ಕಾರ್ಕಳ : ಪಶ್ಚಿಮ ಘಟ್ಟದ ಶೇ. 83 ಅರಣ್ಯ ಪ್ರದೇಶ ಸಂರಕ್ಷಿತವಾಗಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಸ್ಪಷ್ಟಪಡಿಸಿದ್ದಾರೆ.
ಅವರು ಮೇ 25 ರಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕುದುರೆಮುಖ ವನ್ಯಜೀವಿ ಉಪವಿಭಾಗ ಕಾರ್ಕಳ ಹಾಗೂ ವಲಯ ಅರಣ್ಯಾಧಿಕಾರಿ ಪ್ರಾದೇಶಿಕ ವಲಯ ಕಾರ್ಕಳ ಇದರ ಕಚೇರಿ ಕಟ್ಟಡ ಉದ್ಘಾಟಿಸಿ ಬಳಿಕ ಮಾಧ್ಯಮದವರಿಗೆ ತಿಳಿಸಿದರು. ಮೀಸಲು ಅರಣ್ಯ ವನ್ಯಜೀವಿಧಾಮಗಳು, ರಾಷ್ಟ್ರೀಯ ಉದ್ಯಾವನಗಳು, ನದಿ ಮೂಲಗಳು, ವಿವಿಧ ಪ್ರಬೇಧದ ಸಸ್ಯಗಳು, ಪಕ್ಷಿ, ಪ್ರಾಣಿ ಸಂಕುಲಗಳಿಂದ ಕೂಡಿರುವ ಶೇ. 83% ರಷ್ಟು ಪಶ್ಚಿಮ ಘಟ್ಟ ಪ್ರದೇಶ ಸುರಕ್ಷಿತವಾಗಿದೆ ಎಂದರು.

ಒತ್ತುವರಿ ತೆರವು
ಅರಣ್ಯ ಪರಿಸರ, ಪ್ರಕೃತಿ ಸಂರಕ್ಷಣೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ವಿಶ್ವದಲ್ಲೇ ಎಂಟನೇ ಹಾಟ್ ಸ್ಪಾಟ್ ಆಗಿ ಗುರುತಿಸಿಕೊಂಡಿರುವ ಪಶ್ಚಿಮ ಘಟ್ಟವನ್ನು ವಿವಿಧ ಹಂತದಲ್ಲಿ ಸಂರಕ್ಷಿಸಲಾಗಿದೆ. ರಾಜ್ಯದ ವಿವಿಧ ಅರಣ್ಯ ಭಾಗದಲ್ಲಿ ಒತ್ತುವರಿಯಾದ ಪ್ರದೇಶವನ್ನು ತೆರವು ಮಾಡಲಾಗುತ್ತಿದೆ. ಪ್ರಾಣಿ ಮಾನವ ಸಂಘರ್ಷವನ್ನು ತಡೆಗಟ್ಟುವ ನಿಟ್ಟಿನಲ್ಲೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಗಣಿಗಾರಿಕೆಯಿಲ್ಲ
ಕುದುರೆಮುಖ ಕಬ್ಬಿಣದ ಅದಿರು ಕಂಪನಿ (KIOCL) ವಿರುದ್ಧ ದಂಡದ ಕ್ರಮ ಕೈಗೊಳ್ಳಲಾಗಿದ್ದು, ದಂಡ ಪಾವತಿಗೆ ಸಮಯವನ್ನು ನೀಡಲಾಗಿದೆ ಎಂದ ಅವರು ಕುದುರೆಮುಖ ವ್ಯಾಪ್ತಿಯಲ್ಲಿ ಯಾವುದೇ ಗಣಿಗಾರಿಕೆ ನಡೆಯುತ್ತಿಲ್ಲ, ಮುಂದೆಯೂ ನಡೆಯುವುದಿಲ್ಲ ಎಂದರು.
ಹಿಂದಿನ ಸರಕಾರದ ತಪ್ಪು
ಯಾವ ಭೂಮಿ ಯಾವ ವ್ಯಾಪ್ತಿಗೊಳಪಡುತ್ತದೆ ಎಂಬುದನ್ನು ಸರಿಯಾಗಿ ಸಮೀಕ್ಷೆ ಮಾಡದೇ 2022ರಲ್ಲಿ ಕಂದಾಯ ಹಾಗೂ ಅರಣ್ಯ ಇಲಾಖೆ ಗಡಿಬಿಡಿಯಲ್ಲಿ ಸಮೀಕ್ಷೆ ನಡೆಸಿ ಸರ್ವೋಚ್ಚನ್ಯಾಯಾಲಯಕ್ಕೆ 3 ಲಕ್ಷ 30 ಸಾವಿರ ಹೆಕ್ಟೇರ್ ಡೀಮ್ಸ್ ಫಾರೆಸ್ಟ್ ಎಂದು ವರದಿ ನೀಡಿದೆ. ಈ ಹಿಂದಿನ ಸರಕಾರ ಮಾಡಿರುವಂತಹ ಈ ತಪ್ಪಿನಿಂದಾಗಿ ಸಮಸ್ಯೆ ತಲೆದೋರಿದೆ. ಅನೇಕ ಗ್ರಾಮಗಳು, ಸರಕಾರಿ ವಸತಿ ನಿಲಯಗಳು, ಶಾಲೆಗಳು, ಅಂಗನವಾಡಿಗಳು ಸೇರಿದಂತೆ ಪಟ್ಟಣ ಪ್ರದೇಶ ಪಕ್ಕದಲ್ಲಿರುವ ಭೂಮಿಯೆಲ್ಲಾ ಡೀಮ್ಸ್ ಆಗಿದ್ದು ತೊಂದರೆಯಾಗುತ್ತಿದೆ.
ಈ ಹಿನ್ನೆಲೆಯಲ್ಲಿ ನಾವು ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ, ಪ್ರಾದೇಶಿಕ ಮಟ್ಟದಲ್ಲಿ ಪ್ರಾದೇಶಿಕ ಆಯುಕ್ತರ ಮತ್ತು ರಾಜ್ಯ ಮಟ್ಟದಲ್ಲಿ ಅರಣ್ಯ ಇಲಾಖೆಯ ಅಪರ ಪ್ರಧಾನ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಅರಣ್ಯ ಮತ್ತು ಕಂದಾಯ ಇಲಾಖೆ ಜಂಟಿ ಸಮೀಕ್ಷೆ ಮಾಡಬೇಕೆಂದು ಈಗಾಗಲೇ ಆದೇಶಿಸಲಾಗಿದೆ. ಇದೀಗ ಶೇ. 65ರಷ್ಟು ಸಮೀಕ್ಷೆ ಕಾರ್ಯ ಪೂರ್ಣಗೊಂಡಿದ್ದು, ಸಮೀಕ್ಷೆ ಪೂರ್ಣಗೊಂಡ ಬಳಿಕ ಡೀಮ್ಸ್ ಫಾರೆಸ್ಟ್ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.

