಿನೈದು ವರ್ಷಗಳಿಂದ ಅರ್ಧಕ್ಕೆ ನಿಂತಿದ್ದ ವಿಕಲ ಚೇತನ ಮಕ್ಕಳಿಬ್ಬರ ಕುಟುಂಬದ ಮನೆಯನ್ನು ಗಿಳಿಯಾರು ಜನಸೇವಾ ಟ್ರಸ್ಟ್ ಪೂರ್ಣಗೊಳಿಸಿ ಮೇ 15 ರಂದು ಫಲಾನುಭವಿಗಳಿಗೆ ಹಸ್ತಾಂತರಿಸಿತು.

ಗಿಳಿಯಾರು ಹೊನ್ನಾರಿ ಬೊಬ್ಬರ್ಯ ದೈವಸ್ಥಾನ ಸಮೀಪದ ನಿವಾಸಿ ವೀರು ಪೂಜಾರಿಯವರ ಕುಟುಂಬ ಆರ್ಥಿಕ ಸಂಕಷ್ಟ ಹಾಗೂ ಅನಾರೋಗ್ಯದ ನಡುವೆಯೇ ಜೀವನ ಸಾಗಿಸುತ್ತಿತ್ತು. ತಂದೆಗೆ ತೀವ್ರ ಕಾಲುನೋವು ಹಾಗೂ ಅನಾರೋಗ್ಯ ಕಾಡುತ್ತಿದ್ದು, ಅವರಿಬ್ಬರು ಮಕ್ಕಳು ವಿಶೇಷಚೇತನರಾಗಿದ್ದಾರೆ. ಮಗನ ಸಂಪೂರ್ಣ ಜವಾಬ್ದಾರಿಯನ್ನು ತಾಯಿಯೇ ನೋಡಿಕೊಳ್ಳಬೇಕಾದ ಪರಿಸ್ಥಿತಿ ಇದ್ದರೆ.
ಹೀಗಾಗಿ ಮನೆ ಕಟ್ಟಬೇಕೆಂಬ ಕನಸಿನಿಂದ ಪಂಚಾಂಗ ಹಾಕಿದರೂ ಹಲವು ಸಮಸ್ಯೆಗಳ ಪರಿಣಾಮ ಕಾಮಗಾರಿ ಮುಂದುವರಿಸಲು ಸಾಧ್ಯವಾಗಿರಲಿಲ್ಲ. ಈ ವೇಳೆ ನೆರವಿಗೆ ಬಂದ ಮೂಡು ಗಿಳಿಯಾರು ಜನಸೇವಾ ಟ್ರಸ್ಟ್ ಹಾಗೂ ಟೀಮ್ ಅಭಿಮತದ ಗೆಳೆಯರು ಸುಮಾರು 9 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಮನೆ ನಿರ್ಮಿಸಿ ಕುಟುಂಬಕ್ಕೆ ಹಸ್ತಾಂತರಿಸಿದರು. ಜನಸೇವಾ ಟ್ರಸ್ಟ್ ನ ಮಾನವೀಯ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಮನೆಯ ಕೀಲಿ ಕೈ ಪಡೆದು ಮಾತನಾಡಿದ ವೀರು ಪೂಜಾರಿ, “ಪಂಚಾಂಗ ಹಾಕಿ ಹಲವು ವರ್ಷಗಳಾದರೂ ಮನೆ ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ. ಬದುಕು ಸಾಗಿಸುವುದೇ ಕಷ್ಟವಾಗಿದ್ದ ಸಂದರ್ಭದಲ್ಲಿ ಗಿಳಿಯಾರು ಜನಸೇವಾ ಟ್ರಸ್ಟ್ ನಮ್ಮ ನೆರವಿಗೆ ಬಂದಿದೆ. ಮಗಳಿಗೆ ಉದ್ಯೋಗವೂ ದೊರೆತಿರುವುದು ನಮ್ಮ ಕುಟುಂಬಕ್ಕೆ ಹೊಸ ಭರವಸೆಯಾಗಿದೆ” ಎಂದು ಭಾವುಕರಾದರು.
ವಿಶೇಷ ಚೇತನಳಿಗೆ ಉದ್ಯೋಗ:-
ಮನೆ ಹಸ್ತಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ವಿಶೇಷಚೇತನ ಯುವತಿಗೆ ಉದ್ಯೋಗದ ಅಗತ್ಯವಿದೆ ಎಂದರು. ಇದೇ ಸಂದರ್ಭದಲ್ಲಿ ಕೋಟ ಅಮೃತೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅನಂದ ಸಿ.ಕುಂದರ್ ತಮ್ಮ ಸಂಸ್ಥೆಯಲ್ಲಿ ಉದ್ಯೋಗ ನೀಡುವ ಭರವಸೆ ನೀಡಿ, ಜೂನ್ 1ರಿಂದ ಕೆಲಸಕ್ಕೆ ಹಾಜರಾಗುವಂತೆ ಸೂಚಿಸಿದರು ಹಾಗೂ ಮನೆ ನಿರ್ಮಿಸಿ ಕೊಟ್ಟಿರುವುದು ಮಾದರಿ ಕಾರ್ಯ. ಇಂತಹ ಸೇವಾಕಾರ್ಯಗಳು ಇತರ ಸಂಘ-ಸಂಸ್ಥೆಗಳಿಗೂ ಪ್ರೇರಣೆಯಾಗಬೇಕು” ಎಂದು ಹೇಳಿದರು.
ಜನಸೇವಾ ಟ್ರಸ್ಟ್‌ನ ಪ್ರವರ್ತಕ ವಸಂತ ಗಿಳಿಯಾರು ಮಾತನಾಡಿ, “ಅಸಹಾಯಕರ ನೆರವಿಗೆ ನಮ್ಮ ಟ್ರಸ್ಟ್ ಸದಾ ಸಿದ್ಧವಾಗಿದೆ. ಒಂದೆಡೆ ಕುಟುಂಬಕ್ಕೆ ಮನೆ ಸಿಕ್ಕಿದರೆ, ಮತ್ತೊಂದೆಡೆ ಮಗಳಿಗೆ ಉದ್ಯೋಗ ದೊರೆತಿರುವುದು ನಮಗೂ ಸಂತೋಷ ತಂದಿದೆ” ಎಂದರು.
ಕೋಟ ಗ್ರಾ.ಪಂ.ಮಾಜಿ ಅಧ್ಯಕ್ಷೆ ಜ್ಯೋತಿ ಭರತ್ ಕುಮಾರ್ ಶೆಟ್ಟಿ, ವಿಶ್ವವಿಖ್ಯಾತ ಜಾದುಗಾರ ಸತೀಶ್ ಹೆಮ್ಮಾಡಿ, ಜನಸೇವಾ ಟ್ರಸ್ಟ್ ನ ಪ್ರಮುಖರು, ಸ್ಥಳೀಯ ಗಣ್ಯರು ಉಪಸ್ಥಿತರಿದ್ದರು. ಕೆ.ಸಿ. ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.

