ಕೈಗೆ ಸುತ್ತಿಕೊಂಡ ವಿಷಸರ್ಪ… ಅಲುಗಾಡಿದರೆ ಸಾವು ಖಚಿತ! 4 ಗಂಟೆ ಉಸಿರು ಬಿಗಿಹಿಡಿದು ಮಲಗಿದ್ದ ವೃದ್ಧ..!

0
35

ಭುವನೇಶ್ವರ : ಹಾವು ಕಂಡರೆ ಸಾಮಾನ್ಯವಾಗಿ ಜನರು ಭಯದಿಂದ ದೂರ ಓಡುತ್ತಾರೆ. ಆದರೆ ಒಡಿಶಾದಲ್ಲಿ ನಡೆದ ಒಂದು ವಿಚಿತ್ರ ಘಟನೆ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ವಿಷಸರ್ಪವೊಂದು ಪಾರ್ಶ್ವವಾಯು ಪೀಡಿತ ವೃದ್ಧನ ಕೈಗೆ ಸುತ್ತಿಕೊಂಡು ಸುಮಾರು ನಾಲ್ಕು ಗಂಟೆಗಳ ಕಾಲ ಇದ್ದರೂ, ವೃದ್ಧ ತಾಳ್ಮೆಯಿಂದ ವರ್ತಿಸಿ ಸಾವಿನ ಬಾಯಿಂದ ಪಾರಾಗಿದ್ದಾರೆ.

ಒಡಿಶಾದ ಬೌಧ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಪಾರ್ಶ್ವವಾಯು ಪೀಡಿತರಾದ ಕೃಷ್ಣ ಚಂದ್ರ ಸಾಹು ಅವರು ರಾತ್ರಿ ತಮ್ಮ ಮನೆಯಲ್ಲಿ ಮಲಗಿದ್ದ ವೇಳೆ ವಿಷಪೂರಿತ ಹಾವು ಕೋಣೆಯೊಳಗೆ ನುಗ್ಗಿದೆ.

ಕುಟುಂಬದವರ ಮಾಹಿತಿ ಪ್ರಕಾರ, ಕೋಣೆಯ ಕಿಟಕಿಯನ್ನು ತೆರೆದಿಟ್ಟಿದ್ದರಿಂದ ತಡರಾತ್ರಿ ಹಾವು ಒಳಗೆ ಪ್ರವೇಶಿಸಿ ಹಾಸಿಗೆಯ ಮೇಲೆ ಹತ್ತಿದೆ. ಹಾವು ತನ್ನ ದೇಹದ ಮೇಲೆ ಹರಿದಾಡುತ್ತಿರುವುದನ್ನು ಸಾಹು ಗಮನಿಸಿದರೂ, ಪಾರ್ಶ್ವವಾಯುವಿನ ಕಾರಣದಿಂದ ತಕ್ಷಣ ಎದ್ದು ಓಡುವುದು ಅಥವಾ ಸಹಾಯಕ್ಕೆ ಕೂಗುವುದು ಅವರಿಗೆ ಸಾಧ್ಯವಾಗಲಿಲ್ಲ.

ಚಲಿಸಲು ಯತ್ನಿಸಿದಾಗ ಹಾವು ಅವರ ಒಂದು ಕೈಗೆ ಬಿಗಿಯಾಗಿ ಸುತ್ತಿಕೊಂಡಿದ್ದು, ದೇಹದ ಇನ್ನೊಂದು ಭಾಗವನ್ನು ಹತ್ತಿರದ ಕುರ್ಚಿಯ ಸುತ್ತಲೂ ಸುತ್ತಿಕೊಂಡಿತ್ತು. ಯಾವುದೇ ಚಲನೆ ಮಾಡಿದರೆ ಹಾವು ದಾಳಿ ನಡೆಸಬಹುದು ಎಂಬ ಭಯದಿಂದ ಸಾಹು ಸಂಪೂರ್ಣ ನಿಶ್ಚಲವಾಗಿ ಮಲಗಿದ್ದರು.

ಬೆಳಗಿನ ಜಾವ ಕೋಣೆಗೆ ಬಂದ ಕುಟುಂಬಸ್ಥರು ಈ ದೃಶ್ಯ ನೋಡಿ ಬೆಚ್ಚಿಬಿದ್ದಿದ್ದಾರೆ. ಆದರೆ ಗಾಬರಿಗೊಳ್ಳದೆ, ಹಾವನ್ನು ಕೆಣಕದಂತೆ ಎಚ್ಚರಿಕೆಯಿಂದ ವರ್ತಿಸಿದ್ದಾರೆ. ಸುಮಾರು ನಾಲ್ಕು ಗಂಟೆಗಳ ಕಾಲ ತೀವ್ರ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಬಳಿಕ ಸೂಕ್ತ ಸಮಯದಲ್ಲಿ ಹಾವನ್ನು ಯಾವುದೇ ಹಾನಿಯಾಗದಂತೆ ಸಾಹು ಅವರ ಕೈಯಿಂದ ಬೇರ್ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಘಟನೆಯ ವಿಡಿಯೋ ಮತ್ತು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅನೇಕರು ಇದನ್ನು “ಪವಾಡ” ಎಂದು ಬಣ್ಣಿಸಿದ್ದಾರೆ. ಸಾಹು ಅವರ ತಾಳ್ಮೆ ಮತ್ತು ಕುಟುಂಬಸ್ಥರ ಸಮಯಪ್ರಜ್ಞೆಯೇ ಅವರ ಪ್ರಾಣ ಉಳಿಸಿದೆ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here