ಕಾರ್ಕಳ : ರಾಜಾಪುರ ಸರಸ್ವತ ಬ್ರಾಹ್ಮಣ ಮಹಿಳಾ ಮಂಡಳಿಗೆ ಬೆಳ್ಳಿ ಹಬ್ಬದ ಸಂಭ್ರಮ

0
6

ಕಾರ್ಕಳ : ರಾಜಾಪುರ ಸರಸ್ವತ ಬ್ರಾಹ್ಮಣ ಮಹಿಳಾ ಮಂಡಳಿ ತನ್ನ ಸ್ಥಾಪನೆಯ 25 ವರ್ಷಗಳನ್ನು ಪೂರೈಸಿದ ಹಿನ್ನೆಲೆ ಬೆಳ್ಳಿ ಹಬ್ಬದ ಸಂಭ್ರಮಾಚರಣೆಗೆ ಸಜ್ಜಾಗಿದೆ ಎಂದು ಮಂಡಳಿಯ ಅಧ್ಯಕ್ಷೆ ಉಷಾ ನಾಯಕ್ ತಿಳಿಸಿದ್ದಾರೆ.

ಕಾರ್ಕಳದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದ ಆರಾಧ್ಯ ದೇವರಾದ ಶ್ರೀ ಆದಿ ಶಕ್ತಿ ಮಹಾಲಕ್ಷ್ಮಿ ದೇವಸ್ಥಾನದಲ್ಲಿ 22-08-2001ರಂದು ಶ್ರೀ ಸಂಸ್ಥಾನ ಗೌಡ ಪಾದಾಚಾರ್ಯ ಕೈವಲ್ಯ ಮಠಾಧೀಶರಾದ ಶ್ರೀ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮಿ ಮಹಾರಾಜ್ ಹಾಗೂ ಶ್ರೀ ಶಿವಾನಂದ ಸರಸ್ವತಿ ಸ್ವಾಮಿ ಮಹಾರಾಜ್ ಅವರ ದಿವ್ಯ ಉಪಸ್ಥಿತಿಯಲ್ಲಿ ಮಹಿಳಾ ಮಂಡಳಿಯನ್ನು ಉದ್ಘಾಟಿಸಲಾಗಿತ್ತು ಎಂದು ವಿವರಿಸಿದರು.

23 ಮಹಿಳೆಯರ ಕಾರ್ಯಕಾರಿ ಸಮಿತಿಯೊಂದಿಗೆ ಮಂಡಳಿ ನಿರಂತರವಾಗಿ ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ, ವೈದ್ಯಕೀಯ ಸಹಾಯ, ಆರೋಗ್ಯ ಶಿಬಿರ, ಕ್ರೀಡೆ, ಭಜನೆ, ಯಕ್ಷಗಾನ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ ಎಂದು ಹೇಳಿದರು.

ಪ್ರಸ್ತುತ ವರ್ಷದಲ್ಲಿ ಮಹಿಳಾ ಮಂಡಳಿ ಹಾಗೂ ಭಜನಾ ಮಂಡಳಿಗಳು ಆರಾಧ್ಯ ಮಾತೆಯ ಕೃಪೆ ಮತ್ತು ಪರಮಪೂಜ್ಯ ಗುರುವರ್ಯರ ಆಶೀರ್ವಾದದೊಂದಿಗೆ ದೇವಳದ ಸಂಪೂರ್ಣ ಸಹಕಾರ ಹಾಗೂ ಸಮಾಜ ಬಾಂಧವರ ಪ್ರೋತ್ಸಾಹದ ನೆರವಿನಿಂದ 25 ವರ್ಷಗಳನ್ನು ಪೂರೈಸಿದ್ದು, ಇದೇ ಮೇ 24 ಮತ್ತು 25ರಂದು ಬೆಳ್ಳಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುವುದು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ರೇವತಿ ತೆಂಡೂಲ್ಕರ್, ಕೋಶಾಧಿಕಾರಿ ಶೋಭಾ ಪ್ರಭು ಹಾಗೂ ಸದಸ್ಯರಾದ ಸುಮ ನಾಯಕ್ ಮತ್ತು ಭಾರತಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here