ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ಜೂನ್ 10 ರಂದು ಶಿವರಾಮ ಕಾಸರಗೋಡು ಅವರಿಗೆ ಪ್ರತಿಷ್ಠಿತ “ಕರ್ನಾಟಕ ಗಡಿನಾಡು ಸಂಘಟನಾ ಪ್ರಶಸ್ತಿ” ಪ್ರದಾನ
ಕರ್ನಾಟಕ ರಾಜಧಾನಿಯ ಹಿರಿಯ ಸಂಘಟನೆಯಾದ ವಿ. ಕೆ. ಎಂ. ಕಲಾವಿದರು(ರಿ.), ಬೆಂಗಳೂರು ಇದರ ನೇತೃತ್ವದಲ್ಲಿ ಕರ್ನಾಟಕ ಸರಕಾರ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇದರ ಸಹಕಾರದಲ್ಲಿ ನಡೆಯುವ ಡಾ. ಬಿ. ಆರ್.ಅಂಬೇಡ್ಕರ್ ಹಾಗೂ ಬಾಬು ಜಗಜೀವನ ರಾo ಸ್ಮಾರಕ ನಾಟಕೋತ್ಸವ ಹಾಗೂ ಸಾಂಸ್ಕೃತಿಕ ಕಲಾಮೇಳ – ರಂಗೋತ್ಸವ ಮತ್ತು ನಿರಂತರ 45ನೇ ವರ್ಷದ ಕಾರ್ಯಕ್ರಮವು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ 2026 ಜೂನ್ 8 ರಿಂದ 10 ರ ತನಕ ನಡೆಯಲಿದೆ. ಇದರ ಸಮಾರೋಪ ಸಮಾರಂಭವು ಜೂನ್ 10 ಬುಧವಾರದಂದು ಸಂಜೆ ಗಂಟೆ 5.00 ಕ್ಕೆ ನಡೆಯಲಿದ್ದು ಗಡಿನಾಡು ಕಾಸರಗೋಡಿನ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.), ಕನ್ನಡ ಗ್ರಾಮ, ಕಾಸರಗೋಡು ಇದರ 35ನೇ ಸಂಸ್ಥಾಪನಾ ವರ್ಷಾಚರಣೆಯನ್ನು ಯಶಸ್ವಿಯಾಗಿ ಪೂರೈಸಿರುವುದಕ್ಕಾಗಿ, ಕಾಸರಗೋಡು ಕನ್ನಡ ಗ್ರಾಮದ ಸಂಸ್ಥಾಪಕ ಶಿವರಾಮ ಕಾಸರಗೋಡು ಅವರಿಗೆ ಕರ್ನಾಟಕ ಗಡಿನಾಡು ಸಂಘಟನಾಗಾರರಾಗಿ 35 ವರ್ಷದ ಸೇವೆಗಾಗಿ ಪ್ರತಿಷ್ಠಿತ ಕರ್ನಾಟಕ ಗಡಿನಾಡು ಸಂಘಟನಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.
ಈ ಪ್ರಶಸ್ತಿ ಪ್ರದಾನ ಸಮಾರಂಭದ ಮುಖ್ಯ ಅತಿಥಿಗಳಾಗಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ನಿಕಟ ಪೂರ್ವ ಅಧ್ಯಕ್ಷ ಡಾ. ಸಿ. ಸೋಮಶೇಖರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಾಜಿ ನಿರ್ದೇಶಕ ವೈ.ಕೆ.ಮುದ್ದುಕೃಷ್ಣ, ಕನ್ನಡ ಸಾಹಿತ್ಯ ಪರಿಷತ್ತು ನಿಕಟಪೂರ್ವ ಅಧ್ಯಕ್ಷ ನಾಡೋಜ ಡಾ.ಮನು ಬಳಿಗಾರ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚಂದ್ರಶೇಖರ್, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜ ಮೂರ್ತಿ,ಶ್ರೀಮತಿ ಮಧುರ ಅಶೋಕ ಕುಮಾರ್ ಬೆಂಗಳೂರು, ಖ್ಯಾತ ಚಲನಚಿತ್ರ ನಟ ನಾಟಕಕಾರ ಮುಖ್ಯಮಂತ್ರಿ ಚಂದ್ರು ಭಾಗವಹಿಸಲಿದ್ದಾರೆ. ವಿ.ಕೆ.ಎಂ ಕಲಾವಿದರು(ರಿ.), ಬೆಂಗಳೂರು ಸಂಸ್ಥೆಯ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಸಿ.ಎಂ. ತಿಮ್ಮಯ್ಯ ಉಪಸ್ಥಿತರಿರುತ್ತಾರೆ.
ಶಿವರಾಮ ಕಾಸರಗೋಡು ಸ್ಥಾಪಕ ಅಧ್ಯಕ್ಷರಾಗಿ 1990 ರಲ್ಲಿ ಸ್ಥಾಪನೆಗೊಂಡ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.),ಕಾಸರಗೋಡು ಇದರ ಆಶ್ರಯದಲ್ಲಿ ಕರ್ನಾಟಕ ಸರಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರ,ಬೆಂಗಳೂರು, ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡ, ಸಹಯೋಗದಲ್ಲಿ ಕೇರಳ
ರಾಜ್ಯ ಕನ್ನಡ ಸಮ್ಮೇಳನ ಮತ್ತು ಕೇರಳ- ಕರ್ನಾಟಕ ಉತ್ಸವವನ್ನು 7 ಬಾರಿ ಹಮ್ಮಿಕೊಳ್ಳಲಾಗಿದೆ.
ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ,ಮೈಸೂರು ಇದರ ಕಾಸರಗೋಡು ಜಿಲ್ಲಾ -ಘಟಕ ರೂಪೀಕರಣವಾದಾಗ ಅದರ ಅಧ್ಯಕ್ಷರಾಗಿ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನವನ್ನು 7 ಬಾರಿ ಸಂಘಟಿಸಿದ್ದಾರೆ.
ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕ ಅದರ ಅಧ್ಯಕ್ಷರಾದ ಪ್ರಾರಂಭದ ಅವಧಿಯಲ್ಲಿ ಕೇರಳ ರಾಜ್ಯ ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಕಾಸರಗೋಡು ಗ್ರಾಮದಲ್ಲಿ ನಡೆಸಿದ್ದರು. ಕೇರಳ ರಾಜ್ಯ ದಾಸ ಸಾಹಿತ್ಯ ಪರಿಷತ್ತು ಸ್ಥಾಪಕ ಅಧ್ಯಕ್ಷರಾಗಿ 2 ಬಾರಿ ಕೇರಳ ರಾಜ್ಯ ದಾಸ ಸಾಹಿತ್ಯ ಸಮ್ಮೇಳನ – ಕೇರಳ ರಾಜ್ಯ ಭಜನಾ ಸಂಘಟನೆಗಳ ಸಮಾವೇಶವನ್ನು ಸಂಘಟಿಸಿದ್ದಾರೆ.
ಕಾಸರಗೋಡು ಜಿಲ್ಲಾ ಕನ್ನಡ ಜಾಗೃತಿ ಸಮಿತಿಯನ್ನು ರೂಪೀಕರಿಸಿ ಕಾಸರಗೋಡು ಜಿಲ್ಲಾ ಕನ್ನಡ ಜಾಗೃತಿ ಸಮ್ಮೇಳನ,ಸಮಾವೇಶವನ್ನು 4 ಬಾರಿ ಸಂಘಟಿಸಿದ್ದಾರೆ. ಕಾಸರಗೋಡು ಕನ್ನಡಿಗರ ಹಿತರಕ್ಷಣೆ,ಮಹಾಜನ ಆಯೋಗದ ವರದಿ ಜ್ಯಾರಿಗಾಗಿ ಹಿರಿಯರೊಂದಿಗೆ ಹಲವು ಸಮ್ಮೇಳನ, ಸಮಾವೇಶ ಸಮಿತಿಯ ಪ್ರಧಾನ ಕಾರ್ಯದರ್ಶಿ, ಸಂಘಟರಾಗಿ ದುಡಿದಿದ್ದಾರೆ. ಕಾಸರಗೋಡು ವಿಲೀನೀಕರಣಕ್ಕಾಗಿ ಕಾಸರಗೋಡು ಬೆಂಗಳೂರು ಮಂಗಳೂರಿನಲ್ಲಿ ಸಮಾವೇಶ ಸಂಘಟಿಸಿದ್ದಾರೆ.
1985 ಜುಲೈ 1ರಂದು ಕಾಸರಗೋಡು ಜಿಲ್ಲಾ(ದಕ್ಷಿಣ ಕನ್ನಡ ಜಿಲ್ಲಾ ) ಫ್ರೀಲಾನ್ಸ್ ಪತ್ರಕರ್ತರ ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿದ್ದು, ನಿರಂತರ ಕನ್ನಡ ಪತ್ರಿಕಾ ಮಾಧ್ಯಮದೊಂದಿಗೆ ಸಂಪರ್ಕದಲ್ಲಿದ್ದಾರೆ. ಕರ್ನಾಟಕ ಸರಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ಆಯೋಜಿಸಿರುವ ಹೊರನಾಡ ಕನ್ನಡಿಗರ ರಾಷ್ಟ್ರೀಯ ಸಮಾವೇಶದಲ್ಲಿ ಬೆಂಗಳೂರು, ನವದೆಹಲಿ, ಮುಂಬೈ,ಗೋವಾದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದು, ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರಾವಾಡ ಸಂಘಟಿಸುತ್ತಿರುವ ಅಖಿಲ ಭಾರತ ಹೊರನಾಡ ಕನ್ನಡ ಸಂಘಗಳ 9 ಮಹಾ ಮೇಳದಲ್ಲಿ ಆಹ್ವಾನಿತರಾಗಿ ಪಾಲ್ಗೊಂಡಿದ್ದಾರೆ
2023 ರಲ್ಲಿ ನಡೆದ ದೆಹಲಿ ಕರ್ನಾಟಕ ಸಂಘದ ಅಮೃತ ಮಹೋತ್ಸವದ ಆಹ್ವಾನಿತರಾಗಿ ಭಾಗವಹಿಸಿದ್ದಾರೆ ಗಲ್ಫ್ ರಾಷ್ಟ್ರದ ದುಬೈ,ಶಾರ್ಜಾಕ್ಕೆ 3 ಬಾರಿ ಅತಿಥಿಗಳಾಗಿ, ವಿಶೇಷ ಆಮಂತ್ರಿತರಾಗಿ ಪಾಲ್ಗೊಂಡಿದ್ದಾರೆ.ಫ್ರೀಲಾನ್ಸ್ ಪತ್ರಕರ್ತರಾಗಿ,ಲೇಖಕರಾಗಿ, ಬರಹಗಾರರಾಗಿ ಹಲವು ಕೃತಿಗಳನ್ನು ಸಂಪಾದಿಸಿದ್ದಾರೆ.
ಕಾಸರಗೋಡು ಕನ್ನಡ ಗ್ರಾಮದಲ್ಲಿ ಕೇರಳ – ಕರ್ನಾಟಕ ಭವನ ಸಾಂಸ್ಕೃತಿಕ ಸಮುಚ್ಚಯದ ನಿರ್ಮಾಣಕ್ಕೆ 6 ಕೋಟಿ ರೂಪಾಯಿಗಳ ಯೋಜನೆ ಸಿದ್ಧವಾಗುತ್ತಿದೆ. ಸುಮಾರು 25 ಲಕ್ಷ ರೂ ವೆಚ್ಚದಲ್ಲಿ ಕಾಸರಗೋಡು ಗೋ-ಕುಟೀರ, ಕಾಮದೇನು- ಕಲ್ಪವೃಕ್ಷ ಗೋ – ವಿಶ್ರಾಂತಿ ಗೃಹವು ಉದ್ಘಾಟನೆಯ ಹಂತದಲ್ಲಿದೆ. ಈಗಾಗಲೇ 25 ಲಕ್ಷರೂಪಾಯಿ ವೆಚ್ಚದಲ್ಲಿ 200 ಮಂದಿ ಕುಳಿತುಕೊಂಡು ಕಾರ್ಯಕ್ರಮ ವೀಕ್ಷಿಸಲು ಅವಕಾಶವಿರುವ ಸಾಂಸ್ಕೃತಿಕ ಭವನ, ಬಯಲು ರಂಗಮಂಟಪ, ಕೆ. ಪುರುಷೋತ್ತಮ ಮಾಸ್ತರ್ ಸ್ಮಾರಕ ಗ್ರಂಥಾಲಯ,ಭಜನಾ ಸಂಕೀರ್ತನಾ ಕುಟೀರ,ನಮ್ಮ ಮನೆ ವಿಶ್ರಾಂತಿ ಗೃಹ – ರೆಸ್ಟ್ ಹೌಸ್ ನಿರ್ಮಾಣವಾಗಿದೆ.

