ರಾಯಚೂರು : ತಂತ್ರಜ್ಞಾನ ಅಭಿವೃದ್ಧಿಯಾಗುತ್ತಿದ್ದಂತೆ ಸೈಬರ್ ವಂಚಕರ ತಂತ್ರಗಳೂ ಹೊಸ ರೂಪ ಪಡೆಯುತ್ತಿವೆ. ಅಪರಿಚಿತ ವ್ಯಕ್ತಿಗಳಿಂದ ಯುಪಿಐ ಮೂಲಕ ಹಣ ಪಡೆದು ಅವರಿಗೆ ನಗದು ನೀಡುವ ಮುನ್ನ ಸಾರ್ವಜನಿಕರು ಅತ್ಯಂತ ಎಚ್ಚರಿಕೆ ವಹಿಸಬೇಕೆಂಬ ಎಚ್ಚರಿಕೆಯನ್ನು ರಾಯಚೂರು ಜಿಲ್ಲೆಯ ಅರಕೇರಾದಲ್ಲಿ ನಡೆದ ಘಟನೆ ಮತ್ತೊಮ್ಮೆ ಸಾಬೀತುಪಡಿಸಿದೆ.
ಅರಕೇರಾ ಪಟ್ಟಣದಲ್ಲಿ ಕಾಮನ್ ಸರ್ವಿಸ್ ಸೆಂಟರ್ (CSC) ನಡೆಸುತ್ತಿದ್ದ ಮಲ್ಲಿಕಾರ್ಜುನ, ಮಹಾಂತೇಶ್ ಸೇರಿದಂತೆ ಮೂವರು ಯುವಕರು ಸೈಬರ್ ವಂಚಕರ ಬಲೆಗೆ ಸಿಲುಕಿದ್ದಾರೆ. ಮೆಡಿಕಲ್ ಎಮರ್ಜನ್ಸಿ ಇದೆ ಎಂದು ನಂಬಿಸಿದ ಇಬ್ಬರು ಅಪರಿಚಿತರು, ತಮ್ಮ ಫೋನ್‌ಪೇ ಮೂಲಕ ಹಣ ವರ್ಗಾವಣೆ ಮಾಡುವುದಾಗಿ ಹೇಳಿ ಅದಕ್ಕೆ ಪ್ರತಿಯಾಗಿ ನಗದು ಹಣ ನೀಡುವಂತೆ ಕೇಳಿದ್ದಾರೆ. ಜೊತೆಗೆ ಪ್ರತಿ ಸಾವಿರ ರೂಪಾಯಿಗೆ ಹತ್ತು ರೂಪಾಯಿ ಕಮಿಷನ್ ನೀಡುವುದಾಗಿ ಆಮಿಷವೊಡ್ಡಿದ್ದಾರೆ.
ಅವರ ಮಾತು ನಂಬಿದ ಯುವಕರು ಮೂರು ಮಳಿಗೆಗಳಲ್ಲಿ ಒಟ್ಟು ಸುಮಾರು 2.5 ಲಕ್ಷ ರೂಪಾಯಿ ಮೊತ್ತವನ್ನು ಫೋನ್‌ಪೇ ಮೂಲಕ ಸ್ವೀಕರಿಸಿ, ಅದೇ ಮೊತ್ತದ ನಗದನ್ನು ಅಪರಿಚಿತರಿಗೆ ನೀಡಿದ್ದಾರೆ. ಆದರೆ ಆ ಹಣ ಕದ್ದ ಮೊಬೈಲ್‌ನಿಂದ ವರ್ಗಾವಣೆಯಾಗಿತ್ತು ಎಂಬ ಸಂಗತಿ ಅವರಿಗೆ ತಿಳಿದಿರಲಿಲ್ಲ.
ಮೇ 25ರಂದು ರಾಯಚೂರಿನಿಂದ ಮಂತ್ರಾಲಯಕ್ಕೆ ತೆರಳುತ್ತಿದ್ದ ರಾಂಬಾಬು ಎಂಬುವವರ ಮೊಬೈಲ್ ಬಸ್ ಹತ್ತುವ ವೇಳೆ ಕಳ್ಳತನವಾಗಿತ್ತು. ಮೊಬೈಲ್ ಕದ್ದ ಕೆಲವೇ ಗಂಟೆಗಳಲ್ಲಿ ಕಳ್ಳರು ಆ ಫೋನ್‌ನಲ್ಲಿದ್ದ ಯುಪಿಐ ಸೌಲಭ್ಯ ಬಳಸಿ ಅರಕೇರಾದ ಸಿಎಸ್‌ಸಿ ಕೇಂದ್ರಗಳಿಗೆ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ. ಖಾತೆಯಿಂದ ನಿರಂತರವಾಗಿ ಹಣ ಕಡಿತವಾಗುತ್ತಿರುವ ಸಂದೇಶಗಳನ್ನು ಕಂಡ ರಾಂಬಾಬು ತಕ್ಷಣ ಸದರ ಬಜಾರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ತನಿಖೆ ಆರಂಭಿಸಿದ ಪೊಲೀಸರು ಹಣ ವರ್ಗಾವಣೆಯಾಗಿದ್ದ ಸಿಎಸ್‌ಸಿ ಕೇಂದ್ರಗಳ ಮಾಹಿತಿ ಸಂಗ್ರಹಿಸಿದ್ದು, ವಿಚಾರಣೆಯ ವೇಳೆ ಯುವಕರು ತಮ್ಮನ್ನು ಸಂಪರ್ಕಿಸಿದವರ ಬಗ್ಗೆ ಯಾವುದೇ ಮಾಹಿತಿ ಇಲ್ಲವೆಂದು ತಿಳಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಹಣ ಕಳೆದುಕೊಂಡ ರಾಂಬಾಬು ಹಾಗೂ ಹಣ ಸ್ವೀಕರಿಸಿ ನಗದು ನೀಡಿದ ಮಲ್ಲಿಕಾರ್ಜುನ, ಮಹಾಂತೇಶ್ ಸೇರಿದಂತೆ ಇತರರ ಬ್ಯಾಂಕ್ ಖಾತೆಗಳನ್ನು ತಾತ್ಕಾಲಿಕವಾಗಿ ಫ್ರೀಜ್ ಮಾಡಲಾಗಿದೆ.
ಈ ಘಟನೆಯಿಂದ ಅಮಾಯಕರಾಗಿ ವ್ಯವಹಾರ ನಡೆಸಿದ ಯುವಕರು ತೀವ್ರ ಆತಂಕಕ್ಕೆ ಒಳಗಾಗಿದ್ದು, ತಮ್ಮ ದೈನಂದಿನ ವ್ಯವಹಾರಗಳಿಗೂ ತೊಂದರೆ ಎದುರಿಸುತ್ತಿದ್ದಾರೆ. ಇತ್ತ ಸದರ ಬಜಾರ್ ಪೊಲೀಸರು ಮೊಬೈಲ್ ಕಳ್ಳರ ಪತ್ತೆಗೆ ಜಾಲ ಬೀಸಿದ್ದು, ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಸಾರ್ವಜನಿಕರು ಅಪರಿಚಿತ ವ್ಯಕ್ತಿಗಳಿಂದ ಯುಪಿಐ ಮೂಲಕ ಹಣ ಸ್ವೀಕರಿಸಿ ನಗದು ನೀಡುವ ವ್ಯವಹಾರಗಳಿಂದ ದೂರವಿರಬೇಕು. ಕಮಿಷನ್ ಅಥವಾ ತುರ್ತು ಅಗತ್ಯದ ನೆಪ ಹೇಳುವವರ ಮಾತುಗಳನ್ನು ನಂಬಿ ವ್ಯವಹಾರ ನಡೆಸಿದರೆ ಕಾನೂನು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

