ದಾವಣಗೆರೆ : ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಅಂಗ ಸಂಸ್ಥೆ ಕಲಾಕುಂಚ ಕೇರಳದ ಗಡಿನಾಡಿನ ಶಾಖೆ ಮತ್ತು ಸಿರಿಗನ್ನಡ ವೇದಿಕೆಯ ಸಂಯುಕ್ತಾಶ್ರಯದಲ್ಲಿ ಇತ್ತೀಚಿಗೆ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಮಂಗಲ್ಪಾಡಿಯ ನಾರಾಯಣ ಮಂಗಲ “ಶ್ರೀನಿಧಿ” ಸಭಾಂಗಣದಲ್ಲಿ “ಸಾಹಿತ್ಯಾಭಿಯಾನ” ಕಾರ್ಯಕ್ರಮದಲ್ಲಿ ಕಲಾಕುಂಚ ಕೇರಳದ ಗಡಿನಾಡಿನ ಶಾಖೆಯ ಗೌರವ ಅಧ್ಯಕ್ಷರಾದ ವಿ.ಬಿ.ಕುಳಮರ್ವರವರು ಮಾತನಾಡಿ, ಕಾಸರಗೋಡಿನಲ್ಲಿ ಕಲೆ, ಸಾಹಿತ್ಯ, ಸಂಗೀತ, ಶಿಕ್ಷಣ, ಗಮಕಗಳ ಪರಂಪರೆಯ ಬೆಳವಣಿಗೆ ಆಗಬೇಕಾಗಿದೆ ಮಲಯಾಳಂ ಭಾಷೆಯಲ್ಲಿ ಕಮಕ ಸಾಹಿತ್ಯ ಪ್ರಚಲಿತವಿದೆ. ದಾವಣಗೆರೆಯ ಕಲಾಕುಂಚದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈಯವರು ಪ್ರೌಢಶಾಲೆಯ ಮೆಟ್ಟಿಲೇರದೇ ಕಳೆದ ೩೫ ವರ್ಷಗಳಿಮದ ವಾಣಿಜ್ಯ ನಗರಿ ದಾವಣಗೆರೆಯನ್ನು ಸಾಂಸ್ಕೃತಿಕ ನಗರಿಯಾಗಿ ಬೆಳೆಸಿದ್ದು ಶ್ಲಾಘನೀಯ ಎಂದು ಉಪನ್ಯಾಸ ನೀಡಿದರು.
ಗಮಕ ಸಾಹಿತ್ಯ ಸಂಘದ ಅಧ್ಯಕ್ಷರಾದ ತೆಕ್ಕೆಕರೆ ಶಂಕರನಾರಾಯಣ ಭಟ್‌ರವರು ಜ್ಯೋತಿ ಬೆಳಗಿ ಉದ್ಘಾಟಿಸಿ ಈ ಸಾಂಸ್ಕೃತಿಕ ಚಟುವಟಿಕೆಗಳು ಮಾನವನ ಜೀವನಕ್ಕೆ ನಾಂದಿ ಎಂದರು. ಸಮಾರಂಭದಲ್ಲಿ ಪ್ರಾರಂಭದಲ್ಲಿ ಶ್ರೀಮತಿ ದಿವ್ಯಾ ಚಂದನ್ ಕಾರಂತ್ ಪ್ರಾರ್ಥನೆ ಮಾಡಿದರು. ಕಲಾಕುಂಚ ಕೇರಳದ ಗಡಿನಾಡಿನ ಶಾಖೆಯ ಸಂಸ್ಥಾಪಕರಾದ ಶ್ರೀಮತಿ ಜಯಲಕ್ಷ್ಮಿ ಕಾರಂತ್ ಸ್ವಾಗತಿಸಿ, ಪ್ರಸ್ತಾವನೆ ನುಡಿಗಳನ್ನು ವ್ಯಕ್ತಪಡಿಸಿದರು. ರಾಧಾಕೃಷ್ಣ ಉಳಿಯತ್ತಡ್ಕ, ರಾಜಾರಾಮರಾವ್, ಶಿಕ್ಷಕಿ ಶ್ರೀಮತಿ ಶಶಿಕಲಾ ಮುಂತಾದವರು ತಮ್ಮ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ವೇದಾಂತ್ ಕಾರಂತ್, ದಿವ್ಯಾ ಕಾರಂತ್, ಚೇತನಾ ಹೆಬ್ಬಾರ್, ಸಂಪ್ರದಾಯಕ ಸಂಗೀತ ಕಾರ್ಯಕ್ರಮದೊಂದಿಗೆ ಪ್ರೇಕ್ಷಕರನ್ನು ರಂಜಿಸಿದರು. ಜಯಲಕ್ಷ್ಮೀ ರಾಮಚಂದ್ರ ಹೊಳ್ಳ ಅಚ್ಚುಕಟ್ಟಾಗಿ ನಿರೂಪಿಸಿದರು. ಕೊನೆಯಲ್ಲಿ ರಾಜಾರಾಮರಾವ್ ವಂದಿಸಿದರು.

