ನವಚೇತನ ಸೇವಾ ಬಳಗ (ರಿ.) ತೋಡಾರು ವತಿಯಿಂದ ಸರ್ಕಾರಿ ಶಾಲೆಗಳ 200ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ

0
4

ಅಮನಬೆಟ್ಟು, ಬೋರುಗುಡ್ಡೆ, ಕೋಟೆಬಾಗಿಲು, ಕೊಪ್ಪದಕುಮೇರ್, ಪಣಪಿಲ ಶಾಲೆಗಳಲ್ಲಿ ಪುಸ್ತಕ ವಿತರಣೆ ಮೂಲಕ ಶಿಕ್ಷಣಕ್ಕೆ ಪ್ರೋತ್ಸಾಹ

ಮೂಡುಬಿದಿರೆ: ಶಿಕ್ಷಣವು ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿಗೆ ಮಾತ್ರವಲ್ಲದೆ ಸಮಾಜದ ಪ್ರಗತಿಗೂ ಭದ್ರ ಅಡಿಪಾಯವಾಗಿದೆ ಎಂಬ ಧ್ಯೇಯವನ್ನು ಹೊಂದಿರುವ, ಸಮಾಜಸೇವಕರಾದ ಸುಕೇಶ್ ಜಿ. ಅಂಚನ್ ಅವರ ನೇತೃತ್ವದಲ್ಲಿ ಸ್ಥಾಪನೆಯಾದ ನವಚೇತನ ಸೇವಾ ಬಳಗ (ರಿ.) ತೋಡಾರು ವತಿಯಿಂದ ನವಚೇತನ ವಿದ್ಯಾನಿಧಿ ಯೋಜನೆಯಡಿ ಮಹಾವೀರ ಹಿರಿಯ ಪ್ರಾಥಮಿಕ ಶಾಲೆ ಅಮನಬೆಟ್ಟು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೋರುಗುಡ್ಡೆ, ಸರಕಾರಿ ಹಿರಿಯ ಪ್ರಾರ್ಥಮಿಕ ಶಾಲೆ ಕೋಟೆಬಾಗಿಲು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಪ್ಪದಕುಮೇರ್, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಣಪಿಲ ಈ ಐದು ಶಾಲೆಗಳ ವಿದ್ಯಾರ್ಥಿಗಳಿಗೆ ಉಚಿತ ಶಾಲಾ ಬರವಣಿಗೆ ಪುಸ್ತಕಗಳನ್ನು ವಿತರಿಸಲಾಯಿತು.

ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸುವುದು ಹಾಗೂ ಶಿಕ್ಷಣದ ಬಗ್ಗೆ ಹೆಚ್ಚಿನ ಆಸಕ್ತಿ ಮತ್ತು ಉತ್ತೇಜನ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣದ ಮಹತ್ವವನ್ನು ಮನಗಂಡು, ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ನೆರವಾಗುವ ದೃಷ್ಟಿಯಿಂದ ಪುಸ್ತಕಗಳನ್ನು ವಿತರಿಸಲಾಯಿತು. ಈ ಕಾರ್ಯವು ವಿದ್ಯಾರ್ಥಿಗಳು ಮತ್ತು ಪೋಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತು.

ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರು, ಸಿಬ್ಬಂದಿಗಳು, ಪೋಷಕರು, ವಿದ್ಯಾರ್ಥಿಗಳು ಭಾಗವಹಿಸಿ ಸಂಸ್ಥೆಯ ಈ ಸೇವಾ ಕಾರ್ಯವನ್ನು ಶ್ಲಾಘಿಸಿದರು. ಶಿಕ್ಷಣ ಕ್ಷೇತ್ರಕ್ಕೆ ನೀಡುತ್ತಿರುವ ಬೆಂಬಲಕ್ಕಾಗಿ ನವಚೇತನ ಸೇವಾ ಬಳಗದ ಕಾರ್ಯವನ್ನು ಅಭಿನಂದಿಸಿದರು. ಶಿಕ್ಷಣ ಕ್ಷೇತ್ರಕ್ಕೆ ಇಂತಹ ಸಹಾಯಗಳು ವಿದ್ಯಾರ್ಥಿಗಳಲ್ಲಿ ಕಲಿಕೆಯ ಉತ್ಸಾಹವನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲಾ ದಾನಿಗಳು, ಸದಸ್ಯರು, ಹಿತೈಷಿಗಳು ಹಾಗೂ ಶಾಲಾ ಆಡಳಿತ ಮಂಡಳಿಗೆ ಸಂಸ್ಥೆಯ ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು.

ಅಧ್ಯಕ್ಷರಾದ ದಾಮೋದರ ಮಿಜಾರು, ಗೌರವಾಧ್ಯಕ್ಷ ದಯಾನಂದ ಶೆಟ್ಟಿ, ಉಪಾಧ್ಯಕ್ಷರಾದ ಕಿರಣ್ ಕುಲಾಲ್, ಸುನೀಲ್ ಅಂಚನ್ ಮಾರ್ನಾಡ್ ಹಾಗೂ ಸದಸ್ಯರಾದ ದಿನಕರ ಮಾರ್ನಾಡ್, ಮಂಜುನಾಥ ಬೈಪಾಸ್, ದಿನಕರ ಪೂಜಾರಿ ಮಿಜಾರ್, ವಿಜಯ ದರಗುಡ್ಡೆ, ಅಶ್ವಥ್ ಪಣಪಿಲ, ಮುನಿರಾಜ್, ಪೂರ್ಣಿಮಾ ಕೋಟ್ಯಾನ್ ಮಾರ್ನಾಡ್ ಮತ್ತು ದೇವಿಕಾ ಪ್ರಸಾದ್ ವೇಣೂರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here