ಹಣಕ್ಕಾಗಿ ಮಂಗಳಮುಖಿಯರ ವೇಷ ; ಮದುವೆ ಮನೆಯಲ್ಲಿ ಕಳಚಿತು ಅಸಲಿ ಮುಖವಾಡ..!

0
61

ಛಿಂದ್ವಾರಾ (ಮಧ್ಯಪ್ರದೇಶ) ಮದುವೆ ಹಾಗೂ ಇತರೆ ಶುಭ ಸಮಾರಂಭಗಳಲ್ಲಿ ಮಂಗಳಮುಖಿಯರ ವೇಷ ಧರಿಸಿ ಭಾರಿ ಮೊತ್ತದ ಹಣಕ್ಕೆ ಬೇಡಿಕೆ ಇಡುತ್ತಿದ್ದ ನಕಲಿ ಗ್ಯಾಂಗ್‌ವೊಂದರ ಮುಖವಾಡವನ್ನು ಗ್ರಾಮಸ್ಥರು ಬಯಲಿಗೆಳೆದ ಘಟನೆ ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯ ಪರಸಿಯಾ ಪ್ರದೇಶದ ದರ್ಬಾಯ್ ಗ್ರಾಮದಲ್ಲಿ ನಡೆದಿದೆ.

ಮದುವೆ ಸಮಾರಂಭವೊಂದರಲ್ಲಿ ಮಂಗಳಮುಖಿಯರಂತೆ ಉಡುಪು ಧರಿಸಿ, ಮೇಕಪ್ ಮಾಡಿಕೊಂಡು ಬಂದ ಕೆಲವರು ವಧು-ವರರ ಕುಟುಂಬದವರ ಬಳಿ ಹೆಚ್ಚಿನ ಹಣಕ್ಕಾಗಿ ಒತ್ತಾಯಿಸುತ್ತಿದ್ದರು. ಅವರ ವರ್ತನೆ ಮತ್ತು ಅತಿಯಾದ ಹಣದ ಬೇಡಿಕೆಯಿಂದ ಅನುಮಾನಗೊಂಡ ಗ್ರಾಮಸ್ಥರು ಸ್ಥಳೀಯ ಮಂಗಳಮುಖಿಯರ ಸಮುದಾಯದ ಮುಖಂಡರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಸಮುದಾಯದ ಸದಸ್ಯರು ಪರಿಶೀಲನೆ ನಡೆಸಿದಾಗ, ಅವರು ನಿಜವಾದ ಮಂಗಳಮುಖಿಯರಲ್ಲದೆ ಹಣಕ್ಕಾಗಿ ವೇಷಧರಿಸಿದ್ದ ಪುರುಷರು ಎಂಬುದು ಬೆಳಕಿಗೆ ಬಂದಿದೆ. ಈ ಸಂಗತಿ ತಿಳಿಯುತ್ತಿದ್ದಂತೆಯೇ ಸ್ಥಳದಲ್ಲಿದ್ದ ಜನರು ಹಾಗೂ ಮಹಿಳೆಯರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ವಂಚನೆಗೆ ಯತ್ನಿಸಿದವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಘಟನೆಯ ದೃಶ್ಯಗಳನ್ನು ಕೆಲವರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಇದೀಗ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಧಾರ್ಮಿಕ ನಂಬಿಕೆಗಳು ಮತ್ತು ಸಾಮಾಜಿಕ ಸಂಪ್ರದಾಯಗಳನ್ನು ದುರುಪಯೋಗಪಡಿಸಿಕೊಂಡು ಜನರನ್ನು ವಂಚಿಸಲು ಯತ್ನಿಸುವವರ ವಿರುದ್ಧ ಎಚ್ಚರಿಕೆಯಿಂದಿರಬೇಕೆಂಬ ಸಂದೇಶವೂ ಈ ಘಟನೆ ಮೂಲಕ ಹರಡುತ್ತಿದೆ.

ಸ್ಥಳೀಯರ ಮಾಹಿತಿಯ ಪ್ರಕಾರ, ಇದೇ ಗ್ಯಾಂಗ್ ಈ ಹಿಂದೆಯೂ ಜಿಲ್ಲೆಯ ವಿವಿಧ ಭಾಗಗಳಲ್ಲಿ ಮದುವೆ, ಗೃಹಪ್ರವೇಶ ಹಾಗೂ ಇತರ ಶುಭ ಸಮಾರಂಭಗಳಿಗೆ ಮಂಗಳಮುಖಿಯರ ವೇಷದಲ್ಲಿ ತೆರಳಿ ಸಾವಿರಾರು ರೂಪಾಯಿ ಹಣ ವಸೂಲಿ ಮಾಡಿರುವ ಶಂಕೆ ವ್ಯಕ್ತವಾಗಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here