ಯುವವಾಹಿನಿ ಮೂಡುಬಿದಿರೆ ಘಟಕ ಹಾಗೂ ಭಾರತೀಯ ವಿಕಾಸ ಟ್ರಸ್ಟ್, ಮಣಿಪಾಲ ವತಿಯಿಂದ ಸೌರಶಕ್ತಿ ಆಧಾರಿತ ಜೀವನೋಪಾಯ ಯಂತ್ರಗಳು ಮತ್ತು ಬ್ಯಾಂಕ್ ಸಾಲ ಸೌಲಭ್ಯಗಳ ಮಾಹಿತಿ ಕಾರ್ಯಕ್ರಮ ಯಶಸ್ವಿ

0
1

ಯುವವಾಹಿನಿ (ರಿ.) ಮೂಡುಬಿದಿರೆ ಘಟಕ ಹಾಗೂ ಭಾರತೀಯ ವಿಕಾಸ ಟ್ರಸ್ಟ್, ಮಣಿಪಾಲ ಇವರ ಸಂಯುಕ್ತ ಆಶ್ರಯದಲ್ಲಿ “ಸೌರಶಕ್ತಿ ಆಧಾರಿತ ಜೀವನೋಪಾಯ ಯಂತ್ರಗಳು ಮತ್ತು ಬ್ಯಾಂಕ್ ಸಾಲ ಸೌಲಭ್ಯಗಳ ಮಾಹಿತಿ ಕಾರ್ಯಕ್ರಮ” ಅತ್ಯಂತ ಯಶಸ್ವಿಯಾಗಿ ಹಾಗೂ ಅರ್ಥಪೂರ್ಣವಾಗಿ ನಡೆಯಿತು. ಸ್ವಉದ್ಯೋಗ, ಮಹಿಳಾ ಸಬಲೀಕರಣ, ಆರ್ಥಿಕ ಸ್ವಾವಲಂಬನೆ ಹಾಗೂ ನವೀಕರಿಸಬಹುದಾದ ಇಂಧನದ ಮಹತ್ವವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಆಯೋಜಿಸಲಾದ ಈ ಕಾರ್ಯಕ್ರಮವು ಭಾಗವಹಿಸಿದ ಎಲ್ಲರಿಗೂ ಹೊಸ ಚಿಂತನೆ ಮತ್ತು ಪ್ರೇರಣೆಯನ್ನು ನೀಡಿತು.

ಕಾರ್ಯಕ್ರಮದ ಆರಂಭದಲ್ಲಿ ಭಾರತೀಯ ವಿಕಾಸ ಟ್ರಸ್ಟ್, ಮಣಿಪಾಲದ ಕಾರ್ಯಕ್ರಮ ವ್ಯವಸ್ಥಾಪಕರಾದ ಜೀವನ್ ಕೊಲ್ಯ ಅವರು ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು. ತರಬೇತಿದಾರರನ್ನು ಸಮರ್ಥವಾಗಿ ಸಿದ್ಧಗೊಳಿಸಿ, ಸಮಯಪಾಲನೆಯ ಮಹತ್ವವನ್ನು ಒತ್ತಿಹೇಳುವ ಮೂಲಕ ಕಾರ್ಯಕ್ರಮವನ್ನು ಅತ್ಯುತ್ತಮ ರೀತಿಯಲ್ಲಿ ನಿರ್ವಹಿಸಿದರು. ಅವರ ಸಂಘಟನಾ ಕೌಶಲ್ಯ ಹಾಗೂ ಸಮಾಜಮುಖಿ ಚಿಂತನೆ ಎಲ್ಲರಿಂದಲೂ ಪ್ರಶಂಸೆಗೆ ಪಾತ್ರವಾಯಿತು.

ಈ ಸಂದರ್ಭದಲ್ಲಿ ಪ್ರಕಾಶ್ ಶೆಟ್ಟಿ ಉಳೆಪಾಡಿ ಸೀನಿಯರ್ ಡೈರೆಕ್ಟರ್, ಟ್ರೇಡ್ ಪ್ರಮೋಶನ್ ಕೌನ್ಸಿಲ್ ಆಫ್ ಇಂಡಿಯಾ, ನವದೆಹಲಿ ಇವರು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ಪ್ರಾಸ್ತಾವಿಕ ಭಾಷಣ ಮಾಡಿ, ಇಂದಿನ ಯುಗದಲ್ಲಿ ಸ್ವಉದ್ಯೋಗದ ಅಗತ್ಯತೆ, ತುಳಸೀ ಗಿಡ ಕೇವಲ ದೇವರಿಗೆ ಅರ್ಪಿಸುವ ಜೊತೆಗೆ ಇದೊಂದು ಔಷಧೀಯ ಗುಣ ಹೊಂದಿದೆ ಇದನ್ನು ವಾಣಿಜ್ಯ ಬೆಳೆಯನ್ನಾಗಿ ಮಾಡಲು ಸಾಧ್ಯ ಎಂದರು ಇದರ ಜೊತೆಗೆ ತಂತ್ರಜ್ಞಾನದ ಬಳಕೆ ಹಾಗೂ ಯುವಜನತೆ ತಮ್ಮ ಸಾಮರ್ಥ್ಯವನ್ನು ಗುರುತಿಸಿಕೊಂಡು ಉದ್ಯಮಶೀಲತೆಯತ್ತ ಹೆಜ್ಜೆ ಇಡಬೇಕಾದ ಮಹತ್ವದ ಬಗ್ಗೆ ಮನಮುಟ್ಟುವ ಸಂದೇಶ ನೀಡಿದರು. ಅವರ ಪ್ರೇರಣಾದಾಯಕ ಮಾತುಗಳು ಉಪಸ್ಥಿತರಿದ್ದವರಿಗೆ ಹೊಸ ಉತ್ಸಾಹ ಮತ್ತು ಆತ್ಮವಿಶ್ವಾಸ ತುಂಬಿದವು.

ಸೌರಶಕ್ತಿ ಆಧಾರಿತ ಜೀವನೋಪಾಯ ಯಂತ್ರಗಳ ಕುರಿತು ಸೆಲ್ಕೊ ಇಂಡಿಯಾ, ಮಂಗಳೂರು ಶಾಖೆಯ ವ್ಯವಸ್ಥಾಪಕರಾದ ರವೀನಾ ಅವರು ಸವಿಸ್ತಾರ ಮಾಹಿತಿ ನೀಡಿದರು. ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆ, ಸೌರಶಕ್ತಿಯ ಆರ್ಥಿಕ ಹಾಗೂ ಪರಿಸರ ಲಾಭಗಳು, ಸೌರಶಕ್ತಿ ಬಳಸಿ ಸ್ವಉದ್ಯೋಗ ಆರಂಭಿಸಿ ಯಶಸ್ಸು ಸಾಧಿಸಿರುವ ಮಹಿಳೆಯರ ಅನುಭವಗಳನ್ನು ಉದಾಹರಣೆಯಾಗಿ ವಿವರಿಸಿದರು. ಸೌರಶಕ್ತಿ ಅಳವಡಿಕೆ ವಿಧಾನ, ಅದರ ನಿರ್ವಹಣೆ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಇದರ ಉಪಯೋಗಗಳ ಕುರಿತು ನೀಡಿದ ಮಾಹಿತಿ ಎಲ್ಲರಿಗೂ ಅತ್ಯಂತ ಉಪಯುಕ್ತವಾಯಿತು.

ಬ್ಯಾಂಕ್ ಸಾಲ ಸೌಲಭ್ಯಗಳ ಕುರಿತು ಕೆನರಾ ಬ್ಯಾಂಕ್ ಎಫ್‌ಎಲ್‌ಸಿ* ಮಂಗಳೂರು ವಿಭಾಗದ ಲತೇಶ್ ಬಿ. ಅವರು ಮಾಹಿತಿಪೂರ್ಣ ಉಪನ್ಯಾಸ ನೀಡಿದರು. ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ, ಜೀವನ ಸುರಕ್ಷಾ ಯೋಜನೆ, ವಿವಿಧ ಸಾಲ ಯೋಜನೆಗಳು, ಉಳಿತಾಯ ಖಾತೆಗಳ ಮಹತ್ವ, ಹಣಕಾಸಿನ ಶಿಸ್ತು ಹಾಗೂ ಮಹಿಳೆಯರಿಗೆ ಮತ್ತು ವಿಶೇಷ ಅಗತ್ಯವಿರುವ ಫಲಾನುಭವಿಗಳಿಗೆ ಲಭ್ಯವಿರುವ ಬ್ಯಾಂಕಿಂಗ್ ಸೌಲಭ್ಯಗಳ ಕುರಿತು ಸ್ಪಷ್ಟ ಹಾಗೂ ಸರಳ ರೀತಿಯಲ್ಲಿ ಮಾಹಿತಿ ನೀಡಿದರು. ಬ್ಯಾಂಕ್ ಖಾತೆ ನಿರ್ವಹಣೆ ಮತ್ತು ಉಳಿತಾಯದ ಅಭ್ಯಾಸದ ಅಗತ್ಯತೆಯನ್ನು ಅವರು ವಿಶೇಷವಾಗಿ ಒತ್ತಿಹೇಳಿದರು.
ಮಹಿಳೆಯರಿಗಾಗಿ ಕೆನರಾ ಎಂಜಲ್ ಖಾತೆ (ಕ್ಯಾನ್ಸರ್ ಪೀಡಿತರಿಗೆ) ತೆರೆಯುವ ಬಗ್ಗೆ ಮಾಹಿತಿ ನೀಡಿದರು

ಕಾರ್ಯಕ್ರಮವನ್ನು ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಪ್ರಧಾನ ಕಾರ್ಯದರ್ಶಿ, ಘಟಕದ ಮಾಜಿ ಅಧ್ಯಕ್ಷರಾದ ಜಗದೀಶ್ಚಂದ್ರ ಡಿ.ಕೆ . ಅವರು ಉದ್ಘಾಟಿಸಿದರು. ಯುವವಾಹಿನಿಯ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿದ ಅವರು, ಸಂಘಟನೆಯು ನಡೆದು ಬಂದ ಹಾದಿ ಹಾಗೂ ಸಮಾಜದ ಅಭಿವೃದ್ಧಿಗೆ ನೀಡುತ್ತಿರುವ ಕೊಡುಗೆಯನ್ನು ಸ್ಮರಿಸಿದರು. ಪ್ರಸ್ತುತ ಅಧ್ಯಕ್ಷ ಗಿರೀಶ್ ಕೋಟ್ಯಾನ್ ಹಾಗೂ ಉದ್ಯೋಗ ಮತ್ತು ಭವಿಷ್ಯ ನಿಧಿ ನಿರ್ದೇಶಕಿ ಶುಭಲಕ್ಷ್ಮಿ ಅವರ ಸೇವಾ ಮನೋಭಾವ ಮತ್ತು ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿದರು. ಬ್ಯಾಂಕಿಂಗ್ ವ್ಯವಸ್ಥೆ, ಸ್ವಉದ್ಯೋಗ ಅವಕಾಶಗಳು ಹಾಗೂ ಆರ್ಥಿಕ ಸ್ವಾವಲಂಬನೆಯ ಕುರಿತು ಅವರು ನೀಡಿದ ಮಾಹಿತಿಯು ಕಾರ್ಯಕ್ರಮದ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮೂಡುಬಿದಿರೆ ಘಟಕದ ಮಾಜಿ ಅಧ್ಯಕ್ಷ , ಕೇಂದ್ರ ಸಮಿತಿಯ ಕ್ರೀಡಾ ನಿರ್ದೇಶಕರಾದ ಶಂಕರ್ ಕೋಟ್ಯಾನ್ ಅವರು ಯುವವಾಹಿನಿಯ ಬೆಳವಣಿಗೆಯ ಪಯಣವನ್ನು ಸ್ಮರಿಸಿದರು. ಕೇವಲ ಮನರಂಜನಾ ಕಾರ್ಯಕ್ರಮಗಳಿಗಿಂತ ಜನರ ಬದುಕು ಬದಲಾಯಿಸುವ ಹಾಗೂ ಸ್ವಾವಲಂಬನೆ ಬೆಳೆಸುವ ಕಾರ್ಯಕ್ರಮಗಳ ಅಗತ್ಯತೆಯನ್ನು ಅವರು ಒತ್ತಿಹೇಳಿದರು. ಇಂತಹ ಮಾಹಿತಿ ಕಾರ್ಯಕ್ರಮಗಳು ಅನೇಕ ಕುಟುಂಬಗಳ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ನೆರವಾಗುತ್ತವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಯುವವಾಹಿನಿ (ರಿ.) ಮೂಡುಬಿದಿರೆ ಘಟಕದ ಅಧ್ಯಕ್ಷ ಗಿರೀಶ್ ಕೋಟ್ಯಾನ್ ಕ್ರೀಯಾಶೀಲ ಅಧ್ಯಕ್ಷರು ಪ್ರಸ್ತುತ ವರ್ಷದಿಂದ ಎಲ್ಲರ ಮನದಲ್ಲಿ ಯುವ ವಾಹಿನಿ ಘಟಕದ ಹೆಸರನ್ನು ಪುಟ್ಟ ಹಳ್ಳಿ ಮೂಡುಬಿದಿರೆಯಲ್ಲಿ ನೆನಪಿಸುವ ಯೋಜನೆ ಮಾಡಿದ ಸರದಾರ.ಅವರು ಅಧ್ಯಕ್ಷರ ನುಡಿಯಲ್ಲಿ ತಮ್ಮೊಂದಿಗೆ ಕೈಜೋಡಿಸಿ ಸಂಘಟನೆಯನ್ನು ಮುನ್ನಡೆಸುತ್ತಿರುವ ಹಿರಿಯರು, ಪದಾಧಿಕಾರಿಗಳು ಹಾಗೂ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು. ಕೇವಲ ಒಂದೂವರೆ ತಿಂಗಳ ಅವಧಿಯಲ್ಲಿ 12 ಕ್ಕೂ ಹೆಚ್ಚು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಲು ಸಾಧ್ಯವಾಗಿರುವುದು ಎಲ್ಲರ ಸಹಕಾರದಿಂದಲೇ ಎಂದು ತಿಳಿಸಿದರು. ಸ್ವಉದ್ಯೋಗ, ಕೌಶಲ್ಯಾಭಿವೃದ್ಧಿ ಹಾಗೂ ಸಾಮಾಜಿಕ ಸೇವೆಗಳಿಗೆ ಯುವವಾಹಿನಿ ಸದಾ ಆದ್ಯತೆ ನೀಡಲಿದೆ ಎಂದು ಹೇಳಿದರು.

ಕಾರ್ಯಕ್ರಮದ ಯಶಸ್ಸಿನ ಹಿಂದಿನ ಪ್ರಮುಖ ಶಕ್ತಿಯಾಗಿದ್ದ ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕಿ ಶುಭಲಕ್ಷ್ಮಿ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಮಹಿಳಾ ಸಬಲೀಕರಣ, ಉದ್ಯೋಗ ಮಾರ್ಗದರ್ಶನ ಹಾಗೂ ಸ್ವಾವಲಂಬನೆಗೆ ಸಂಬಂಧಿಸಿದ 9 ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಅಲ್ಪ ಅವಧಿಯಲ್ಲಿ ಯಶಸ್ವಿಯಾಗಿ ಆಯೋಜಿಸಿರುವ ಅವರು, ಮೂಡುಬಿದಿರೆ ಘಟಕದ ಹೆಮ್ಮೆಯ ಮಹಿಳಾ ನಾಯಕಿಯಾಗಿ ಹೊರಹೊಮ್ಮಿದ್ದಾರೆ. ಅವರ ಶ್ರಮ, ನಾಯಕತ್ವ ಮತ್ತು ಸಮಾಜಸೇವಾ ಮನೋಭಾವ ಕಾರ್ಯಕ್ರಮದ ಯಶಸ್ಸಿಗೆ ಪ್ರಮುಖ ಕಾರಣವಾಯಿತು.

ಈ ಕಾರ್ಯಕ್ರಮದಲ್ಲಿ ಯುವವಾಹಿನಿ ಘಟಕದ ನಿಕಟಪೂರ್ವ ಅಧ್ಯಕ್ಷರಾದ ಮುರಳೀಧರ ಕೋಟ್ಯಾನ್ , ಸಂಘಟನಾ ಕಾರ್ಯದರ್ಶಿ ಗಳಾದ ಭಾಗ್ಯಶ್ರೀ, ಸುಮಿತ್ರಾ, ಸದಸ್ಯರಾದ ರತ್ನಾವತಿ, ಶ್ರೀಮತಿ ಶೋಭಾ ಸುರೇಶ್ * *ಸಾರ್ಥಕ್ ಒಂಟಿಕಟ್ಟೆ, ಯುವವಾಹಿನಿ (ರಿ) ಬಜಪೆ ಘಟಕದ ಮಾಜಿ ಅಧ್ಯಕ್ಷರಾದ *ರೇಣುಕ ಶೇಖರ್ ಕಾರ್ಯದರ್ಶಿಯಾದ ಶರ್ಮೀಳಾ ಚಂದ್ರಶೇಖರ್ ಸೇರಿದಂತೆ ಅನೇಕ ಪದಾಧಿಕಾರಿಗಳು, ಸದಸ್ಯರು, ಮಹಿಳಾ ಉದ್ಯಮಿಗಳು, ಕರಕುಶಲ ಕ್ಷೇತ್ರದ ಫಲಾನುಭವಿಗಳು ಹಾಗೂ ಸಾರ್ವಜನಿಕರು ಉತ್ಸಾಹದಿಂದ ಭಾಗವಹಿಸಿದರು. ಸೌರಶಕ್ತಿ ಯೋಜನೆಗಳ ಮೂಲಕ ತಮ್ಮ ಜೀವನೋಪಾಯವನ್ನು ವೃದ್ಧಿಸಿಕೊಳ್ಳಲು ಆಸಕ್ತಿ ಹೊಂದಿರುವ ಹಲವಾರು ಮಹಿಳೆಯರು, ಪುರುಷರು ಕಾರ್ಯಕ್ರಮದಿಂದ ಅಮೂಲ್ಯ ಮಾಹಿತಿ ಪಡೆದುಕೊಂಡರು.
ಒಟ್ಟಾರೆಯಾಗಿ ಈ ಕಾರ್ಯಕ್ರಮವು ಕೇವಲ ಮಾಹಿತಿ ಹಂಚುವ ವೇದಿಕೆಯಾಗಿರದೆ, ಸ್ವಾವಲಂಬಿ ಜೀವನದತ್ತ ಸಾಗುವ ದಾರಿಯನ್ನು ತೋರಿಸಿದ ಪ್ರೇರಣಾದಾಯಕ ಸಮಾರಂಭವಾಗಿ ಮೂಡಿಬಂದಿತು. ಸೌರಶಕ್ತಿ, ಸ್ವಉದ್ಯೋಗ, ಬ್ಯಾಂಕಿಂಗ್ ಜ್ಞಾನ ಹಾಗೂ ಮಹಿಳಾ ಸಬಲೀಕರಣದಂತಹ ವಿಷಯಗಳನ್ನು ಒಂದೇ ವೇದಿಕೆಯಲ್ಲಿ ಜನರಿಗೆ ತಲುಪಿಸುವ ಮೂಲಕ ಸಮಾಜದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ ಈ ಕಾರ್ಯಕ್ರಮವು ಎಲ್ಲರ ಮನಸ್ಸಿನಲ್ಲಿ ಅಚ್ಚಳಿಯದ ನೆನಪಾಗಿ ಉಳಿಯಿತು. ಯುವವಾಹಿನಿ ಮೂಡುಬಿದಿರೆ ಘಟಕದ ಇಂತಹ ಸಮಾಜಮುಖಿ ಪ್ರಯತ್ನಗಳು ಮುಂದೆಯೂ ನಿರಂತರವಾಗಿ ಸಾಗಲಿ ಎಂಬ ಹಾರೈಕೆ ಎಲ್ಲರಿಂದ ವ್ಯಕ್ತವಾಯಿತು.

LEAVE A REPLY

Please enter your comment!
Please enter your name here