ಬೇಸಿಗೆಯ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ದೇಹವನ್ನು ತಂಪಾಗಿರಿಸಿಕೊಳ್ಳುವುದು ಅತ್ಯಗತ್ಯವಾಗಿದೆ. ಇಂತಹ ಸಂದರ್ಭದಲ್ಲಿ ಮಾರುಕಟ್ಟೆಯ ಕೃತಕ ಪಾನೀಯಗಳ ಬದಲಿಗೆ ನೈಸರ್ಗಿಕ ಹಾಗೂ ಆರೋಗ್ಯಕರ ಪಾನೀಯಗಳತ್ತ ಜನರು ಹೆಚ್ಚು ಒಲವು ತೋರುತ್ತಿದ್ದಾರೆ.
ಅವುಗಳಲ್ಲಿ ಬೇಲದ ಹಣ್ಣಿನ (ಬೆಲ್ಲದ ಹಣ್ಣು) ಶರಬತ್ ಪ್ರಮುಖ ಸ್ಥಾನ ಪಡೆದಿದೆ. ಔಷಧೀಯ ಗುಣಗಳನ್ನು ಹೊಂದಿರುವ ಈ ಪಾನೀಯವು ದೇಹಕ್ಕೆ ತಂಪು ನೀಡುವುದರ ಜೊತೆಗೆ ಜೀರ್ಣಕ್ರಿಯೆ ಸುಧಾರಿಸಲು ಮತ್ತು ತಕ್ಷಣದ ಶಕ್ತಿ ಒದಗಿಸಲು ಸಹಕಾರಿ ಎಂದು ಹೇಳಲಾಗುತ್ತದೆ.
ಬೇಕಾಗುವ ಸಾಮಗ್ರಿಗಳು
1 ಹಣ್ಣಾದ ಬೇಲದ ಹಣ್ಣು
200 ಗ್ರಾಂ ಸಕ್ಕರೆ
20 ಗ್ರಾಂ ಕಪ್ಪು ಉಪ್ಪು
ಅರ್ಧ ಲೀಟರ್ ನೀರು
8 ಐಸ್ ಕ್ಯೂಬ್‌ಗಳು
ತಯಾರಿಸುವ ವಿಧಾನ
ಮೊದಲು ಹಣ್ಣಾದ ಬೇಲದ ಹಣ್ಣನ್ನು ಒಡೆದು ಅದರ ತಿರುಳನ್ನು ಒಂದು ಪಾತ್ರೆಗೆ ತೆಗೆದುಕೊಳ್ಳಬೇಕು. ನಂತರ ಅದಕ್ಕೆ ಅರ್ಧ ಲೀಟರ್ ನೀರು ಸೇರಿಸಿ ಚೆನ್ನಾಗಿ ಕಿವುಚಬೇಕು. ಹೀಗೆ ಮಾಡಿದ ಬಳಿಕ ಮಿಶ್ರಣವನ್ನು ಸೋಸಿ ಬೀಜ ಮತ್ತು ನಾರನ್ನು ಬೇರ್ಪಡಿಸಬೇಕು.
ಸೋಸಿದ ರಸಕ್ಕೆ ಸಕ್ಕರೆ ಹಾಗೂ ಕಪ್ಪು ಉಪ್ಪು ಸೇರಿಸಿ ಸಕ್ಕರೆ ಸಂಪೂರ್ಣ ಕರಗುವವರೆಗೆ ಚೆನ್ನಾಗಿ ಕಲಸಬೇಕು. ನಂತರ ರಸವನ್ನು ಗ್ಲಾಸ್‌ಗಳಿಗೆ ಸುರಿದು ಐಸ್ ಕ್ಯೂಬ್‌ಗಳನ್ನು ಹಾಕಬೇಕು.
ಅಲಂಕಾರಕ್ಕಾಗಿ ನಿಂಬೆಹಣ್ಣಿನ ಸ್ಲೈಸ್, ಪುದೀನಾ ಎಲೆ ಅಥವಾ ಒಣಗಿಸಿದ ಬೇಲದ ಹಣ್ಣಿನ ತುಂಡುಗಳನ್ನು ಸೇರಿಸಿದರೆ ಇನ್ನಷ್ಟು ಆಕರ್ಷಕವಾಗಿ ಕಾಣುತ್ತದೆ.

