ವಿಶ್ವ ಪರಿಸರ ದಿನಾಚರಣೆ : ಪಲೆದು ಶಾಲೆಯಲ್ಲಿ ಗಿಡ ನೆಡುವ ಮೂಲಕ ಪರಿಸರ ಜಾಗೃತಿ

0
5

ಗುರುವಾಯನಕೆರೆ : ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಬಿಸಿ ಟ್ರಸ್ಟ್) ಗುರುವಾಯನಕೆರೆ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಪಲೆದು ಇವರ ಸಹಯೋಗದಲ್ಲಿ ಪರಿಸರ ಮಾಹಿತಿ ಮತ್ತು ಗಿಡ ನಾಟಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮವನ್ನು ತಾಲೂಕು ಯೋಜನಾಧಿಕಾರಿ ಹರೀಶ್ ಉದ್ಘಾಟಿಸಿ ಮಾತನಾಡಿ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು. “ಭೂಮಿ ತಾಯಿಯನ್ನು ರಕ್ಷಿಸಿ, ಮುಂದಿನ ಪೀಳಿಗೆಗೆ ವರ್ಗಾಯಿಸಿ” ಎಂಬ ಸಂದೇಶದೊಂದಿಗೆ ಪರಿಸರ ಸಂರಕ್ಷಣೆಯ ಮಹತ್ವವನ್ನು ವಿವರಿಸಿದರು.

ಪರಿಸರ ದಿನಾಚರಣೆಯಂತಹ ಕಾರ್ಯಕ್ರಮಗಳು ಜನರಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಪ್ರತಿಯೊಬ್ಬರೂ ಪರಿಸರದ ಬಗ್ಗೆ ಕಾಳಜಿ ವಹಿಸಿದರೆ ಸ್ವಚ್ಛ ಮತ್ತು ಆರೋಗ್ಯಕರ ವಾತಾವರಣ ನಿರ್ಮಾಣವಾಗುವುದರ ಜೊತೆಗೆ ಕಾಲಕಾಲಕ್ಕೆ ಉತ್ತಮ ಮಳೆಯಾಗಿ ಕೃಷಿಗೂ ಸಹಕಾರಿಯಾಗುತ್ತದೆ. ಇದರಿಂದ ರೈತರು ಹಾಗೂ ನಾಗರಿಕರ ಜೀವನದಲ್ಲಿ ಸಮೃದ್ಧಿಯ ವಾತಾವರಣ ಸೃಷ್ಟಿಯಾಗುತ್ತದೆ ಎಂದು ಹೇಳಿದರು.

ಶಾಲಾ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಬೆಳೆಸುವ ಉದ್ದೇಶದಿಂದ “ಒಂದು ಮಗು – ಒಂದು ಗಿಡ” ಎಂಬ ಪರಿಕಲ್ಪನೆಯಡಿ ಸಾಮೂಹಿಕ ಗಿಡ ನಾಟಿ ಕಾರ್ಯಕ್ರಮ ನಡೆಸಲಾಯಿತು. ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಯೋಜನೆಯ ಸದಸ್ಯರು ಉತ್ಸಾಹದಿಂದ ಭಾಗವಹಿಸಿ ಗಿಡಗಳನ್ನು ನೆಟ್ಟು ಪರಿಸರ ಸಂರಕ್ಷಣೆಯ ಸಂಕಲ್ಪ ಕೈಗೊಂಡರು.

LEAVE A REPLY

Please enter your comment!
Please enter your name here