ಮಂಗಳೂರು : ಬಹುನಿರೀಕ್ಷಿತ ನೈಋತ್ಯ ಮುಂಗಾರು ಮಾರುತಗಳು ಕೊನೆಗೂ ಕೇರಳಕ್ಕೆ ಅಧಿಕೃತವಾಗಿ ಪ್ರವೇಶ ಪಡೆದಿದ್ದು, ಕರ್ನಾಟಕದ ಕರಾವಳಿ ಭಾಗಕ್ಕೂ ಇಂದೇ ಮುಂಗಾರು ಅಪ್ಪಳಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಜ್ಯದಾದ್ಯಂತ ಮುಂದಿನ ಐದು ದಿನಗಳ ಕಾಲ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.
ಅರಬ್ಬಿ ಸಮುದ್ರ ಹಾಗೂ ಅಂಡಮಾನ್-ನಿಕೋಬಾರ್ ದ್ವೀಪ ಪ್ರದೇಶಗಳಲ್ಲಿ ಮುಂಗಾರು ಮುನ್ನಡೆಗೆ ಅನುಕೂಲಕರ ವಾತಾವರಣ ನಿರ್ಮಾಣವಾಗಿದ್ದು, ಕರಾವಳಿ ಕರ್ನಾಟಕದಲ್ಲಿ ಮಳೆಯ ಚಟುವಟಿಕೆಗಳು ಮತ್ತಷ್ಟು ತೀವ್ರಗೊಳ್ಳಲಿವೆ. ಗಾಳಿಯ ವೇಗದಲ್ಲಿ ಅಲ್ಪ ವ್ಯತ್ಯಾಸವಾದರೂ ಜೂನ್ 5ರೊಳಗೆ ಮುಂಗಾರು ಸಂಪೂರ್ಣ ರಾಜ್ಯವನ್ನು ಆವರಿಸಲಿದೆ ಎಂದು ಇಲಾಖೆ ಹೇಳಿದೆ.
ನೆರೆ ರಾಜ್ಯ ಕೇರಳದ ಹಲವು ಭಾಗಗಳಲ್ಲಿ ಮುಂದಿನ ಒಂದು ವಾರದಲ್ಲಿ 7ರಿಂದ 20 ಸೆಂ.ಮೀ.ವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಇದರ ಪರಿಣಾಮ ಕರ್ನಾಟಕ ಹಾಗೂ ತಮಿಳುನಾಡಿನ ಮೇಲೂ ಬೀಳಲಿದ್ದು, ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ವ್ಯಾಪಕ ಮಳೆಯಾಗಲಿದೆ.
ಭಾರೀ ಮಳೆ ಸಾಧ್ಯತೆ ಇರುವ ಜಿಲ್ಲೆಗಳು
ಕರಾವಳಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ಮೈಸೂರು, ಚಾಮರಾಜನಗರ, ಮಂಡ್ಯ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಮುಂದಿನ ಐದು ದಿನಗಳ ಕಾಲ ಭಾರೀ ಮಳೆ ಹಾಗೂ ಬಿರುಗಾಳಿ ಬೀಸುವ ಸಾಧ್ಯತೆ ಇದೆ.
ಉತ್ತರ ಕರ್ನಾಟಕದ ಜಿಲ್ಲೆಗಳಲ್ಲೂ ಸಾಧಾರಣದಿಂದ ಮಧ್ಯಮ ಪ್ರಮಾಣದ ಮಳೆಯಾಗುವ ನಿರೀಕ್ಷೆಯಿದ್ದು, ಜನರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಸೂಚಿಸಿದೆ.

