ಹಾಲು ಮಾತ್ರ ಸಾಕಾಗಲ್ಲ : ವಯಸ್ಸಾದ ಮೇಲೂ ಮೂಳೆಗಳು ಗಟ್ಟಿಯಾಗಿರಲು ಈ 5 ಟಿಪ್ಸ್ ಫಾಲೋ ಮಾಡಿ!

0
15

ವಯಸ್ಸು ಹೆಚ್ಚಾದಂತೆ ನಮ್ಮ ದೇಹದ ಮೂಳೆಗಳು ಸಹಜವಾಗಿಯೇ ದುರ್ಬಲಗೊಳ್ಳತೊಡಗುತ್ತವೆ. ವಿಶೇಷವಾಗಿ ಮಹಿಳೆಯರಲ್ಲಿ ಮೆನೋಪಾಸ್ ನಂತರ ಮೂಳೆ ಸವೆತದ ಸಮಸ್ಯೆ ಹೆಚ್ಚು ಕಾಣಿಸಿಕೊಳ್ಳುತ್ತದೆ. ಇದರಿಂದ ಸಣ್ಣ ಗಾಯ ಅಥವಾ ಬಿದ್ದರೂ ಮೂಳೆ ಮುರಿಯುವ ಅಪಾಯ ಹೆಚ್ಚಾಗುತ್ತದೆ. ಆದರೆ ಸರಿಯಾದ ಆಹಾರ, ವ್ಯಾಯಾಮ ಮತ್ತು ಆರೋಗ್ಯಕರ ಜೀವನಶೈಲಿಯ ಮೂಲಕ ಮೂಳೆಗಳನ್ನು ಗಟ್ಟಿಯಾಗಿಟ್ಟುಕೊಳ್ಳಬಹುದು ಎಂದು ತಜ್ಞರು ಹೇಳುತ್ತಾರೆ.

1. ಸಮತೋಲಿತ ಆಹಾರ ಅತ್ಯಗತ್ಯ

ಮೂಳೆಗಳ ಆರೋಗ್ಯಕ್ಕಾಗಿ ಕ್ಯಾಲ್ಸಿಯಂ, ಪ್ರೋಟೀನ್, ಕ್ಯಾಲೋರಿ ಮತ್ತು ವಿಟಮಿನ್ ಡಿ ಇರುವ ಆಹಾರ ಸೇವನೆ ಮುಖ್ಯ. ಹಾಲು ಮತ್ತು ಹಾಲಿನ ಉತ್ಪನ್ನಗಳ ಜೊತೆಗೆ ಬ್ರೊಕೋಲಿ, ಕೇಲ್‌ನಂತಹ ಹಸಿರು ತರಕಾರಿಗಳು, ಬಾದಾಮಿ ಹಾಗೂ ಚಿಯಾ ಬೀಜಗಳು ಮೂಳೆಗಳಿಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತವೆ.

2. ಪ್ರತಿದಿನ ವ್ಯಾಯಾಮ ಮಾಡಿ

ಒಂದೇ ಜಾಗದಲ್ಲಿ ಹೆಚ್ಚು ಹೊತ್ತು ಕುಳಿತುಕೊಳ್ಳುವ ಅಭ್ಯಾಸ ಮೂಳೆ ಮತ್ತು ಸ್ನಾಯುಗಳನ್ನು ಬಲಹೀನಗೊಳಿಸುತ್ತದೆ. ಪ್ರತಿದಿನ ಕನಿಷ್ಠ 30 ನಿಮಿಷ ವೇಗದ ನಡಿಗೆ, ಭಾರ ಎತ್ತುವ ವ್ಯಾಯಾಮ ಹಾಗೂ ಸ್ನಾಯು ಬಲವರ್ಧಕ ಚಟುವಟಿಕೆಗಳನ್ನು ಮಾಡುವುದರಿಂದ ಮೂಳೆಗಳು ಗಟ್ಟಿಯಾಗುತ್ತವೆ.

3. ವಿಟಮಿನ್ ಡಿ ಪಡೆಯಿರಿ

ಸೂರ್ಯನ ಬೆಳಕು ದೇಹದಲ್ಲಿ ವಿಟಮಿನ್ ಡಿ ಉತ್ಪತ್ತಿಗೆ ಮುಖ್ಯ ಮೂಲ. ವಿಟಮಿನ್ ಡಿ ಕೊರತೆಯಿಂದ ದೇಹ ಕ್ಯಾಲ್ಸಿಯಂ ಹೀರಿಕೊಳ್ಳಲು ಸಾಧ್ಯವಾಗದೆ, ಮೂಳೆಗಳು ನಿಧಾನವಾಗಿ ದುರ್ಬಲಗೊಳ್ಳುತ್ತವೆ. ಆದ್ದರಿಂದ ಪ್ರತಿದಿನ ಸ್ವಲ್ಪ ಸಮಯ ಸೂರ್ಯನ ಬೆಳಕಿನಲ್ಲಿ ನಡೆಯುವುದು ಉತ್ತಮ.

4. ತೂಕ ನಿಯಂತ್ರಣದಲ್ಲಿ ಇರಲಿ

ಅತಿಯಾದ ದೇಹದ ತೂಕವೂ ಮೂಳೆಗಳ ಮೇಲೆ ಒತ್ತಡ ಹೆಚ್ಚಿಸುತ್ತದೆ. ಸರಿಯಾದ BMI ಕಾಯ್ದುಕೊಳ್ಳುವುದು ಮೂಳೆ ಮತ್ತು ಸಂಧಿಗಳ ಆರೋಗ್ಯಕ್ಕೆ ಸಹಕಾರಿ.

5. ಧೂಮಪಾನ ಮತ್ತು ಮದ್ಯಪಾನ ತಪ್ಪಿಸಿ

ಧೂಮಪಾನ ಮೂಳೆ ಸವೆತವನ್ನು ವೇಗಗೊಳಿಸುತ್ತದೆ ಎಂದು ಅಧ್ಯಯನಗಳು ತಿಳಿಸಿವೆ. ಮದ್ಯಪಾನವನ್ನು ಕಡಿಮೆ ಮಾಡುವುದು ಹಾಗೂ ಧೂಮಪಾನವನ್ನು ಸಂಪೂರ್ಣ ನಿಲ್ಲಿಸುವುದು ಮೂಳೆಗಳ ಆರೋಗ್ಯ ಸುಧಾರಣೆಗೆ ಸಹಾಯ ಮಾಡುತ್ತದೆ.

ಇದಲ್ಲದೆ ಕೆಲವು ಔಷಧಿಗಳನ್ನು ದೀರ್ಘಕಾಲ ಬಳಸುವುದರಿಂದ ಮೂಳೆಗಳ ಬಲ ಕುಗ್ಗುವ ಸಾಧ್ಯತೆ ಇರುವುದರಿಂದ ವೈದ್ಯರ ಸಲಹೆಯೊಂದಿಗೆ ಮಾತ್ರ ಔಷಧಿ ಸೇವನೆ ಮಾಡುವುದು ಉತ್ತಮ ಎಂದು ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ.

LEAVE A REPLY

Please enter your comment!
Please enter your name here