ಉಡುಪಿ : ಸ್ಥಳೀಯ ಲಯನ್ಸ್ ಸಂಸ್ಥೆಯ ಆಡಳಿತ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯಾಗಿದ್ದು, ರೀಜನ್-6ರ ನೂತನ ವಲಯಾಧ್ಯಕ್ಷರಾಗಿ ಖ್ಯಾತ ಸಮಾಜಸೇವಕ ಹಾಗೂ ಸಂಘಟನಾ ಚತುರ ಎಂಜೆಎಫ್ ಪ್ರಶಾಂತ್ ಶೆಟ್ಟಿ ಬೈಲೂರು ಅವರು ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಲಯನ್ಸ್ ಜಿಲ್ಲಾ ಗವರ್ನರ್ ಕಚೇರಿಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ಬೈಲೂರು, ಅಜೆಕಾರು, ಬೆಳ್ಮಣ್ ಹಾಗೂ ಮುನಿಯಾಲು ಲಯನ್ಸ್ ಕ್ಲಬ್‌ಗಳನ್ನು ಒಳಗೊಂಡಿರುವ ರೀಜನ್-6ರ ಜವಾಬ್ದಾರಿಯನ್ನು ಪ್ರಶಾಂತ್ ಶೆಟ್ಟಿ ಅವರಿಗೆ ವಹಿಸಲಾಗಿದ್ದು, ಅವರ ಅನುಭವ, ನಾಯಕತ್ವ ಹಾಗೂ ಸಮಾಜಮುಖಿ ಕಾರ್ಯಗಳನ್ನು ಪರಿಗಣಿಸಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಪ್ರಶಾಂತ್ ಶೆಟ್ಟಿ ಅವರು ಈ ಹಿಂದೆ ನೀರೆ ಬೈಲೂರು ಲಯನ್ಸ್ ಕ್ಲಬ್‌ನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದರು. ಶಿಕ್ಷಣ, ಆರೋಗ್ಯ, ಪರಿಸರ ಸಂರಕ್ಷಣೆ ಹಾಗೂ ಜನಕಲ್ಯಾಣ ಚಟುವಟಿಕೆಗಳ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಲಯನ್ಸ್ ಸಂಸ್ಥೆಯ ಹೊರತಾಗಿಯೂ ಅವರು ಬೈಲೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ, ಶಿವಾಯ ಗೆಳೆಯರ ಬಳಗದ ಮುಖಂಡರಾಗಿ ಹಾಗೂ ವಿವಿಧ ಸಾಮಾಜಿಕ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಯುವಕರನ್ನು ಸಂಘಟಿಸಿ ಸಮಾಜಮುಖಿ ಚಟುವಟಿಕೆಗಳಿಗೆ ಪ್ರೇರೇಪಿಸುವಲ್ಲಿ ಅವರು ಮಹತ್ವದ ಪಾತ್ರ ವಹಿಸುತ್ತಿದ್ದಾರೆ.
ಧಾರ್ಮಿಕ ಕ್ಷೇತ್ರದಲ್ಲಿಯೂ ಸಕ್ರಿಯರಾಗಿರುವ ಪ್ರಶಾಂತ್ ಶೆಟ್ಟಿ ಅವರು ಬೈಲೂರು ಶ್ರೀ ಬೀದಿ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು, ದೇವಾಲಯದ ಅಭಿವೃದ್ಧಿ ಕಾರ್ಯಗಳಿಗೆ ಪ್ರಮುಖ ಕೊಡುಗೆ ನೀಡುತ್ತಿದ್ದಾರೆ.
ಅವರ ಸುದೀರ್ಘ ಸಾಮಾಜಿಕ ಅನುಭವ, ಸಂಘಟನಾ ಸಾಮರ್ಥ್ಯ ಹಾಗೂ ಜನಪರ ಕಾಳಜಿಯಿಂದ ರೀಜನ್-6ರ ವ್ಯಾಪ್ತಿಯ ಲಯನ್ಸ್ ಕ್ಲಬ್‌ಗಳ ಚಟುವಟಿಕೆಗಳಿಗೆ ಹೊಸ ಚೈತನ್ಯ ದೊರೆಯಲಿದ್ದು, ಸಮಾಜಮುಖಿ ಯೋಜನೆಗಳು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಲಿವೆ ಎಂದು ಲಯನ್ಸ್ ಪ್ರಮುಖರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

