ಉಡುಪಿ : ವ್ಯಾಪಾರ ವೈಷಮ್ಯದಿಂದ ಇಬ್ಬರು ಬೇಕರಿ ಮಾಲೀಕರು ಪರಸ್ಪರ ಜಗಳವಾಡಿದ್ದು, ಓರ್ವ ವ್ಯಕ್ತಿಗೆ ಚೂರಿ ಇರಿತವಾಗಿದೆ. ನಗರದ ಕರಾವಳಿ ಬೈಪಾಸ್ ಬಳಿಯ ಸಾಗರ್ ಗಂಗಾ ಕಟ್ಟಡದಲ್ಲಿರುವ ಪೂಜಾ ಬೇಕರಿ ಮಾಲೀಕ ಮುರಳೀಧರ (35) ಎಂಬವರ ಮೇಲೆ ಪಕ್ಕದ ಕೃಷ್ಣ ಬೇಕರಿ ಮಾಲೀಕ ಅಶೋಕ ಎಂಬಾತ ಚೂರಿಯಿಂದ ಇರಿದು ಹಲ್ಲೆ ನಡೆಸಿದ್ದಾನೆ.
ಶನಿವಾರ ಮುರಳೀಧರ ಅವರು ಅಂಗಡಿಯಲ್ಲಿದ್ದಾಗ ಏಕಾಏಕಿ ಬಂದ ಅಶೋಕ, ಅವಾಚ್ಯ ಶಬ್ದಗಳಿಂದ ಬೈದು, ಅಕ್ರಮವಾಗಿ ಅಂಗಡಿಯೊಳಗೆ ನುಗ್ಗಿದ್ದಾನೆ. ಮುರಳೀಧರ ಅವರ ಕಾಲರ್ ಪಟ್ಟಿ ಹಿಡಿದು ಕೆನ್ನೆ, ಕುತ್ತಿಗೆಗೆ ಹೊಡೆದು, ಕಾಲಿನಿಂದ ತುಳಿದು ನೆಲಕ್ಕೆ ಬೀಳಿಸಿದ್ದಾನೆ.
ಅಷ್ಟಕ್ಕೇ ನಿಲ್ಲಿಸದೆ ತನ್ನ ಬಳಿಯಿದ್ದ ಚೂರಿಯಿಂದ ಮುರಳೀಧರ ಅವರ ಎದೆ ಹಾಗೂ ಕುತ್ತಿಗೆ ಭಾಗಕ್ಕೆ ಚುಚ್ಚಿ ಗಾಯಗೊಳಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಶೋಕನ ರೌದ್ರಾವತಾರದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

