” ಪೆದ್ದಿ ” ಸಿನಿಮಾದಲ್ಲಿ ಮಿಂಚಿದ ರಾಮ್ ಚರಣ್ ; ಶಿವಣ್ಣನ ಪಾತ್ರಕ್ಕೂ ಜೈಕಾರ..!

0
70

ಹೈದರಾಬಾದ್ : ಪೆದ್ದಿ ಚಿತ್ರಮಂದಿರಗಳಲ್ಲಿ ಭರ್ಜರಿಯಾಗಿ ಬಿಡುಗಡೆಯಾಗಿದ್ದು, ಮೊದಲ ದಿನವೇ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ನಿರ್ದೇಶಕ Buchi Babu Sana ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸ್ಪೋರ್ಟ್ಸ್ ಡ್ರಾಮಾದಲ್ಲಿ ರಾಮ್‌ ಚರಣ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಜೂನ್ 3ರ ರಾತ್ರಿ ನಡೆದ ಪ್ರೀಮಿಯರ್ ಶೋಗಳ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಬಗ್ಗೆ ಅಭಿಮಾನಿಗಳು ಹಾಗೂ ಸಿನಿಪ್ರೇಮಿಗಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ವಿಶೇಷವಾಗಿ ರಾಮ್ ಚರಣ್ ಅವರ ಅಭಿನಯ, ಮಾಸ್ ಇಂಟ್ರೊಡಕ್ಷನ್ ಸೀನ್ ಹಾಗೂ ಕ್ರೀಡಾಪಟುವಿನ ಪಾತ್ರದ ನಿರ್ವಹಣೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಚಿತ್ರದಲ್ಲಿ ಅಥ್ಲೀಟ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಾಮ್ ಚರಣ್ ಅವರ ಪರ್ಫಾರ್ಮೆನ್ಸ್ ಪ್ರೇಕ್ಷಕರ ಮನಗೆದ್ದಿದ್ದು, ಹಲವರು ಅವರ ವೃತ್ತಿಜೀವನದ ಮತ್ತೊಂದು ಅತ್ಯುತ್ತಮ ಪಾತ್ರ ಎಂದು ಪ್ರಶಂಸಿಸಿದ್ದಾರೆ. ಸಂಗೀತ ನಿರ್ದೇಶಕ A. R. Rahman ಅವರ ಹಿನ್ನೆಲೆ ಸಂಗೀತವೂ ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಕನ್ನಡದ ಹಿರಿಯ ನಟ ಶಿವರಾಜ್‌ ಕುಮಾರ್ ಅವರ ಪಾತ್ರಕ್ಕೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಶಿವಣ್ಣನ ಅಭಿನಯವನ್ನು ಕೊಂಡಾಡಲಾಗುತ್ತಿದೆ.

ಎಕ್ಸ್ (ಟ್ವಿಟರ್) ತಾಣದಲ್ಲಿ ಪ್ರತಿಕ್ರಿಯೆ ನೀಡಿರುವ ಕೆಲ ಪ್ರೇಕ್ಷಕರು, “ಚಿತ್ರದ ಮೊದಲಾರ್ಧ ಉತ್ತಮವಾಗಿದೆ. ಪ್ರೀ-ಇಂಟರ್ವಲ್ ಮತ್ತು ಇಂಟರ್ವಲ್ ಬ್ಲಾಕ್ ಅದ್ಭುತವಾಗಿ ಮೂಡಿಬಂದಿದ್ದು, ರಾಮ್ ಚರಣ್ ಎಂಟ್ರಿ ಸೀನ್ ಮಾಸ್ ಆಗಿದೆ” ಎಂದು ಬರೆದುಕೊಂಡಿದ್ದಾರೆ. ಆದರೆ ನಾಯಕಿ ಹಾಗೂ ವಿಲನ್ ಟ್ರ್ಯಾಕ್ ನಿರೀಕ್ಷಿತ ಮಟ್ಟದಲ್ಲಿ ಪರಿಣಾಮ ಬೀರಿಲ್ಲ ಎಂಬ ಅಭಿಪ್ರಾಯಗಳೂ ವ್ಯಕ್ತವಾಗಿವೆ.

ಒಟ್ಟಾರೆ, ‘ಪೆದ್ದಿ’ ಸಿನಿಮಾ ಮೊದಲ ದಿನವೇ ಪಾಸಿಟಿವ್ ಟಾಕ್ ಪಡೆದುಕೊಂಡಿದ್ದು, ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆ ಮೂಡಿಸಿದೆ.

LEAVE A REPLY

Please enter your comment!
Please enter your name here