ಉತ್ತರ ಪ್ರದೇಶದ ಪ್ರಯಾಗ್‌ರಾಜ್ನಲ್ಲಿ ವಿದ್ಯಾರ್ಥಿನಿಯರ ಸುರಕ್ಷತೆ ಬಗ್ಗೆ ಆತಂಕ ಮೂಡಿಸುವ ಘಟನೆ ನಡೆದಿದ್ದು, ಹಾಸ್ಟೆಲ್ ಮಾಲೀಕನ ಮಗ ಮಧ್ಯರಾತ್ರಿ ವಿದ್ಯಾರ್ಥಿನಿಯರ ಕೊಠಡಿಗೆ ನುಗ್ಗಿ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ.
ಶಿವಕುಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆಯಲ್ಲಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ಹಾಸ್ಟೆಲ್‌ನಲ್ಲಿ ವಾಸವಾಗಿದ್ದ ಅಮೇಥಿ ಮೂಲದ ಇಬ್ಬರು ವಿದ್ಯಾರ್ಥಿನಿಯರ ಕೋಣೆಗೆ ಶುಭಂ ದ್ವಿವೇದಿ ಎಂಬಾತ ನುಗ್ಗಿದ್ದಾನೆ ಎಂದು ಆರೋಪಿಸಲಾಗಿದೆ.
ಮೇ 18ರ ಮಧ್ಯರಾತ್ರಿ ಸುಮಾರು 2 ಗಂಟೆ ವೇಳೆಗೆ ಮದ್ಯದ ಅಮಲಿನಲ್ಲಿದ್ದ ಆರೋಪಿ ವಿದ್ಯಾರ್ಥಿನಿಯರ ಮೇಲೆ ಹಲ್ಲೆ ನಡೆಸಿ, ಕೂದಲು ಹಿಡಿದು ಎಳೆದಾಡಿ ಅಟ್ಟಹಾಸ ಮೆರೆದಿದ್ದಾನೆ ಎನ್ನಲಾಗಿದೆ. ಘಟನೆಯ 30 ಸೆಕೆಂಡುಗಳ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕಳೆದ 10 ದಿನಗಳಿಂದ ಆರೋಪಿ ಫೋನ್ ಕರೆ ಹಾಗೂ ಸಂದೇಶಗಳ ಮೂಲಕ ಕಿರುಕುಳ ನೀಡುತ್ತಿದ್ದ ಎಂದು ವಿದ್ಯಾರ್ಥಿನಿಯರು ದೂರಿದ್ದಾರೆ.
ಘಟನೆ ಬಳಿಕ ವಿದ್ಯಾರ್ಥಿನಿಯರು ತುರ್ತು ಪೊಲೀಸ್ ಸಹಾಯವಾಣಿ 112ಕ್ಕೆ ಕರೆ ಮಾಡಿದ್ದು, ಪೊಲೀಸರ ಸಮ್ಮುಖದಲ್ಲೇ ಆರೋಪಿ ಒಡೆದ ಗಾಜಿನಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಬಳಿಕ ನ್ಯಾಯಾಲಯದಿಂದ ಜಾಮೀನು ಮಂಜೂರಾಗಿದೆ ಎಂದು ತಿಳಿದುಬಂದಿದೆ.

