ಬೆಂಗಳೂರು : ಎಬೋಲಾ ವೈರಸ್ ಕುರಿತು ದೇಶಾದ್ಯಂತ ಆತಂಕ ಹೆಚ್ಚುತ್ತಿರುವ ಹಿನ್ನೆಲೆ, ಭಾರತೀಯ ವೈದ್ಯಕೀಯ ಸಂಘಟನೆ (IMA) ವೈದ್ಯರಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ. ಆಫ್ರಿಕಾದ ಕೆಲವು ದೇಶಗಳಲ್ಲಿ ಎಬೋಲಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ, ಭಾರತದಲ್ಲಿಯೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ.
ಐಎಂಎ ಪ್ರಧಾನ ಕಚೇರಿ ಬಿಡುಗಡೆ ಮಾಡಿರುವ ಪ್ರಕಟಣೆ ಪ್ರಕಾರ, ಆಫ್ರಿಕಾದಲ್ಲಿ ಇದುವರೆಗೆ 336ಕ್ಕೂ ಹೆಚ್ಚು ಶಂಕಿತ ಪ್ರಕರಣಗಳು ಪತ್ತೆಯಾಗಿದ್ದು, 87 ಮಂದಿ ಸಾವನ್ನಪ್ಪಿದ್ದಾರೆ. ಸದ್ಯಕ್ಕೆ ಈ ಸೋಂಕು ಕಾಂಗೋ ಮತ್ತು ನೆರೆಯ ಉಗಾಂಡಾ ದೇಶಗಳಿಗೆ ಸೀಮಿತವಾಗಿದೆ ಎಂದು ವರದಿಯಾಗಿದೆ. ಆದರೆ ಜನರ ನಿರಂತರ ಸಂಚಾರದಿಂದ ಸೋಂಕಿತರನ್ನು ಪತ್ತೆಹಚ್ಚುವುದು ಸವಾಲಾಗಿದೆ ಎಂದು ತಿಳಿಸಲಾಗಿದೆ.
ಲಸಿಕೆಯೂ ಇಲ್ಲ, ಚಿಕಿತ್ಸೆಯೂ ಇಲ್ಲ!
ಈ ಬಾರಿ ಹರಡುತ್ತಿರುವುದು ಎಬೋಲಾದ ಅತ್ಯಂತ ಅಪಾಯಕಾರಿ ‘ಬುಂಡಿಬುಗ್ಯೊ’ (Bundibugyo) ತಳಿ ಎಂದು ಐಎಂಎ ತಿಳಿಸಿದೆ. ಈ ತಳಿಗೆ ಪ್ರಸ್ತುತ ಯಾವುದೇ ಮಾನ್ಯತೆ ಪಡೆದ ಲಸಿಕೆ ಅಥವಾ ನಿರ್ದಿಷ್ಟ ಚಿಕಿತ್ಸೆ ಲಭ್ಯವಿಲ್ಲದಿರುವುದು ಆತಂಕಕ್ಕೆ ಕಾರಣವಾಗಿದೆ.
ಹಲವು ಪ್ರದೇಶಗಳಲ್ಲಿ ತಪಾಸಣಾ ಸೌಲಭ್ಯಗಳು ಸೀಮಿತವಾಗಿದ್ದು, ಮರಣ ಪ್ರಮಾಣವೂ ಹೆಚ್ಚುತ್ತಿರುವುದಾಗಿ ವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ.
ಎಬೋಲಾ ಹೇಗೆ ಹರಡುತ್ತದೆ?
ಎಬೋಲಾ ವೈರಸ್ ಕೋವಿಡ್-19 ರೀತಿ ಗಾಳಿಯ ಮೂಲಕ ಹರಡುವುದಿಲ್ಲ. ಆದರೆ ಸೋಂಕಿತ ವ್ಯಕ್ತಿಯ ರಕ್ತ, ವಾಂತಿ, ದೈಹಿಕ ದ್ರವಗಳು ಹಾಗೂ ಅವರು ಬಳಸಿದ ಕಲುಷಿತ ವಸ್ತುಗಳ ನೇರ ಸಂಪರ್ಕದಿಂದ ಹರಡುತ್ತದೆ.
ರೋಗದಿಂದ ಮೃತಪಟ್ಟವರ ಅಸುರಕ್ಷಿತ ಅಂತ್ಯಕ್ರಿಯೆಯ ಆಚರಣೆಗಳು ಕೂಡ ಸೋಂಕು ವ್ಯಾಪಿಸಲು ಪ್ರಮುಖ ಕಾರಣವಾಗುತ್ತಿವೆ ಎಂದು ಐಎಂಎ ತಿಳಿಸಿದೆ.
ಆರಂಭಿಕ ಲಕ್ಷಣಗಳೇನು?
- ತೀವ್ರ ಜ್ವರ
- ತಲೆನೋವು
- ದೌರ್ಬಲ್ಯ
- ಸ್ನಾಯು ಹಾಗೂ ಗಂಟಲು ನೋವು
ಸೋಂಕು ತೀವ್ರಗೊಂಡರೆ:
- ವಾಂತಿ
- ಅತಿಸಾರ
- ದೇಹದ ಒಳ ಮತ್ತು ಹೊರ ರಕ್ತಸ್ರಾವ
- ಅಂಗಾಂಗ ವೈಫಲ್ಯ
ಮುಂತಾದ ಗಂಭೀರ ಲಕ್ಷಣಗಳು ಕಾಣಿಸಿಕೊಳ್ಳಬಹುದು.
ಮುನ್ನೆಚ್ಚರಿಕೆ ಕ್ರಮಗಳು
- ಸೋಂಕಿನ ಲಕ್ಷಣಗಳು ಕಂಡುಬಂದ ತಕ್ಷಣ ರೋಗಿಯನ್ನು ಪ್ರತ್ಯೇಕಿಸಬೇಕು.
- ನಿಯಮಿತವಾಗಿ ಕೈಗಳನ್ನು ಸ್ವಚ್ಛಗೊಳಿಸಬೇಕು.
- ವೈದ್ಯಕೀಯ ತ್ಯಾಜ್ಯವನ್ನು ಸುರಕ್ಷಿತವಾಗಿ ವಿಲೇವಾರಿ ಮಾಡಬೇಕು.
- ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.
ಒಟ್ಟಾರೆಯಾಗಿ ಸಾರ್ವಜನಿಕರು ಆರೋಗ್ಯ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಐಎಂಎ ಮನವಿ ಮಾಡಿದೆ.

