ಕವಿ ಮಂದಾರರ ‘ಮಂದಾರ ರಾಮಾಯಣ’ಕ್ಕೆ ಗಮಕದ ಕಂಪು ; ಕರಾವಳಿಯಲ್ಲಿ ಸಾಂಸ್ಕೃತಿಕ ಇತಿಹಾಸ ಸೃಷ್ಟಿಸಲು ಸಜ್ಜಾದ ಸಪ್ತಾಹ!

0
28

ಮಂಗಳೂರು : ಕನ್ನಡ ಮತ್ತು ತುಳು ಎಂಬ ಎರಡು ಭಾಷೆಗಳಲ್ಲಿ ರಾಮಾಯಣ ಮಹಾಕಾವ್ಯವನ್ನು ರಚಿಸಿ ಸಾಹಿತ್ಯ ಲೋಕದಲ್ಲಿ ಅಚ್ಚಳಿಯದ ದಾಖಲೆ ಬರೆದ ಮೇರು ಕವಿ ಮಂದಾರ ಕೇಶವ ಭಟ್ಟರ ಸ ಅಮರ ಕೃತಿ “ಮಂದಾರ ರಾಮಾಯಣ”ಕ್ಕೆ ಈಗ ಗಮಕದ ಮೆರುಗು ಸಿಗಲಿದೆ.

ತುಳು ಮಹಾಕಾವ್ಯವನ್ನು ಗಮಕ ವಾಚನ-ವ್ಯಾಖ್ಯಾನದ ಮೂಲಕ ಜನಮನಕ್ಕೆ ತಲುಪಿಸುವ ಈ ವಿಶೇಷ ಸಪ್ತಾಹವು ಇಡೀ ನಾಡಿನ ಗಮನ ಸೆಳೆಯುತ್ತಿದೆ.

​ಕರ್ನಾಟಕ ಗಮಕ ಕಲಾ ಪರಿಷತ್ತು ಬೆಂಗಳೂರು, ಮತ್ತು ಮಂಗಳೂರು ತಾಲೂಕು ಘಟಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಿಟ್ಟೆ ವಿಶ್ವವಿದ್ಯಾಲಯದ ತುಳು ವಿಭಾಗ ಇದರ ಸಂಯುಕ್ತ ಆಶ್ರಯದಲ್ಲಿ, 2026ರ ಜೂನ್ 8ರಿಂದ ಜೂನ್ 14ರವರೆಗೆ (ಏಳು ದಿನಗಳು).ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ
ಪ್ರತಿದಿನ ಸಂಜೆ 5 ರಿಂದ 7:00 ರವರೆಗೆ ನಡೆಯಲಿದೆ ಎಂದು ಆಯೋಜಕರು ಆಮಂತ್ರಣ ಪತ್ರದಲ್ಲಿ ತಿಳಿಸಿದ್ದಾರೆ

‘ಅಧಿಕಸ್ಯ ಅಧಿಕಂ ಫಲಂ’ – ಅಧಿಕಮಾಸದ ಪುಣ್ಯಕಾಲದ ಮಹಾಕಾವ್ಯದ ಈ ಸಪ್ತಾಹದಲ್ಲಿ ನಾಡಿನ ಖ್ಯಾತ ಗಮಕಿಗಳು ಹಾಗೂ ಅರ್ಥದಾರಿಗಳು ಭಾಗವಹಿಸಿ, ಮಂದಾರ ರಾಮಾಯಣದ ಸಾರವನ್ನು ತಮ್ಮ ಗಾಯನ ಮತ್ತು ಅರ್ಥಗಾರಿಕೆಯ ಮೂಲಕ ಉಣಬಡಿಸಲಿದ್ದಾರೆ.

​ಗಮಕದ ಮೂಲಕ ‘ಮಂದಾರರ ‘ಅನಾವರಣ

​ವೃತ್ತಿಯಲ್ಲಿ ಅಧ್ಯಾಪಕರಾಗಿದ್ದರೂ ಪ್ರವೃತ್ತಿಯಲ್ಲಿ ಯಕ್ಷಗಾನದ ಭಾಗವತರಾಗಿ, ಅರ್ಥಧಾರಿಯಾಗಿ ಮಿಂಚಿದ್ದ ಮಂದಾರ ಕೇಶವ ಭಟ್ಟರು ಮಂಗಳೂರಿನ ಕುಡುಪು ಗ್ರಾಮದ ಮಂದಾರದವರು ಎಂಬುದು ಈ ನೆಲದ ಹೆಮ್ಮೆ.

​ದಶಕದ ತಪಸ್ಸು: –

ಮಂದಾರ ರಾಮಾಯಣವನ್ನು ರಚಿಸಲು ಅವರು ಸುಮಾರು 10 ವರ್ಷಗಳ ಕಾಲ ತುಳುನಾಡಿನ ಮೂಲೆ ಮೂಲೆಗಳಲ್ಲಿ ಸಂಚರಿಸಿ ಮಾಹಿತಿ ಸಂಗ್ರಹಿಸಿದ್ದರು. ಇಂತಹ ಶ್ರಮದ ಕೃತಿಯು ಈಗ ಗಮಕ ರೂಪದಲ್ಲಿ ಮೊಳಗುತ್ತಿರುವುದು ಸಾರ್ಥಕತೆಯ ಕ್ಷಣ.

​ಕೃಷ್ಣ ಕಥೆಯ ಕಂಪು:-

ರಾಮಾಯಣ ಮಾತ್ರವಲ್ಲದೆ ‘ಬೀರದ ಬೊಲ್ಪು’ ಎಂಬ ಕೃಷ್ಣನ ಕಥೆ ಹಾಗೂ ಹಲವಾರು ಯಕ್ಷಗಾನ ಪ್ರಸಂಗಗಳ ಮೂಲಕ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ ಸಂಪೂರ್ಣ ಕವಿ ಇವರು.

ವ್ಯವಸ್ಥೆಯ ಅಣಕದ ನಡುವೆ ಸಾಹಿತ್ಯದ ಕಿಚ್ಚು

​ಕವಿ ಮಂದಾರರ ನೆನಪುಗಳನ್ನು ಹೊತ್ತ ಪಾರಂಪರಿಕ ಕಟ್ಟಡವು ಇಂದು ಪಚ್ಚನಾಡಿ-ಮಂದಾರ ತ್ಯಾಜ್ಯ ದುರಂತದ ಕಾರಣದಿಂದ ಶಿಥಿಲಾವಸ್ಥೆಯಲ್ಲಿದೆ. ಇದು ವ್ಯವಸ್ಥೆಯ ಘೋರ ವೈಫಲ್ಯವನ್ನು ಸಾರಿ ಹೇಳುತ್ತಿದೆ.

ಈ ಸಂಕಷ್ಟದ ಕಾಲದಲ್ಲಿ ಅವರ ಸಾಹಿತ್ಯವನ್ನು ಗಮಕದ ಮೂಲಕ ಜನಪ್ರಿಯಗೊಳಿಸುವುದು ಕೇವಲ ಒಂದು ಕಾರ್ಯಕ್ರಮವಲ್ಲ, ಅದು ಕವಿಯ ಅಸ್ಮಿತೆಯನ್ನು ಉಳಿಸಿಕೊಳ್ಳುವ ಸಾಂಸ್ಕೃತಿಕ ಹೋರಾಟವೂ ಹೌದು.

​ ಸಂಸ್ಕೃತಿಯ ಸಂರಕ್ಷಣೆ ನಮ್ಮೆಲ್ಲರ ಹೊಣೆ

ಒಂದು ಭಾಷೆಯ ಉಳಿವು ಅದರ ಕಾವ್ಯದ ಆಲಿಸುವಿಕೆಯಲ್ಲಿರುತ್ತದೆ. ಕವಿ ಮಂದಾರರು ತುಳು ಭಾಷೆಗೆ ಮಹಾಕಾವ್ಯದ ಘನತೆಯನ್ನು ತಂದುಕೊಟ್ಟವರು. ಗಮಕ ಎಂಬ ಅದ್ಭುತ ಕಲೆಯ ಮೂಲಕ ನಮ್ಮ ಮಣ್ಣಿನ ಕಾವ್ಯವನ್ನು ಆಲಿಸುವುದು ಕೇವಲ ಪುಣ್ಯದ ಕೆಲಸವಲ್ಲ, ಅದು ನಮ್ಮ ಪರಂಪರೆಗೆ ನಾವು ಸಲ್ಲಿಸುವ ಗೌರವ.
​”ಮಂದಾರ ರಾಮಾಯಣ” ಕೇವಲ ಪುಸ್ತಕವಲ್ಲ, ಅದು ತುಳುನಾಡಿನ ಸಂಸ್ಕೃತಿಯ ವಿಶ್ವಕೋಶ. ಸರ್ಕಾರ ಮತ್ತು ಸಾರ್ವಜನಿಕರು ಕವಿಯ ಸ್ಮಾರಕಗಳ ಸಂರಕ್ಷಣೆಗೆ ಒತ್ತು ನೀಡಬೇಕು. ಸಾಹಿತ್ಯಾಭಿಮಾನಿಗಳು ಈ ಗಮಕ ಸಪ್ತಾಹದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಮಹಾಕವಿಯ ನೆನಪನ್ನು ಮತ್ತು ಅವರ ಸಾಹಿತ್ಯದ ಜ್ಯೋತಿಯನ್ನು ಮುಂದಿನ ಪೀಳಿಗೆಗೆ ದಾಟಿಸಬೇಕಿದೆ. ಕಸದ ದುರಂತದ ನಡುವೆಯೂ ಕಾವ್ಯದ ಪರಿಮಳ ಪಸರಿಸಲಿ.

ವರದಿ: ಸಾಹಿತ್ಯಾಭಿಮಾನಿಗಳ ಬಳಗ, ಮಂಗಳೂರು

LEAVE A REPLY

Please enter your comment!
Please enter your name here